ಸಾರಾಂಶ
ಬಸವರಾಜ ಹಿರೇಮಠ ಧಾರವಾಡ
ನಾಡಿನಲ್ಲಿರುವ ಪ್ರಾಣಿ-ಪಕ್ಷಿಗಳು ವಿವಿಧ ಮೂಲಗಳಿಂದ ನೀರಿನ ದಾಹ ತೀರಿಸಿಕೊಂಡರೆ, ಕಾಡಿನಲ್ಲಿರುವ ವನ್ಯಜೀವಿಗಳು ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಪರದಾಡುವುದು ಸಾಮಾನ್ಯ. ಈ ವರ್ಷದ ಬೇಸಿಗೆಯಲ್ಲೂ ಅವುಗಳಿಗೆ ಕುಡಿಯುವ ನೀರಿನ ಸಮಸ್ಯೆಯ ಮುನ್ಸೂಚನೆ ಅರಿತು ಅರಣ್ಯ ಇಲಾಖೆ ಅಧಿಕಾರಿಗಳು ಹೊಸ ರೀತಿಯಲ್ಲಿ ಅವುಗಳ ನೀರಿನ ದಾಹ ತೀರಿಸುವ ಕಾರ್ಯ ಮಾಡುತ್ತಿದ್ದಾರೆ.ಎರಡು ದಿನಗಳಿಂದ ಮಧ್ಯಾಹ್ನದ ನಂತರ ಮಳೆಯಾದರೂ ಬಿಸಿಲಿನ ತಾಪ ಮಾತ್ರ ಎಳ್ಳಷ್ಟು ಕಡಿಮೆಯಾಗಿಲ್ಲ. ಬಿಸಿಲಿನ ತಾಪ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿದ್ದು, ಅರಣ್ಯದಲ್ಲಿರುವ ವನ್ಯಜೀವಿಗಳು ಸಹ ಈ ಬಿಸಿಲಿನ ತಾಪದಿಂದ ಹೊರತಾಗಿಲ್ಲ. ನೀರು ಹಾಗೂ ಆಹಾರ ಅರಸಿ ವನ್ಯ ಮೃಗಗಳು ನಾಡಿಗೆ ಬರುವ ಅದೆಷ್ಟೋ ಉದಾಹರಣೆಗಳಿವೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವನ್ಯಜೀವಿಗಳಿಗಾಗಿಯೇ ನೀರಿನ ವ್ಯವಸ್ಥೆ ಮಾಡಿದೆ.
ಧಾರವಾಡ, ಕಲಘಟಗಿ, ಅಳ್ನಾವರ ತಾಲೂಕಿನಲ್ಲಿರುವ ರಕ್ಷಿತ ಅರಣ್ಯ ಪ್ರದೇಶದಲ್ಲಿ ಅನೇಕ ಕಡೆಗಳಲ್ಲಿ ಟ್ಯಾಂಕ್ ಹಾಗೂ ಸಣ್ಣ ಸಣ್ಣ ಕೆರೆಗಳನ್ನು ನಿರ್ಮಿಸಿ, ಅವುಗಳನ್ನು ತುಂಬಿಸುವ ಮೂಲಕ ವನ್ಯಮೃಗಗಳ ದಾಹ ತಣಿಸಲಾಗುತ್ತಿದೆ. ನೀರು ಖಾಲಿಯಾಗುತ್ತಿದ್ದಂತೆಯೇ ಟ್ಯಾಂಕರ್‌ಗಳ ಮೂಲಕ ನೀರು ಗುಂಡಿಗಳನ್ನು ತುಂಬಿಸಲಾಗುತ್ತಿದೆ.ವೈಜ್ಞಾನಿಕ ಗುಂಡಿಗಳು: ಅರೆ ಮಲೆನಾಡು ಧಾರವಾಡದಲ್ಲಿ ಶಾಶ್ವತ ಜಲಮೂಲಗಳಿಲ್ಲ. ಸಾಕಷ್ಟು ಪ್ರಮಾಣದಲ್ಲಿ ಅರಣ್ಯವಿದ್ದು, ಬಗೆ ಬಗೆಯ ವನ್ಯಜೀವಿಗಳಿವೆ. ಆದರೆ, ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಕೆರೆ ಕಟ್ಟೆಗಳು ಒಣಗಿ ಹೋಗುವುದರಿಂದ ವನ್ಯಜೀವಿ ಸಂಕುಲ ಸಂಕಷ್ಟಕ್ಕೆ ಸಿಲುಕುತ್ತವೆ. ಇದನ್ನು ಹಲವಾರು ವರ್ಷಗಳ ಹಿಂದೆಯೇ ಗಮನಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಬೇಸಿಗೆ ಆರಂಭದಲ್ಲಿಯೇ ನೀರಿನ ಗುಂಡಿಗಳನ್ನು ನಿರ್ಮಿಸಿದ್ದರು. ಅರಣ್ಯ ಮಧ್ಯದಲ್ಲಿ ಗುಂಡಿ ತೋಡಿ, ಅದಕ್ಕೆ ಪ್ಲಾಸ್ಟಿಕ್ ಹೊದಿಕೆ ಹೊದಿಸಿ, ಬಳಿಕ ಅದನ್ನು ನೀರಿನಿಂದ ತುಂಬಿಸಲಾಗುತ್ತಿತ್ತು. ಪ್ರಾಣಿಗಳು ದಾಹದಿಂದ ಬಳಲಿದ್ದರೂ ಈ ಗುಂಡಿಯೊಳಗೆ ಇಳಿಯಲು ಹಿಂದೇಟು ಹಾಕುತ್ತಿದ್ದವು. ಹೀಗಾಗಿ ಅಧಿಕಾರಿಗಳು ಹೊಸದಾಗಿ ವೈಜ್ಞಾನಿಕ ಗುಂಡಿಗಳ ನಿರ್ಮಾಣ ಮಾಡಿದ್ದಾರೆ. ಆ ಮೂಲಕ ವನ್ಯ ಮೃಗಗಳಿಗೆ ಅರಾಮವಾಗಿ ನೀರು ಕುಡಿಯುವಂತಾಗಿದೆ.
ಈ ಮುಂಚೆ ಮಾಡಿದ್ದ ಗುಂಡಿಯಲ್ಲಿ ಎರಡು ದಿನಕ್ಕಿಂತ ಹೆಚ್ಚಿಗೆ ನೀರು ನಿಲ್ಲುತ್ತಿರಲಿಲ್ಲ. ಪ್ರಾಣಿಯೊಂದು ನೀರು ಕುಡಿದು ಹೋಗುವಾಗ ಅದರ ಉಗುರು ತಾಗಿ ಪ್ಲಾಸ್ಟಿಕ್ ಹರಿದು, ನೀರು ಭೂಮಿಯಲ್ಲಿ ಇಂಗಿ ಹೋಗುತ್ತಿತ್ತು. ಅಲ್ಲದೇ ಪ್ರಾಣಿಗಳು ನೀರು ಕುಡಿಯಬೇಕಾದರೆ ಗುಂಡಿಯೊಳಗೆ ಇಳಿದೇ ಕುಡಿಯಬೇಕಿತ್ತು. ಇದರಿಂದಾಗಿ ಜಿಂಕೆ, ಮೊಲ, ಮಂಗ ಅಂತಹ ಚಿಕ್ಕ ದೇಹದ ಪ್ರಾಣಿಗಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿತ್ತು. ಗುಂಡಿಯೊಳಗೆ ಇಳಿದಾಗ ಉಳಿದ ವನ್ಯಮೃಗಗಳು ದಾಳಿ ಮಾಡುವ ಭಯವೂ ಅವುಗಳಿಗೆ ಕಾಡುತ್ತಿತ್ತು. ಇದನ್ನೆಲ್ಲ ಅರಿತ ಅಧಿಕಾರಿಗಳು ಹಲವಾರು ಸಣ್ಣ ಸಣ್ಣ ನೀರಿನ ತೊಟ್ಟಿಯನ್ನು ಸಿಮೆಂಟ್ ನಲ್ಲಿಯೇ ತಯಾರಿಸಿ, ಭೂಮಿಯಲ್ಲಿ ಹುಗಿಯಲಾಗಿದೆ. ಇನ್ನು ಪ್ರಾಣಿಗಳು ಹೆಚ್ಚಾಗಿರುವ ಪ್ರದೇಶದಲ್ಲಿ ದೊಡ್ಡ ಮಟ್ಟದ ಟ್ಯಾಂಕನ್ನು ವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಈ ತೊಟ್ಟಿ ನೆಲಸಮವಾಗಿ ಇರುವುದರಿಂದ ಪ್ರಾಣಿಗಳಿಗೆ ಗುಂಡಿಯಲ್ಲಿ ಬೀಳಬಹುದೆಂಬ ಭಯವೂ ಇಲ್ಲ. ಅಲ್ಲದೇ ನೀರಿನಲ್ಲಿ ಇಳಿದು ನೀರನ್ನು ಕುಡಿಯಲು ದೊಡ್ಡ ತೊಟ್ಟಿಗಳಿಗೆ ರ‍್ಯಾಂಪ್ ಮಾಡಲಾಗಿದೆ. ಇದರಿಂದ ಎಲ್ಲ ಪ್ರಾಣಿಗಳು ಯಾವುದೇ ಭಯವಿಲ್ಲದೇ ನೀರಿನಲ್ಲಿ ಇಳಿದು ನೀರನ್ನು ಕುಡಿಯುವಂತಾಗಿದೆ.ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಿಮಳಾ ಅವರು, ಪ್ರತಿ ಬಾರಿ ಬೇಸಿಗೆಯಲ್ಲಿ ಅರಣ್ಯದ ಪ್ರಾಣಿಗಳಿಗೆ ಕುಡಿಯುವ ನೀರಿನ ಕೊರತೆಯಾಗುತ್ತದೆ. ಹೀಗಾಗಿ ನೀರು ಅರಸಿ ಪ್ರಾಣಿಗಳು ಬರುವ ಸ್ಥಳಗಳಲ್ಲಿ ಕಳೆದ ಹಲವು ದಿನಗಳಿಂದ ಅರಣ್ಯ ಇಲಾಖೆ ಸಿಬ್ಬಂದಿ ಅವುಗಳಿಗೆ ಕುಡಿಯಲು ನೀರು ತುಂಬಿಸುತ್ತಿದ್ದಾರೆ. ವನ್ಯಮೃಗಗಳು ನೀರನ್ನರಸಿ ಬಂದು ಕುಡಿಯುತ್ತಿದ್ದು ನಮ್ಮ ಕಾರ್ಯ ಯಶಸ್ವಿಯಾಗಿದೆ ಎಂದರು.
ನಿತ್ಯವೂ ಅನೇಕ ಬಗೆಯ ಪ್ರಾಣಿ-ಪಕ್ಷಿಗಳು ಬಂದು ಈ ಗುಂಡಿಗಳಲ್ಲಿನ ನೀರು ಕುಡಿದು ಹೋಗುತ್ತಿವೆ. ಕ್ಯಾಮೇರಾಗಳ ಮೂಲಕ ಅವುಗಳನ್ನು ಸೆರೆ ಸಹ ಹಿಡಿದು ಮಾಹಿತಿ ಸಂಗ್ರಹಿಸಲಾಗಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಚಿರತೆ, ಕರಡಿ, ಕಾಡು ಹಂದಿ, ನರಿ, ನವಿಲು, ಮಂಗಗಳು ಸೇರಿದಂತೆ ಅನೇಕ ಪ್ರಾಣಿ-ಪಕ್ಷಿಗಳು ಬಂದು ನೀರು ಕುಡಿದು ಹೋಗಿರುವ ಬಗ್ಗೆ ದಾಖಲಾಗಿದೆ. ಒಟ್ಟಿನಲ್ಲಿ ನೀರಿನ ದಾಹದಿಂದ ಪರದಾಡುತ್ತಿದ್ದ ವನ್ಯಮೃಗಳಿಗೆ ಅರಣ್ಯ ಇಲಾಖೆಯ ಈ ಕಾರ್ಯ ಪ್ರಾಣಿ-ಪಕ್ಷಿಗಳಿಗೆ ನೆಮ್ಮದಿ ತಂದಿರುವುದು ಸತ್ಯ.ಅರಣ್ಯದ ಪ್ರಾಣಿಗಳಿಗೆ ನೀರಿಡುವ ನಮ್ಮ ಕಾರ್ಯಕ್ಕೆ ಅನೇಕ ಪರಿಸರ ಪ್ರೇಮಿಗಳು ಸಹಾಯ ಹಸ್ತ ಚಾಚಿದ್ದು ಹೊಸ ಸಂಗತಿ. ಅನೇಕರು ಮಂಗ, ನರಿ, ಅಳಿಲು, ಪಕ್ಷಿಗಳಿಗಾಗಿ ಸಿಮೆಂಟ್‌ನ ಸಣ್ಣ ಸಣ್ಣ ಟ್ಯಾಂಕ್‌ಗಳನ್ನು ನೀಡಿದ್ದಾರೆ. ಅವುಗಳನ್ನು ಅಲ್ಲಲ್ಲಿ ನೆಲದಲ್ಲಿ ಹೂಳಿದ್ದು, ನಿತ್ಯವೂ ಅವುಗಳಿಗೆ ನೀರನ್ನು ತುಂಬಿಸಲಾಗುತ್ತಿದೆ. ದೊಡ್ಡ ಕೆರೆ, ಟ್ಯಾಂಕ್‌ಗಳಿಂದ ದೂರ ಇರುವ ಪ್ರಾಣಿಗಳು ನಿತ್ಯವೂ ಬಂದು ಈ ಸಣ್ಣ ಟ್ಯಾಂಕ್‌ಗಳಲ್ಲಿನ ನೀರನ್ನು ಕುಡಿದು ತಮ್ಮ ದಾಹವನ್ನು ಇಂಗಿಸಿಕೊಳ್ಳುತ್ತಿದ್ದು, ಸಮಾಧಾನ ತಂದಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿವಿವೇಕ ಕವರಿ ಹೇಳಿದ್ದಾರೆ.