ಗದಗ ತಾಲೂಕಿನ ಬಿಂಕದಕಟ್ಟಿಯ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಶುಕ್ರವಾರ ಕರ್ನಾಟಕ ಅರಣ್ಯ ಇಲಾಖೆಯ ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಗದಗ: ಅರಣ್ಯ ರಕ್ಷಕರು ದೇಶದ ಸೈನಿಕರಿದ್ದಂತೆ, ದೇಶದ ಗಡಿಯನ್ನು ಕಾಯಲು ಸೈನಿಕರಿರುವಂತೆ, ನಾಡಿನ ಪ್ರಾಕೃತಿಕ ಸಂಪತ್ತನ್ನು ಕಾಯುವ ಗುರುತರ ಜವಾಬ್ದಾರಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಸಿ.ಎಸ್. ಶಿವನಗೌಡ್ರ ತಿಳಿಸಿದರು.

ತಾಲೂಕಿನ ಬಿಂಕದಕಟ್ಟಿಯ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಶುಕ್ರವಾರ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ ಅಂಗವಾಗಿ ನಾಡಿನ ಅರಣ್ಯ ಸಂಪತ್ತನ್ನು ರಕ್ಷಿಸಲು ಪ್ರಾಣ ತ್ಯಾಗ ಮಾಡಿದ ಕರ್ನಾಟಕ ಅರಣ್ಯ ಇಲಾಖೆಯ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 1980ರ ಅರಣ್ಯ ಸಂರಕ್ಷಣಾ ಕಾಯ್ದೆಗೆ ನೈಜ ಬಲ ಬಂದದ್ದು ಸುಪ್ರೀಂ ಕೋರ್ಟ್‌ನ ಟಿ.ಎನ್. ಗೋದಾವರ್ಮನ್ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಮುಖ ಪ್ರಕರಣದ ತೀರ್ಪಿನ ನಂತರ. ಈ ತೀರ್ಪು ಅರಣ್ಯ ಇಲಾಖೆಗೆ ಅತ್ಯಂತ ಶಕ್ತಿಯುತ ಬೆಂಬಲವಾಗಿ ನಿಂತಿದೆ. ಕರ್ನಾಟಕ ಅರಣ್ಯ ಕಾಯ್ದೆಯ ಸೆಕ್ಷನ್ 62ರ ಅಡಿಯಲ್ಲಿ ಅರಣ್ಯ ಅಧಿಕಾರಿಗಳಿಗೆ ಪೊಲೀಸ್ ಅಧಿಕಾರಿಗಳಂತೆಯೇ ಅಧಿಕಾರ ಮತ್ತು ರಕ್ಷಣೆ ನೀಡಲಾಗಿದೆ. ಸರ್ಕಾರಿ ದಾಖಲೆಗಳಲ್ಲಿ ಅರಣ್ಯ ಎಂದು ನಮೂದಾಗಿರುವ ಯಾವುದೇ ಜಾಗವನ್ನು ಕೇಂದ್ರ ಸರ್ಕಾರದ ಅನುಮತಿಯಿಲ್ಲದೆ ಅನ್ಯ ಉದ್ದೇಶಕ್ಕೆ ಬಳಸಲು ಸಾಧ್ಯವಿಲ್ಲ ಎಂದರು.

ಅರಣ್ಯ ರಕ್ಷಣೆ ಮತ್ತು ಕಳ್ಳಸಾಗಣೆ ತಡೆಯುವಂತಹ ಅಪಾಯಕಾರಿ ಸಂದರ್ಭಗಳಲ್ಲಿ ಪ್ರಾಣ ತೆತ್ತ ಹುತಾತ್ಮರ ಕುಟುಂಬಗಳಿಗೆ ಸೂಕ್ತ ಪರಿಹಾರ, ಬೆಂಬಲ ಹಾಗೂ ಪುನರ್ವಸತಿ ಕಲ್ಪಿಸುವುದು ಮತ್ತು ಅವರೊಂದಿಗೆ ನಾವಿದ್ದೇವೆ ಎಂಬ ಭರವಸೆ ನೀಡುವುದು ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್‌ ಮಾತನಾಡಿ, ನಾಡಿನ ಪ್ರಾಕೃತಿಕ ಹಾಗೂ ಅರಣ್ಯ ಸಂಪತ್ತನ್ನು ರಕ್ಷಿಸುವ ಕಾಯಕದಲ್ಲಿ ತಮ್ಮ ಜೀವವನ್ನೇ ಬಲಿಕೊಟ್ಟ ಕರ್ನಾಟಕ ಅರಣ್ಯ ಇಲಾಖೆಯ ವೀರ ಸಿಬ್ಬಂದಿ ಹಾಗೂ ಅಧಿಕಾರಿಗಳ ನೆನಪಿನಲ್ಲಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ ಆಚರಿಸಲಾಗುತ್ತಿದ್ದು, ಅರಣ್ಯ ಸಂರಕ್ಷಣೆಗೆ ಪ್ರಾಣತ್ಯಾಗ ಮಾಡಿದ ಹುತಾತ್ಮರ ತ್ಯಾಗ ಅಪಾರ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ ಕೆಂಚಪ್ಪನವರ ಮಾತನಾಡಿ, ಅರಣ್ಯ ಸಂರಕ್ಷಣೆ ಎಂಬುದು ಕೇವಲ ಅರಣ್ಯ ಇಲಾಖೆಯ ಜವಾಬ್ದಾರಿಯಷ್ಟೇ ಅಲ್ಲ, ಸಾರ್ವಜನಿಕರು ಹಾಗೂ ಇತರ ಇಲಾಖೆಗಳು ಒಗ್ಗೂಡಿ ಶ್ರಮಿಸಿದಾಗ ಮಾತ್ರ ಕಾಡನ್ನು ಉಳಿಸಲು ಸಾಧ್ಯ ಎಂದರು.

ಕಾಡು ನನ್ನದು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಬರಬೇಕು. ಈ ಹಿಂದೆ ಕಳ್ಳಸಾಗಣೆ ಹಾಗೂ ಕಾಡುಗಳ್ಳರ ದಾಳಿಯಿಂದ ಹುತಾತ್ಮರಾಗುವವರ ಸಂಖ್ಯೆ ಹೆಚ್ಚಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಇಲಾಖೆಯ ಸಂರಕ್ಷಣಾ ಪ್ರಯತ್ನಗಳಿಂದಾಗಿ ವನ್ಯಜೀವಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಭಾರತ ದೇಶದಲ್ಲೇ ಅತಿ ಹೆಚ್ಚು ಆನೆಗಳು, ಎರಡನೇ ಅತಿ ಹೆಚ್ಚು ಹುಲಿಗಳು ಹಾಗೂ ಮೂರನೇ ಅತಿ ಹೆಚ್ಚು ಚಿರತೆಗಳು ಕರ್ನಾಟಕದಲ್ಲಿವೆ ಎಂದು ಹೇಳಿದರು.

ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್., ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಗದಗ ಸಾಮಾಜಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಚಂದ್ರಹಾಸ ವರ್ಣೇಕರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಮಡ್ಲೂರ, ಗದಗ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹಾಂತೇಶ್ ಪೊಲೀಸ್ ಪಾಟೀಲ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಮನ್ ನಾಯಕ, ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ವೀರೇಂದ್ರ ಮರಿಬಸಣ್ಣವರ, ಮುಂಡರಗಿ ಕಪ್ಪತ್ತ್ ಹಿಲ್ಸ್ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಮಂಜುನಾಥ ಆರ್. ಮೇಗಲಮನಿ, ಶಿರಹಟ್ಟಿ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ರೇಣುಕಮ್ಮ ಎ., ರವೀಂದ್ರ ಕರ್ನಾಳ ಇದ್ದರು.