ಲೋಕಾಯುಕ್ತಕ್ಕೆ ದೂರು ನೀಡುವುದಾಗಿ ಸಾರ್ವಜನಿಕ ಸೇವಾ ಕೇಂದ್ರದ ಮುಖ್ಯಸ್ಥ ಧೀರಜ ಹೇಳಿಕೆ
ಕನ್ನಡಪ್ರಭ ವಾರ್ತೆ ಯಲ್ಲಾಪುರಪಟ್ಟಣದ ಮನೆಯೊಂದರಲ್ಲಿ ಅಕ್ರಮ ಕಟ್ಟಿಗೆ ದಾಸ್ತಾನು ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾದ ಕುರಿತು, ಅವರ ವಿರುದ್ಧ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಲೋಕಾಯುಕ್ತಕ್ಕೆ ದೂರು ನೀಡಲಾಗುವುದೆಂದು ಸಾರ್ವಜನಿಕ ಸೇವಾ ಕೇಂದ್ರದ ಮುಖ್ಯಸ್ಥ ಧೀರಜ ತಿನೆಕರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಟ್ಟಣದ ಟಿಳಕ ಚೌಕದ ದಿಲೀಪ ಗುಡಿಗಾರ ಎಂಬವರ ಮನೆ ಹಾಗೂ ವರ್ಕ್ಶಾಪ್‌ನಲ್ಲಿ ಕಳ್ಳತನದಿಂದ ತಂದ ಸಾಗವಾನಿ ಹಾಗೂ ಸೀಸಂ ಕಟ್ಟಿಗೆಗಳು ೪೦ ಸಿ.ಎಫ್.ಟಿಗಿಂತ ಹೆಚ್ಚು ದಾಸ್ತಾನು ಇರುವ ಕುರಿತು ಕಳೆದ ಜ. ೧೬ರಂದು ಶಿರಸಿಯ ಅರಣ್ಯ ಸಂಚಾರಿ ದಳದ ಆರ್.ಎಫ್.ಒ ಶಿಲ್ಪಾ ನಾಯ್ಕ ಅವರಿಗೆ ಮಾಹಿತಿ ನೀಡಲಾಗಿತ್ತು. ಆದರೆ, ಸ್ಥಳಕ್ಕೆ ಬಂದ ಅವರು, ಸ್ಥಳೀಯ ಫಾರೆಸ್ಟರ್ ಅವರನ್ನೂ ಕರೆಸಿಕೊಂಡು ಕಟ್ಟಿಗೆ ಹಿಡಿದು ತನಿಖೆ ಆರಂಭಿಸಿದ್ದರು. ಮೂರು ದಿನಗಳ ನಂತರ ಎಫ್.ಐ.ಆರ್ ಬಗ್ಗೆ ಕೇಳಿದಾಗ ಮಾಡಿದ್ದೇವೆ ಎಂದಿದ್ದು, ಎಫ್.ಐ.ಆರ್ ಪ್ರತಿ ಕೇಳಿದರೆ ಕೊಡಲು ನಿರಾಕರಿಸಿದ್ದಾರೆ. ಈ ಬಗ್ಗೆ ಮತ್ತೆ ಕೇಳಿದಾಗ ನಿಮಗೆ ಮಾಹಿತಿ ನೀಡಲು ಸಾಧ್ಯವಿಲ್ಲ, ಬೇಕಾದರೆ ಹಿರಿಯ ಅಧಿಕಾರಿಗಳನ್ನು ಕೇಳಿ ಎಂದು ಆರ್.ಎಫ್.ಒ ಜಾರಿಕೊಂಡಿದ್ದರು.ನಂತರ ಸಂಚಾರಿ ದಳದ ಡಿಸಿಎಫ್ ಅವರಲ್ಲಿ ಕೇಳಿದಾಗ ಈ ಪ್ರಕರಣದ ಬಗ್ಗೆ ಅವರಿಗೆ ನನಗೆ ಮಾಹಿತಿಯಿಲ್ಲ. ಮಾಹಿತಿ ಪಡೆಯುತ್ತೇನೆ ಎಂದ ಅವರು, ಮಾರನೇ ದಿನ ಸಂಪರ್ಕಿಸಿದರೆ ಸರಿಯಾದ ಉತ್ತರ ನೀಡಲಿಲ್ಲ ಎಂದು ತಿನೇಕರ್ ಆರೋಪಿಸಿದರು.
ನಾವು ಪದೇ ಪದೇ ಕೇಳುತ್ತಿರುವ ಕಾರಣಕ್ಕಾಗಿ ನ್ಯಾಯಾಲಯದ ಅನುಮತಿ ಪಡೆದು ಜ. ೨೦ರ ನಂತರ ಎಫ್.ಐ.ಆರ್ ದಾಖಲಿಸಿದ್ದಾರೆ. ಕೇವಲ ೯ ಸಿ.ಎಫ್.ಟಿ ಮಾತ್ರ ಸಿಕ್ಕಿರುವುದಾಗಿ ಹಾಗೂ ದಿಲೀಪ ಗುಡಿಗಾರ ಮನೆಯಲ್ಲಿ ಕಟ್ಟಿಗೆ ಸಿಕ್ಕಿದೆ ಎಂದು ನಮೂದಿಸಲಾಗಿದೆ.
ಕೇವಲ ಮನೆಯಲ್ಲಿ ಸಿಕ್ಕಿದೆ ಎಂದು ಹೇಳಲಾಗಿದ್ದು, ವರ್ಕ್ಶಾಪ್‌ನಲ್ಲಿದ್ದ ಕಟ್ಟಿಗೆಯ ಪ್ರಸ್ತಾಪ ಎಫ್.ಐ.ಆರ್.ನಲ್ಲಿಲ್ಲ. ಮನೆ ಕಟ್ಟಲು ಇಟ್ಟುಕೊಂಡ ಕಟ್ಟಿಗೆ ಎಂದು ಹೇಳಿ ಅಧಿಕಾರಿಗಳು ಕಟ್ಟಿಗೆಯನ್ನು ಮರಳಿ ನೀಡಿ ಹೋಗಿದ್ದಾರೆ. ೪೦ ಸಿ.ಎಫ್.ಟಿ ಗಿಂತ ಹೆಚ್ಚಿನ ಕಟ್ಟಿಗೆ ಇರುವ ಬಗ್ಗೆ ಮಾಹಿತಿ ನೀಡಿದರೂ ಪೂರ್ಣಪ್ರಮಾಣದಲ್ಲಿ ವಶಪಡಿಸಿಕೊಂಡಿಲ್ಲ. ಕೇವಲ ನಮ್ಮ ಕಣ್ಣಿಗೆ ಬಣ್ಣ ಬಳಿಯುವ ನಿಟ್ಟಿನಲ್ಲಿ ತನಿಖೆ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.
₹೩.೫೦ ಲಕ್ಷ ಲಂಚ ಪಡೆದು ಅರಣ್ಯ ಇಲಾಖೆಯ ಅಧಿಕಾರಿಗಳು ಈ ಕೇಸಿಗೆ ತೇಪೆ ಹಚ್ಚುವ ಕಾರ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಧೀರಜ್, ಸಂಚಾರಿ ದಳದ ಡಿಸಿಎಫ್, ಆರ್.ಎಫ್.ಒ ಹಾಗೂ ಸ್ಥಳೀಯ ಡಿ.ಆರ್.ಎಫ್.ಓ ವಿರುದ್ಧ ತನಿಖೆ ಆಗಬೇಕು. ಈ ಕುರಿತು ಲೋಕಾಯುಕ್ತ ಹಾಗೂ ಅರಣ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಿಗೆ, ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದೆಂದು ತಿಳಿಸಿದ್ದಾರೆ.ಸಾರ್ವಜನಿಕರು ಮನೆಯಲ್ಲಿ ಅಕ್ರಮವಾಗಿ ಕಟ್ಟಿಗೆ ಸಂಗ್ರಹಿಸಿಟ್ಟುಕೊಂಡಾಗ, ಅರಣ್ಯ ಇಲಾಖೆಯವರು ದಾಳಿ ನಡೆಸಿದರೆ, ಅವರಿಗೆ ಲಂಚ ಕೊಟ್ಟು ಕಳುಹಿಸಿದರೆ ಕಟ್ಟಿಗೆ ಸಕ್ರಮವಾದಂತೆ ಎಂಬ ವಿಚಾರವನ್ನು ಈ ಪ್ರಕರಣದಿಂದ ಸಾರ್ವಜನಿಕರಿಗೆ ಒಂದು ಕಾನೂನು ರೀತ್ಯಾ ಅಧಿಕಾರಿಗಳು ಅನುಕೂಲ ಮಾಡಿದ್ದಾರೆಂದು ವ್ಯಂಗ್ಯವಾಡಿದರು. ಇಷ್ಟಾದರೂ ಸ್ಥಳೀಯ ಹಿರಿಯ ಅಧಿಕಾರಿಗಳ ಗಮನಕ್ಕೆ ಬಾರದೇ ಇರುವುದು ಆಶ್ಚರ್ಯ ತಂದಿದೆ ಎಂದು ತಿಳಿಸಿದ್ದಾರೆ.