ಸಾರಾಂಶ
ತಾಲೂಕಿನ ಕಾನೂರು ಗ್ರಾಮದಲ್ಲಿ ಕಳೆದ ಒಂದು ತಿಂಗಳಿಂದ ಕಾಡಾನೆಗಳ ಕಾಟ ವಿಪರೀತವಾಗಿದ್ದು, ಫಸಲಿಗೆ ಬಂದ ಅಡಿಕೆ ಮತ್ತು ಬಾಳೆ ತೋಟವನ್ನು ಧ್ವಂಸ ಮಾಡುತ್ತಿವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ತಾಲೂಕಿನ ಕಾನೂರು ಗ್ರಾಮದಲ್ಲಿ ಕಳೆದ ಒಂದು ತಿಂಗಳಿಂದ ಕಾಡಾನೆಗಳ ಕಾಟ ವಿಪರೀತವಾಗಿದ್ದು, ಫಸಲಿಗೆ ಬಂದ ಅಡಿಕೆ ಮತ್ತು ಬಾಳೆ ತೋಟವನ್ನು ಧ್ವಂಸ ಮಾಡುತ್ತಿವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.ಕಾನೂರು ಗ್ರಾಮದ ಬಾಳೆ ಹಿತ್ತಲು ಎಸ್ಟೇಟಿನ ಗುರುಪ್ರಸಾದ್ ಮತ್ತು ಮರುಳಪ್ಪ ಅವರ ತೋಟಕ್ಕೆ ನುಗ್ಗಿದ ಕಾಡಾನಗಳು ಕಾಫಿ, ಅಡಿಕೆ, ಬಾಳೆ ಗಿಡಗಳನ್ನು ಹಾಳು ಮಾಡಿವೆ. ಅಲ್ಲದೇ ಕಾನೂರು ಗ್ರಾಮದ ವೆಂಕಟೇಶ, ಶಾರದಮ್ಮ ಹಾಗೂ ರಾಮಣ್ಣರ ತೋಟದಲ್ಲೂ ಕಾಡಾನೆಗಳು ಹಾವಳಿ ಮಾಡಿವೆ. ರಾತ್ರಿ ಸಮಯದಲ್ಲಿ ತೋಟಗಳಿಗೆ ನುಗ್ಗುವ ಕಾಡಾನೆಗಳು ಹಗಲು ಸಮಯದಲ್ಲಿ ಸಮೀಪದ ಅಗಳಿ ಕಾಡಿನೊಳಗೆ ಅಡಗಿ ಕುಳಿತುಕೊಳ್ಳುತ್ತವೆ. ಕಾಡಾನೆಗಳ ಕಾಟದಿಂದ ಗ್ರಾಮಸ್ಥರು ಕಂಗಾಲಾಗಿದ್ದು, ಕೂಲಿ ಕಾರ್ಮಿಕರು ತೋಟಗಳಿಗೆ ಕೆಲಸಕ್ಕೆ ಹೋಗುವುದಕ್ಕೂ ಭಯಪಡುವಂತಾಗಿದೆ. ರಬ್ಬರ್ ತೋಟಗಳಲ್ಲಿ ಬೆಳಗಿನ ಜಾವ ಟ್ಯಾಪಿಂಗ್ ಮಾಡಬೇಕಾಗುತ್ತದೆ. ಆನೆಗಳ ಕಾಟದಿಂದ ರಬ್ಬರ್ ಟ್ಯಾಂಪರುಗಳೂ ಸಹ ಭಯ ಭೀತರಾಗಿದ್ದಾರೆ. ಕಾಡಾನೆಗಳಿಂದ ಯಾವುದೇ ಪ್ರಾಣ ಹಾನಿ ಅಥವಾ ಅತಾಚುರ್ಯಗಳು ನಡೆಯುವ ಮುನ್ನ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಕಾಡಾನೆಗಳು ನಾಡಿಗೆ ಬಾರದಂತೆ ಕ್ರಮ ವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.