ಚಿತ್ರದುರ್ಗ ಮುರುಘಾಮಠದಲ್ಲಿ ಭಾನುವಾರ ಆಯೋಜಿಸಿದ್ದ ಜಯವಿಭವ ಶ್ರೀಗಳ ಸ್ಮರಣೋತ್ಸವದಲ್ಲಿ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮಹಾನುಭಾವರನ್ನು ಮರೆಯುವುದೆಂದರೆ ಅದೊಂದು ಮಾನಸಿಕ ದಾರಿದ್ರ್ಯ, ಬೌದ್ಧಿಕ ನಾಶಕ ಸಂಕೇತವೆಂದು ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.ಬಸವಕೇಂದ್ರ ಮುರುಘಾ ಮಠದಲ್ಲಿ ಭಾನುವಾರ ಆಯೋಜಿಸಿದ್ದ ಜಯವಿಭವ ಶ್ರೀಗಳ ಸ್ಮರಣೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚರಿತ್ರೆ ತನ್ನ ಗರ್ಭದಲ್ಲಿ ಎಲ್ಲವನ್ನು ಇಟ್ಟುಕೊಂಡಿರುತ್ತೆ. ಅದು ಕೇವಲ ರಾಜ ಮಹಾರಾಜರ ಕಥೆಯಲ್ಲ. ಮರೆಯಲಾಗದ ಮಹಾನುಭಾವರ ಕಥೆಯೂ ಒಳಗೊಂಡಿರುತ್ತದೆ. ಅಂತಹ ಮಹಾನುಭಾವರನ್ನು ಮರೆಯುವುದೆಂದರೆ ಸಾಂಸ್ಕೃತಿಕ ದಾರಿದ್ರವೂ ಆಗುತ್ತದೆ ಎಂದರು.
ಬೃಹನ್ಮಠದ ಹಿರಿಯ ಲಿಂಗೈಕ್ಯ ಶ್ರೀ ಜಗದ್ಗುರು ಜಯವಿಭವ ಮುರುಘರಾಜೇಂದ್ರ ಮಹಾಸ್ವಾಮಿಗಳವರು ಕನ್ನಡ, ಸಂಸ್ಕೃತ, ಹಿಂದಿ, ಬಂಗಾಳಿ, ಮರಾಠಿ ಮೊದಲಾದ ಭಾಷಾವಿಶಾರದರೂ, ವೇದಶಾಸ್ತ್ರ ಪಾರಂಗತರೂ, ಸರ್ವಧರ್ಮ ಸಮನ್ವಯಾಚಾರ್ಯರೂ, ವೈರಾಗ್ಯನಿಧಿಗಳೂ ಆಗಿದ್ದರು. ಅವರ ಕಾಲಕ್ಕೆ ಶ್ರೀ ಮುರುಘಾಮಠವು ವಿದ್ವತ್ತು, ವೈರಾಗ್ಯ, ಲೋಕಸೇವೆ ಮತ್ತು ಸಂಪತ್ತುಗಳಿಗೆ ಸಮಗ್ರ ಭಾರತದಲ್ಲಿಯೇ ಹೆಸರಾಗಿತ್ತು. ಶ್ರೀಗಳವರು ಸುಮಾರು 20 ವರ್ಷಗಳ ಕಾಲ ಕಾಶೀ ಕ್ಷೇತ್ರದಲ್ಲಿದ್ದು ಸಾಹಿತ್ಯ, ವ್ಯಾಕರಣಾದಿ ವಿದ್ಯಾಪರಿಣಿತರಾಗಿ ಅನೇಕ ಶಾಸ್ತ್ರ ಪಾರಂಗತರಾಗಿ ಅತುಲವಾದ ವೈರಾಗ್ಯ, ಮಿಗಿಲಾದ ವಿದ್ಯಾಸಂಪತ್ತು, ಉದಾರವಾದ ಭಾವನೆಗಳು ಉಜ್ವಲವಾದ ದೇಶಾಭಿಮಾನಕ್ಕೆ ಹೆಸರಾಗಿದ್ದರೆಂದು ಬಣ್ಣಿಸಿದರು.ಅವರ ಅವಧಿಯಲ್ಲಿ ಹಾಸನದ ಸಾರ್ವಜನಿಕ ವಿದ್ಯಾರ್ಥಿ ನಿಲಯಕ್ಕೆ 1 ಲಕ್ಷ ರು, ರಾಷ್ಟ್ರೀಯ ರಕ್ಷಣಾ ನಿಧಿಗೆ 10 ಸಾವಿರ ರು, ಬೆಂಗಳೂರು ರವೀಂದ್ರ ಕಲಾ ಕ್ಷೇತ್ರ ನಿರ್ಮಾಣಕ್ಕೆ 5 ಸಾವಿರ ರು, ಚಿತ್ರದುರ್ಗ ಜಯವಿಭವ ಕ್ರೀಡಾಂಗಣ, ಜಿಲ್ಲಾ ಆಸ್ಪತ್ರೆಯಲ್ಲಿ ಮಕ್ಕಳ ವಾರ್ಡ್ ನಿರ್ಮಾಣಕ್ಕೆ ದೇಣಿಗೆ ನೀಡಿದ್ದರೆಂದು ಸ್ಮರಿಸಿದರು.
ವಿಶ್ರಾಂತ ಪ್ರಾಧ್ಯಾಪಕ ಮಲ್ಲಿಕಾರ್ಜುನ ಜವಳಿ ಮಾತನಾಡಿ, ನಾವು ಏನನ್ನು ನೀಡುತ್ತೇವೆಯೋ, ಅದನ್ನೇ ಪಡೆಯುತ್ತೇವೆ. ಇದೇ ಸತ್ಯ ಇದೇ ಇತಿಹಾಸ. ಸುತ್ತು ಮತ್ತು ಕಟ್ಟು ಎಂಬ ಜಯದೇವ ಜಗದ್ಗುರುಗಳ ಅಣತಿಯಂತೆ ಜಯವಿಭವ ಶ್ರೀಗಳು ಬೆಳೆದಂತವರು. ಮುಳಗುಂದ ಮಠದಲ್ಲಿ ಬಾಲ್ಯವನ್ನು ಕಳೆದ ಶ್ರೀಗಳು ಅಲ್ಲಿಂದಲೇ ಬೆಳೆದು ಬಂದರು. ಮುಳುಗುಂದವನ್ನು ಒಳಗೊಂಡಂತೆ ಅಥಣಿಯ ಗಚ್ಚಿನಮಠ, ಧಾರವಾಡದ ಮುರುಘಾಮಠ, ಬೆಂಗಳೂರಿನ ಸರ್ಪಭೂಷಣ ಮಠ ಹೀಗೆ ನಾಡಿನ ಹಲವಾರು ಮಠಗಳು ಹಾಗೂ ಜಗದ್ಗುರುಗಳ ಸಾಮೀಪ್ಯದಿಂದ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡಂತವರು ಶ್ರೀ ಜಯವಿಭವ ಶ್ರೀಗಳು.ನೀರಿನಲ್ಲಿ ಹುಟ್ಟಿದ ಉಪ್ಪು ನೀರಲ್ಲಿ ಕರಗಿದರೆ ಕರಗದ ಮುತ್ತಾಗಿ ಬೆಳೆದ ಬಂದವರು ಜಯವಿಭವ ಸ್ವಾಮೀಜಿಗಳು. ಶ್ರೀಮಠದ ಸರ್ವತೋಮುಖ ಬೆಳವಣಿಗೆ ಕಾರಣಿಭೂತರಾದರು. ಸಂಸ್ಕೃತ, ಬಂಗಾಳಿ, ಮರಾಠಿ ಒಳಗೊಂಡಂತೆ ಹಲವಾರು ಭಾಷೆಗಳ ಪಾಂಡಿತ್ಯವನ್ನು ಶ್ರೀಗಳು ಹೊಂದಿದ್ದರು. ತನ್ನ ಗುರುಗಳಾದ ಜಯದೇವ ಜಗದ್ಗುರುಗಳಂತೆ ನಾಡಿನಲ್ಲಿ ಶೈಕ್ಷಣಿಕ ಕ್ರಾಂತಿಗೆ ಅಡಿಪಾಯ ಹಾಕಿದರು. ಇದೆಲ್ಲವೂ ಆಧುನಿಕ ಜಗತ್ತಿನ ಮಠಮಾನ್ಯಗಳಿಗೆ ಇವತ್ತಿಗೂ ಒಂದು ಆದರ್ಶವಾಗಿದೆ ಎಂದು ತಿಳಿಸಿದರು.
ದಾವಣಗೆರೆ ಜಯದೇವ ಪ್ರೆಸ್‌ನ ಕಣಕುಪ್ಪಿ ಮುರುಗೇಶ್, ಕಮ್ಮಾರ ಸಮಾಜದ ಹನುಮಂತಪ್ಪ, ನಿವೃತ್ತ ಪ್ರಾಧ್ಯಾಪಕ ಎಂ.ಕೆ ಪ್ರಭುದೇವ್, ಕೆಇಬಿ ಷಣ್ಮುಖಪ್ಪ ಮಾತನಾಡಿದರು. ನಿವೃತ್ತ ಪ್ರಾಧ್ಯಾಪಕ ಎಸ್.ಎಂ.ಕೊಟ್ರೇಶಪ್ಪ ಶ್ರೀಗಳ ಕುರಿತು ಕವನ ವಾಚಿಸಿದರು. ಉದ್ಯಮಿ ಎಸ್.ವಿ ನಾಗರಾಜಪ್ಪ, ಮಹಡಿ ಶಿವಮೂರ್ತಿ, ಆರತಿ ಮಹಡಿ ಶಿವಮೂರ್ತಿ, ವೀರೇಶ್, ಶಂಕರಪ್ಪ ಗಾರೆಹಟ್ಟಿ, ಮುರುಗೇಂದ್ರಪ್ಪ ಗಾರೆಹಟ್ಟಿ, ಪೈಲ್ವಾನ್ ತಿಪ್ಪೇಸ್ವಾಮಿ, ಚಂದ್ರವಳ್ಳಿ ಎಸ್ ಜೆಎಂ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಸ್.ಹೆಚ್ ಪಂಚಾಕ್ಷರಿ, ಎಸ್ ಜೆಎಂಐಟಿ ಕಾಲೇಜಿನ ಪ್ರಾಚಾರ್ಯ ಡಾ.ಪಿ.ಬಿ. ಭರತ್, ನಾಗರಾಜ್ ಸಂಗಂ ಭಾಗವಹಿಸಿದ್ದರು.ಜ್ಯೋತಿ ಬಸವರಾಜ್ ಪ್ರಾರ್ಥಿಸಿದರು. ಡಾ.ರೇವಣ್ಣ ನಿರೂಪಿಸಿದರು. ಡಾ. ಎಸ್ ಆನಂದ್ ಸ್ವಾಗತಿಸಿದರು.