ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಪಾಲಿಕೆ ವ್ಯಾಪ್ತಿಯ 479 ಉದ್ಯಾನವನಗಳಲ್ಲಿ ಹೊರಗಿರುವ, ಸಣ್ಣ ಪುಟ್ಟ 79 ಉದ್ಯಾನವನಗಳೇ ನಾಪತ್ತೆಯಾಗಿದ್ದು, ಭೂಗಳ್ಳರು ಹಾಗೂ ಪಾಲಿಕೆಯ ಕಂದಾಯ ವಿಭಾಗದ ಕೆಲ ಅಧಿಕಾರಿಗಳು ನಕಲಿ ದಾಖಲೆಗಳ ಸೃಷ್ಟಿಸಿ, ಅಮಾಯಕರಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಗಿರೀಶ ಎಸ್.ದೇವರಮನಿ ಆರೋಪಿಸಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಲವು ವಾರ್ಡ್ ಗಳ ಸಣ್ಣಪುಟ್ಟ ಉದ್ಯಾನವನಗಳಿಗೂ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅಮಾಯಕ ಜನರಿಗೆ ಮಾರಾಟ ಮಾಡಲಾಗಿದೆ. ವಾರ್ಡ್ ನಂ.23ರ ಶಾಬನೂರು ಗ್ರಾಮದ ರಿ.ಸ.ನಂ.78-2ರ ಪೈಕಿ 2 ಎಕರೆ ಪ್ರದೇಶವನ್ನು ಚಿತ್ರದುರ್ಗ ಜಿಲ್ಲಾಧಿಕಾರಿಗಳಿಂದ ವಾಸದ ಉಪಯೋಗಕ್ಕಾಗಿ ಅಲಿನೇಷನ್ ಮಾಡಿಸಿ, ಡೈರೆಕ್ಟರ್ ಆಫ್ ಟೌನ್ ಪ್ಲಾನಿಂಗ್ ನಿಂದ ಡೋರ್ ನಂಬರ್ ನೀಡಲಾಗಿದೆ ಎಂದರು.
ಅನುಮೋದನೆಯಾದ ನಕ್ಷೆಯ ಖಾಲಿ ಜಾಗಕ್ಕೆ ಹೆಚ್ಚುವರಿಯಾದಿ ಉಪ ಆಸ್ತಿ ನಂಬರ್ ನೀಡಿ, ಎಂಎಆರ್-19, ಕೆಎಂಎಫ್-24 ಪುಸ್ತಕದಲ್ಲಿ ವಿಷಯ ನಿರ್ವಾಹಕರು ಪಾಲಿಕೆ ಮತ್ತು ಕಂದಾಯ ಅಧಿಕಾರಿಗಳು ಖಾತೆ ತೆರೆದು, ಖಾತಾ ಹಿಂಬರದ ನೀಡಿ, ನೋಂದಣಿ ಪ್ರಕ್ರಿಯೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಒಟ್ಟು 30-40 ಅಳತೆಯ 4 ಖಾಲಿ ನಿವೇಶನಗಳು ಬೇರೆ ಬೇರೆ ಹೆಸರಿಗೆ ನೋಂದಣಿಯಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಇಂದಿನ ಮೌಲ್ಯವೇ ಕೋಟ್ಯಾಂತರ ರು.ಗಳಾಗಿವೆ ಎಂದು ದೂರಿದರು.ವಾರ್ಡ್ ನಂ.28ರ ಭಗತ್ ಸಿಂಗ್ ನಗರ ನಿಟುವಳ್ಳಿ ಗ್ರಾಮದ ರಿ.ಸ.ನಂ.123-5ರ ಪೈಕಿ 2.38 ಎಕರೆ ಪ್ರದೇಶಕ್ಕೆ ನಗರ ಯೋಜನಾ ಪ್ರಾಧಿಕಾರ ದಾವಣಗೆರೆ-ಹರಿಹರ ಸ್ಥಳೀಯ ಯೋಜನ ಪ್ರದೇಶದಡಿ ಅಂತಿಮ ಅನುಮೋದನೆಯಾಗಿರುವ ನಕ್ಷೆಯ ಪಾರ್ಕ್‌ನ ಖಾಲಿ ಜಾಗಕ್ಕೆ ಹೆಚ್ಚುವರಿಯಾಗಿ ಉಪ ಆಸ್ತಿ ನಂಬರ್ ನೀಡಿ, ಪಾಲಿಕೆ ಮತ್ತು ಕಂದಾಯ ಅಧಿಕಾರಿಗಳು ಪಾಲಿಕೆ ನೋಂದಣಿ ಪ್ರಕ್ರಿಯೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.
ಉದ್ಯಾನವನಗಳು, ಸಿಎ ಸೈಟ್‌ಗಳಿಗೆ ಸರ್ಕಾರದಿಂದ ಮೀಸಲಿಟ್ಟಿರುವ ಹಲವಾರು ನಿವೇಶನಗಳೂ ಕೆಲ ಭ್ರಷ್ಟ ಅಧಿಕಾರಿಗಳು, ಸಿಬ್ಬಂದಿ ಸಹಕಾರದಿಂದ ಭೂಗಳ್ಳರ ಕೈಗೆ ಸಿಕ್ಕ ಅಮಾಯಕರಿಗೆ ಮಾರಾಟ ಮಾಡಿ, ಜನರು ಲಕ್ಷಾಂತರ ರು. ಕಳೆದುಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು, ಜನ ಪ್ರತಿನಿಧಿಗಳು ಸಮಗ್ರ ತನಿಖೆ ಕೈಗೊಂಡು, ಒತ್ತುವರಿಯಾದ ಮೀಸಲು ಸರ್ಕಾರಿ ನಿವೇಶನಗಳನ್ನು ವಶಕ್ಕೆ ಪಡೆದು, ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಡಬೇಕು ಎಂದು ಒತ್ತಾಯಿಸಿದರು.ಪಾಲಿಕೆ ವ್ಯಾಪ್ತಿಯ ಭೂಗಳ್ಳರು, ಪಾಲಿಕೆಯ ಕೆಲ ಭ್ರಷ್ಟ ಕಂದಾಯ ಅಧಿಕಾರಿ, ಸಿಬ್ಬಂದಿಗಳು ನಕಲಿ ದಾಖಲೆ ಸೃಷ್ಟಿಸಿ, ಅಮಾಯಕರಿಗೆ ಮೋಸ ಮಾಡಿರುವ ಪ್ರಕರಣಗಳ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಹಾಗೂ ಮಹಾ ನಗರ ಪಾಲಿಕೆ ನಿರ್ಲಕ್ಷ್ಯದ ವಿರುದ್ಧ ಹೈಕೋರ್ಟ್ ಮೊರೆ ಹೋಗುವುದಾಗಿ ಗಿರೀಶ ದೇವರಮನಿ ಎಚ್ಚರಿಸಿದರು.
ಕರುನಾಡ ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಟಿ.ಗೋಪಾಲಗೌಡ, ಪರಿಸರ ಸಂರಕ್ಷಣಾ ವೇದಿಕೆಯ ನಾಗರಾಜ ಸುರ್ವೆ, ಪ್ರಸನ್ನ ಬೆಳಕೆರೆ, ಮಾರುತಿ, ಪ್ರವೀಣ ಇತರರಿದ್ದರು.