ಧಾರ್ಮಿಕ ಸಭೆಯಲ್ಲಿ ಶ್ರೀಶೈಲ ಪೀಠಾಧೀಶರ ಅಭಿಮತ

ಕನ್ನಡಪ್ರಭ ವಾರ್ತೆ, ಬೀರೂರು

ಈ ಜಗತ್ತು ಪರಮಾತ್ಮನ ಕೊಡುಗೆ. ದೇವರನ್ನು ಆರಾಧಿಸುವುದು ನಮ್ಮ ಕರ್ತವ್ಯವಾಗಿ ನಮ್ಮ ತಪ್ಪಿಗೆ ಪ್ರಾಯಶ್ಚಿತ್ತ ಪಡೆಯುವುದು ಮತ್ತು ಪರರ ತಪ್ಪು ಕ್ಷಮಿಸುವ ಮೂಲಕ ಆದರ್ಶ ಗುಣ ಮೆರೆಯಬೇಕು ಎಂದು ಶ್ರೀಶೈಲ ಪೀಠಾಧೀಶ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ ತಿಳಿಸಿದರು. ಬೀರೂರು ಪಟ್ಟಣದ ಡಿ.ವಿ.ಹಾಲಪ್ಪ ರಸ್ತೆಯ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂಗಲ ಮಂದಿರದಲ್ಲಿ ಮಂಗಳವಾರ ನಡೆದ ಧಾರ್ಮಿಕ ಸಭೆ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಧರ್ಮ ಮತ್ತು ಸಂಸ್ಕೃತಿ ನಮ್ಮ ಪರಂಪರೆ. ಅದನ್ನು ಉಳಿಸಿ, ಬೆಳೆಸಿ, ರಕ್ಷಿಸುವ ಮೂಲಕ ನಮ್ಮನ್ನು ನಾವೇ ರಕ್ಷಿಸಿ ಕೊಳ್ಳಬೇಕು. ಧರ್ಮ ಎಂದರೆ ಏನು? ಎನ್ನುವ ಪ್ರಶ್ನೆಗೆ ಅಹಿಂಸೆ, ಸತ್ಯ, ಆಸ್ತೇಯ,ಬ್ರಹ್ಮಚರ್ಯ, ಪೂಜೆ, ದಾನ, ದಯೆ, ಕ್ಷಮೆ, ಜಪ ಮತ್ತು ಧ್ಯಾನವೆಂಬ ದಶಗುಣಗಳ ಒಟ್ಟು ಮೌಲ್ಯವೇ ಧರ್ಮ ಎಂದು ವಿಶ್ಲೇಷಿಸಿದ ಅವರು, ಪರಮಾತ್ಮನಿಂದ ವ್ಯಾಪಿ ಸಿರುವ ಜಗತ್ತಿನಲ್ಲಿ ನಾನು-ನನ್ನದು ಎನ್ನುವ ಮೋಹಕ್ಕೆ ಒಳಗಾಗದೆ ಶ್ರದ್ಧೆ ಮತ್ತು ಮನಃಪೂರ್ವಕವಾಗಿ ಭಗವಂತನನ್ನು ಆರಾಧಿಸಬೇಕು.

ಪೂಜೆಗೆ ಭಕ್ತಿ ಮುಖ್ಯವಾದರೂ ಸಾಕಾರ ಸ್ವರೂಪಿ ಪದಾರ್ಥಗಳ ಅರ್ಪಣೆ ಮೂಲಕ ದೇವರನ್ನು ಅರ್ಚಿಸುವುದು ತ್ಯಾಗದ ಸಂಕೇತವೂ ಆಗಿದೆ. ಪರಿಪೂರ್ಣ ಶ್ರದ್ಧೆ ಸಮರ್ಪಣೆಯೇ ಮೋಕ್ಷಕ್ಕೆ ದಾರಿ. ಇಷ್ಟಲಿಂಗ ಪೂಜೆ, ಶಿವಾರಾಧನೆ ಸಾಧನೆಯ ಹಾದಿಯಾಗಿದೆ ಎಂದು ವಿವರಿಸಿ, ಬೀರೂರಿನ ಜನರು ಗುರು ಮತ್ತು ದೈವ ಎರಡನ್ನೂ ಇಲ್ಲಿಗೆ ಕರೆಸಿ ಇತಿಹಾಸ ನಿರ್ಮಿಸಿದ್ದೀರಿ ಎಂದು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಆಶಯ ನುಡಿ ಆಡಿದ ಯಡಿಯೂರು ರೇಣುಕ ಶಿವಾಚಾರ್ಯ ಸ್ವಾಮೀಜಿ, ವೀರಶೈವ ಪರಂಪರೆ ಶಾಖಾ ಮಠಗಳ ಸ್ಥಾಪನೆ ಮೂಲಕ ಪೀಠಗಳ ಅಧಿಕಾರ ವಿಕೇಂದ್ರೀಕರಣಕ್ಕೆ ಮಾದರಿಯಾಗಿದೆ ಎಂದರು.


ಪ್ರಾಸ್ತಾವಿಕವಾಗಿ ಮಾತನಾಡಿದ ರಂಭಾಪುರಿ ಖಾಸಾ ಶಾಖಾಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ವೀರಶೈವ ಪರಂಪರೆಯ ಪಂಚಪೀಠಗಳು ಮಾನವನ ಉನ್ನತಿಗೆ ಶ್ರಮಿಸುವ ಮೂಲಕ ಒಳಿತಿನ ಸಂಸ್ಕೃತಿ ಪ್ರತೀಕವಾಗಿವೆ. ನಾಡಿನ ಒಳಿತಿಗಾಗಿ, ಯುವಜನರಲ್ಲಿ ಸಂಸ್ಕಾರ, ಕೌಟುಂಬಿಕ ಪ್ರಜ್ಞೆ ಮತ್ತು ಕಂಕಣ ಭಾಗ್ಯ ಒದಗಿಬರಲಿ ಎಂದು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು. ಕಾರ್ಯಕ್ರಮ ಅತಿಥಿಯಾಗಿದ್ದ ಅಪೆಕ್ಸ್‌ ಬ್ಯಾಂಕ್‌ ನಿರ್ದೇಶಕ ಬೆಳ್ಳಿಪ್ರಕಾಶ್‌ ಮಾತನಾಡಿ, ಧರ್ಮದಲ್ಲಿ ಭಕ್ತರಿಗೆ ಇರುವ ಅಚಲ ನಂಬಿಕೆಯಿಂದಲೇ ಎಲ್ಲ ಧಾರ್ಮಿಕ ಕಾರ್ಯಕ್ರಮಗಳೂ ಸುಗಮವಾಗಿ ನೆರವೇರಲ್ಪಡುತ್ತಿವೆ. ಭಗವಂತ ಕೊಟ್ಟದ್ದನ್ನು ಸಮಾಜದ ಒಳಿತಿಗಾಗಿಯೇ ಅರ್ಪಿಸುವ ಮೂಲಕ ಧರ್ಮ ಎತ್ತಿ ಹಿಡಿಯುವುದು ನಮಗೆ ಪ್ರೇರಣೆಯಾಗಬೇಕು. ನಾವು ಭಾರತೀಯರು ಧರ್ಮದ ಆಧಾರದಿಂದಲೇ ಭಾವನಾತ್ಮಕವಾಗಿ ಬೆಸೆದುಕೊಂಡಿದ್ದೇವೆ ಎಂದರು.

ವೇದಿಕೆಯಲ್ಲಿ ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯ ಶ್ರೀ, ತಾವರೆಕೆರೆ ಶಿಲಾಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ನಂದೀಪುರ ನಂದೀಶ್ವರ ಶಿವಾಚಾರ್ಯ ಶ್ರೀ, ಹಣ್ಣೆಮಠದ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ, ಅಂಬಿಕಾ ನಗರ ಶ್ರೀ, ಶಂಕರದೇವರ ಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀ, ಬಿಳಕಿಯ ರಾಚೋಟೇಶ್ವರ ಶಿವಾಚಾರ್ಯ ಶ್ರೀ, ಮುಖಂಡ ಕೆ.ಎಂ.ವಿನಾಯಕ, ಆರ್ಯನ್‌, ಜಗದ್ಗುರು ರೇಣುಕ ಸಾಂಸ್ಕೃತಿಕ ಸಂಘ, ಶಿವಾನಂದಾಶ್ರಮ ಟ್ರಸ್ಟ್‌, ಜಗದ್ಗುರು ರೇಣುಕಾಚಾರ್ಯ ಮಂಗಲ ಮಂದಿರದ ಪದಾಧಿಕಾರಿಗಳು, ಭಕ್ತರು ಇದ್ದರು.

20ಬೀರೂರು 1ಬೀರೂರು ಪಟ್ಟಣದ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂಗಲ ಮಂದಿರದಲ್ಲಿ ಮಂಗಳವಾರ ಸಾಯಂಕಾಲ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀಶೈಲ ಪೀಠಾಧೀಶ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಯವರು ಆಶೀರ್ವಚನ ನೀಡಿದರು.