ಬಿರು ಬೇಸಿಗೆ ನಡುವೆ ಕಾಡ್ಗಿಚ್ಚಿನಿಂದ ಅರಣ್ಯ ರಕ್ಷಣೆ

| Published : May 05 2024, 02:01 AM IST

ಬಿರು ಬೇಸಿಗೆ ನಡುವೆ ಕಾಡ್ಗಿಚ್ಚಿನಿಂದ ಅರಣ್ಯ ರಕ್ಷಣೆ
Share this Article
  • FB
  • TW
  • Linkdin
  • Email

ಸಾರಾಂಶ

ಅರಣ್ಯಗಳನ್ನು ಕಾಡ್ಗಿಚ್ಚಿನಿಂದ ರಕ್ಷಿಸುವಲ್ಲಿ ಅರಣ್ಯ ಅಧಿಕಾರಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಕಾಡ್ಗಿಚ್ಚಿನ ಬಗ್ಗೆ ಮುನ್ನೆಚ್ಚರಿಕಾ ಕ್ರಮದಲ್ಲಿ ನಿರತರಾಗಿದ್ದಾರೆ.

ವಿಶೇಷ ವರದಿ ಕನ್ನಡಪ್ರಭ ವಾರ್ತೆ ಕುಶಾಲನಗರ

ಈ ಬಾರಿಯ ಬಿರು ಬೇಸಿಗೆಯ ಬಿಸಿಲಿನ ನಡುವೆ ಕುಶಾಲನಗರ ತಾಲೂಕಿನ ವ್ಯಾಪ್ತಿಯ ಅರಣ್ಯಗಳನ್ನು ಕಾಡ್ಗಿಚ್ಚಿನಿಂದ ರಕ್ಷಿಸುವಲ್ಲಿ ಅರಣ್ಯ ಅಧಿಕಾರಿ ಸಿಬ್ಬಂದಿ ಸಂಪೂರ್ಣ ಯಶಸ್ವಿಯಾಗಿದ್ದಾರೆ.

ಕಳೆದ ಎರಡು ತಿಂಗಳ ಅವಧಿಯಲ್ಲಿ ಕುಶಾಲನಗರ ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಯ ಮೀಸಲು ಅರಣ್ಯ ಸೇರಿದಂತೆ ದುಬಾರೆ, ಮೀನು ಕೊಲ್ಲಿ ಅರಣ್ಯಗಳ ವ್ಯಾಪ್ತಿಯ ಸುಮಾರು 13 ಸಾವಿರಕ್ಕೂ ಅಧಿಕ ಹೆಕ್ಟೇರ್ ವ್ಯಾಪ್ತಿಯ ಅರಣ್ಯ ಪ್ರದೇಶಗಳಲ್ಲಿ ವಿಶೇಷ ನಿಗಾ ವಹಿಸಿ ಯಾವುದೇ ರೀತಿಯ ಅಗ್ನಿ ಅನಾಹುತಗಳು ನಡೆದಂತೆ ಕುಶಾಲನಗರ ವಲಯ ಅರಣ್ಯ ಅಧಿಕಾರಿ ರತನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಕಟ್ಟುನಿಟ್ಟಿನ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

ಈ ಮೂಲಕ ಅರಣ್ಯ ಸಂಪತ್ತು ಹಾಗೂ ಪ್ರಾಣಿ ಪಕ್ಷಿಗಳ ಸಂಕುಲಗಳ ರಕ್ಷಣೆ ಮಾಡುವಲ್ಲಿ ಇಲಾಖೆ ಅಧಿಕಾರಿ ಸಿಬ್ಬಂದಿ ಯಶಸ್ಸು ಕಂಡಿದ್ದಾರೆ.

ಫೆಬ್ರವರಿ ಆರಂಭದಲ್ಲೇ ಕಾಡಿನ ಗಡಿ ಏಕೆ ಸ್ವಚ್ಛತೆ ಮಾಡುವ ಮೂಲಕ ಲೈನ್ ಕ್ಲಿಯರೆನ್ಸ್ ಮಾಡುವ ಕೆಲಸವನ್ನು ಸಿಬ್ಬಂದಿ ಕೈಗೆತ್ತಿಕೊಂಡಿದ್ದರು. ನಂತರ ಸೂಕ್ಷ್ಮ ಪ್ರದೇಶಗಳಲ್ಲಿ ಬೆಳಗಿನಿಂದ ಸಂಜೆ ತನಕ ಇಲಾಖೆಯ ಸಿಬ್ಬಂದಿ ಸ್ಥಳದಲ್ಲಿಯೇ ಠಿಕಾಣಿ ಹೂಡಿ ಯಾವುದೇ ರೀತಿಯ ಬೆಂಕಿ ಅನಾಹುತಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ರತನ್ ಕುಮಾರ್ ತಿಳಿಸಿದ್ದಾರೆ.

ಆಕಸ್ಮಿಕ ಬೆಂಕಿ ತಗಲಿದಲ್ಲಿ ಕಾಡಿನ ಒಳಗೆ ತೆರಳಲು ರಸ್ತೆ ಸಂಪರ್ಕ ವ್ಯವಸ್ಥೆ, ನೀರಿನ ವ್ಯವಸ್ಥೆ ಹಾಗೂ ನೀರಿನ ಟ್ಯಾಂಕ್ ಮೂಲಕ ಸ್ಪ್ರೇಯರ್ ಗಳನ್ನು ಸದಾ ಸನ್ನದ್ಧವಾಗಿ ಇರಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಇಲಾಖೆಯ ಸಿಬ್ಬಂದಿ ಸೇರಿದಂತೆ ಆರ್ ಆರ್ ಟಿ ತಂಡದ ಸದಸ್ಯರು ಕೂಡ ಕಾಡ್ಗಿಚ್ಚಿನ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕಾರ್ಯದಲ್ಲಿ ನಿರತರಾಗಿದ್ದರು.

ಇನ್ನೊಂದೆಡೆ ಅರಣ್ಯದ ಒಳಭಾಗದಲ್ಲಿ ಇರುವ ಕೆರೆಗಳು ಬತ್ತಿ ಹೋಗದಂತೆ ಕಳೆದ ಮೂರು ವರ್ಷಗಳ ಹಿಂದೆಯೇ ಕೆರೆಗಳ ಹೂಳೆತ್ತುವ ಕೆಲಸ ನಡೆದಿತ್ತು. ಈ ಕಾರಣದಿಂದ ಅತ್ತೂರು, ದುಬಾರೆ ಮತ್ತಿತರ ವ್ಯಾಪ್ತಿಯಲ್ಲಿ ಕೆರೆಗಳು ನೀರಿನಿಂದ ಪ್ರಾಣಿ ಪಕ್ಷಿಗಳಿಗೆ ಯಾವುದೇ ತೊಂದರೆ ಉಂಟಾಗಿಲ್ಲ ಎಂದು ರತನ್ ಕುಮಾರ್ ತಿಳಿಸಿದ್ದಾರೆ.

ಕಾವೇರಿ ನದಿ ಬತ್ತಿದರೂ ಅರಣ್ಯದ ಒಳಭಾಗದಲ್ಲಿದ್ದ ಕೆರೆಗಳಲ್ಲಿ ಮಾತ್ರ ನೀರಿನ ಪ್ರಮಾಣ ಮಾತ್ರ ಬತ್ತಿ ಹೋಗಿರಲಿಲ್ಲ.

ಮುಂದಿನ ದಿನಗಳಲ್ಲಿ ಮೀಸಲು ಅರಣ್ಯಗಳಲ್ಲಿ ಅಗತ್ಯವಿರುವ ಕಡೆಗಳಲ್ಲಿ ಸೋಲಾರ್ ವಿದ್ಯುತ್ ಬಳಸಿ ಕೊಳವೆ ಬಾವಿಗಳ ನಿರ್ಮಾಣ ಮಾಡುವ ಕಾರ್ಯ ಯೋಜನೆ ಇದೆ ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಕನ್ನಡ ಪ್ರಭಕ್ಕೆ ಮಾಹಿತಿ ನೀಡಿದ್ದಾರೆ. ಇಲಾಖೆಯ ಜೊತೆಗೆ ಜನರ ಸಹಭಾಗಿತ್ವ ಕೂಡ ಅರಣ್ಯ ಪ್ರದೇಶಗಳ ಸಂರಕ್ಷಣೆಗೆ ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಈ ನಡುವೆ ಅರಣ್ಯ ಅಧಿಕಾರಿಗಳಿಗೆ ಹೆಚ್ಚಿನ ದಿನಗಳಲ್ಲಿ ಆನೆ ಮಾನವ ಸಂಘರ್ಷ, ಹುಲಿ ಕಾರ್ಯಾಚರಣೆ ಮುಂತಾದ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕಾದ ಅನಿವಾರ್ಯತೆ ಕೂಡ ಎದುರಾಗಿತ್ತು.

ಕಾರ್ಯಾಚರಣೆ ಸಂದರ್ಭ ದುಬಾರೆ ಮೀಸಲು ಅರಣ್ಯದ ಉಪವಲಯ ಅರಣ್ಯ ಅಧಿಕಾರಿ ಕನ್ನಂಡ ರಂಜನ್ ಅವರಿಗೆ ಹೆಜ್ಜೇನು ದಾಳಿ ನಡೆಯುವುದರೊಂದಿಗೆ ಆಸ್ಪತ್ರೆ ಸೇರಿದ ಘಟನೆಯು ನಡೆದಿತ್ತು. ಹೆಚ್ಚಿನ ಕಡೆ ಸಿಬ್ಬಂದಿ ಕೊರತೆ ಕೂಡ ಎದುರಾಗಿದೆ.

ದುಬಾರೆ ಮೀಸಲು ಅರಣ್ಯ ವ್ಯಾಪ್ತಿಯ ಸುಮಾರು 5 ಸಾವಿರ ಹೆಕ್ಟೇರ್ ಅರಣ್ಯವನ್ನು ಉಪವಲಯ ಅಧಿಕಾರಿ ಕನ್ನಂಡ ರಂಜನ್ ಅವರ ಉಸ್ತುವಾರಿಯಲ್ಲಿ ಸಿಬ್ಬಂದಿ ಮುನ್ನೆಚ್ಚರಿಕೆ ವಹಿಸಿದ್ದಾರೆ. ಆನೆಕಾಡು ವ್ಯಾಪ್ತಿಯ ಸುಮಾರು ನಾಲ್ಕು ಸಾವಿರ ಹೆಕ್ಟೇರ್ ವ್ಯಾಪ್ತಿಯ ಪ್ರದೇಶದ ಅರಣ್ಯವನ್ನು ಉಪವಲಯ ಅರಣ್ಯ ಅಧಿಕಾರಿ ಕೆ ಎನ್ ದೇವಯ್ಯ, ಮೀನು ಕೊಲ್ಲಿ ಅರಣ್ಯ ಉಪ ವಿಭಾಗದ ಸುಮಾರು 2500 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಅಲ್ಲಿನ ಅಧಿಕಾರಿ ಕೂಡಕಂಡಿ ಸುಬ್ರಾಯ ಮತ್ತು ಅತ್ತೂರು ಮೀಸಲು ಅರಣ್ಯ ವಲಯದ 2500 ಹೆಕ್ಟೇರ್ ಅಧಿಕ ಅರಣ್ಯ ಪ್ರದೇಶವನ್ನು ಉಪ ವಲಯ ಅರಣ್ಯ ಅಧಿಕಾರಿ ಅನಿಲ್ ಡಿ ಸೋಜ ಅವರ ನೇತೃತ್ವದಲ್ಲಿ ಸಿಬ್ಬಂದಿ ಸಂಪೂರ್ಣ ಮುನ್ನೆಚ್ಚರಿಕೆ ವಹಿಸುವುದರೊಂದಿಗೆ ಕಾಡ್ಗಿಚ್ಚು ಹಬ್ಬದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಇಲಾಖೆಯ ಅಧಿಕಾರಿ ಸಿಬ್ಬಂದಿ ಮಳೆ ಬಿದ್ದಿರುವ ಕಾರಣ ನಿಟ್ಟುಸಿರು ಬಿಟ್ಟಿದ್ದಾರೆ.

ಈ ಮೂಲಕ ವಲಯದ ಅರಣ್ಯದ ಪ್ರಾಕೃತಿಕ ಸಂಪತ್ತು ಹಾಗೂ ಪ್ರಾಣಿ ಪಕ್ಷಿಗಳ ಸಂಕುಲಗಳನ್ನು ರಕ್ಷಿಸುವ ಕೆಲಸದಲ್ಲಿ ಇಡೀ ಅರಣ್ಯ ಇಲಾಖೆ ಕಾರ್ಯ ಯೋಜನೆ ಯಶಸ್ಸು ಕಂಡಿದೆ.

ಇದೀಗ ಕೆಲವೆಡೆ ಅಲ್ಲಲ್ಲಿ ಬಹುತೇಕ ಮಳೆ ಬಿದ್ದಿರುವ ಹಿನ್ನೆಲೆಯಲ್ಲಿ ಅರಣ್ಯಕ್ಕೆ ಬೆಂಕಿ ತಗಲುವ ಅಪಾಯ ತಪ್ಪಿದ್ದು ಕೆಲವೆಡೆ ಕಾವಲು ಕಾಯುವ ಕೆಲಸ ಮುಂದುವರಿದಿದೆ.