ಸಾರಾಂಶ
ಕೇಂದ್ರ ಮಂಜೂರು ಮಾಡಿದ್ದ 5300 ಕೋಟಿ ಕೂಡಲೇ ಒದಗಿಸುವಂತೆ ಒತ್ತಾಯಿಸಲು ಸಲಹೆ
ಕನ್ನಡಪ್ರಭ ವಾರ್ತೆ ಸಿರಿಗೆರೆ
ಭರಮಸಾಗರ ಮತ್ತು ಜಗಳೂರು ಏತ ನೀರಾವರಿ ಯೋಜನೆಗಳಿಗಿಂತ ಮುಂಚಿತವಾಗಿಯೇ ಮಂಜೂರಾಗಿದ್ದ ಭದ್ರಾ ಮೇಲ್ಡಂಡೆ ಯೋಜನೆ ಕಾಮಗಾರಿ ನಿಧಾನಗತಿಯಲ್ಲಿ ಮುಂದುವರಿದಿದೆ. ಇದಕ್ಕೆ ರಾಜಕೀಯ ನಾಯಕರ ನಿರಾಸಕ್ತಿ ಕಾರಣವಾಗಿದೆ. ಕೇಂದ್ರ ಸರ್ಕಾರ ಈ ಯೋಜನೆಗೆ ಮಂಜೂರು ಮಾಡಿದ್ದ ₹5300 ಕೋಟಿ ಕೂಡಲೇ ಒದಗಿಸುವಂತೆ ರಾಜ್ಯದ ಎಲ್ಲಾ ಸಂಸದರು ಪಕ್ಷಬೇಧ ಮರೆತು ಕೇಳಬೇಕು ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ತಾಕೀತು ಮಾಡಿದರು.ಭರಮಸಾಗರದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಅಂಗವಾಗಿ ಮಂಗಳವಾರ ನಡೆದ ಕೃಷಿ ಮೇಳ ಮತ್ತು ರೈತ ಸಂವಾದ ಸಮಾವೇಶದಲ್ಲಿ ಆಶೀರ್ವಚನ ನೀಡಿದ ಶ್ರೀಗಳು ಈ ವಿಚಾರದಲ್ಲಿ ರಾಜ್ಯದ ಸಂಸದರು ಒಗ್ಗಟ್ಟು ತೋರಬೇಕು ಎಂದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಫಸಲ್ ಭಿಮಾ ಯೋಜನೆ ಮೇಲ್ನೋಟಕ್ಕೆ ಚೆನ್ನಾಗಿದೆ. ಆದರೆ ಅದು ಹಲವು ದೋಷಗಳಿಂದ ಕೂಡಿದೆ. ಬೆಳೆ ನಷ್ಟಕ್ಕೆ ಪರಿಹಾರ ಒದಗಿಸಲು ಆ ರೈತರ ೭ ವರ್ಷಗಳ ಬೆಳೆಯ ಸರಾಸರಿ ಲೆಕ್ಕಕ್ಕೆ ತೆಗೆದುಕೊಳ್ಳುವುದು ದೊಡ್ಡ ದೋಷ. ಈ ವಿಚಾರವನ್ನು ಕೈಬಿಟ್ಟು ಪ್ರತಿ ವರ್ಷದ ಬೆಳೆಯ ನಷ್ಟವನ್ನಷ್ಟೇ ಗಣನೆಗೆ ತೆಗೆದುಕೊಳ್ಳಬೇಕು. ಇದರಿಂದ ರೈತರಿಗೆ ನೆರವಾಗುತ್ತದೆ ಎಂದರು.ಈಗಿರುವ ಕ್ರಾಪ್ ಕಟಿಂಗ್ ಎಕ್ಸ್‌ಪೆರಿಮೆಂಟ್ ದೋಷಪೂರಿತವಾಗಿರುವುದರಿಂದ ಅದನ್ನು ನಿಬಂಧನೆಯಿಂದ ಕೈಬಿಡಬೇಕು. ಉಪಗ್ರಹ ಆಧಾರಿತ ತಂತ್ರಜ್ಞಾನ ಬಳಸಿಕೊಂಡು ರೈತನ ಜಮೀನಿನ ನಷ್ಟ ದಾಖಲಿಸುವ ಪದ್ಧತಿಯನ್ನು ಜಾರಿಗೊಳಿಸಬೇಕು ಎಂದು ಶ್ರೀಗಳು ಒತ್ತಾಯಿಸಿದರು.
ರೈತರ ಬೇಡಿಕೆಗಳ ವಿಚಾರವಾಗಿ ನಡೆಯುವ ಚಳವಳಿಗಳಿಂದ ಯಾವುದೇ ಉಪಯೋಗವಾಗುವುದಿಲ್ಲ. ಮಾಹಿತಿಯನ್ನು ಸರಿಯಾಗಿ ಸಂಗ್ರಹಿಸಿ ಅದನ್ನು ಅಧಿಕಾರಿಗಳು ಮತ್ತು ಸರ್ಕಾರದ ಮುಂದೆ ಮಂಡಿಸಿ ಕೆಲಸ ಮಾಡಿಸಿಕೊಳ್ಳಬೇಕು. ನಾವು ಯಾವುದೇ ರಾಜಕೀಯ ಪಕ್ಷವನ್ನು ವಹಿಸಿಕೊಳ್ಳದೇ ಇರುವುದರಿಂದ ಎಲ್ಲ ಸರ್ಕಾರಗಳು ಜನಹಿತದ ದೃಷ್ಟಿಯಿಂದ ನಾವು ಕೇಳುವ ಯೋಜನೆಗಳನ್ನು ಮಂಜೂರು ಮಾಡುತ್ತಾ ಬಂದಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಮಹಂತ ರುದ್ರಸ್ವಾಮೀಜಿ, ರಾಜೇಂದ್ರಸಿಂಗ್, ಎಚ್.ಆಂಜನೇಯ, ಟಿ.ರಘುಮೂರ್ತಿ, ಮಲ್ಲಿಕಾರ್ಜುನ ಗುಂಗೆ, ವೆಂಕಟ ಸುಬ್ರಹ್ಮಣೈಮ, ಆನಂದ ಮಲ್ಲಿಗಾವಾಡ ಮುಂತಾದವರು ಭಾಗವಹಿಸಿದ್ದರು.