ಮುರುಘಾ ಮಠ ಆಡಳಿತಕ್ಕೆ ಮೇಲ್ವಿಚಾರಣಾ ಸಮಿತಿ ರಚಿಸಿ: ಸುಪ್ರೀಂಕೋರ್ಟ್

| Published : Feb 28 2024, 02:34 AM IST

ಮುರುಘಾ ಮಠ ಆಡಳಿತಕ್ಕೆ ಮೇಲ್ವಿಚಾರಣಾ ಸಮಿತಿ ರಚಿಸಿ: ಸುಪ್ರೀಂಕೋರ್ಟ್
Share this Article
  • FB
  • TW
  • Linkdin
  • Email

ಸಾರಾಂಶ

ಮುರುಘಾ ಶ್ರೀ ಡಾ.ಶಿವಮೂರ್ತಿ ಮುರುಘಾ ಸ್ವಾಮೀಜಿಯವರ ಆಡಳಿತಕ್ಕೆ ನಿರ್ಬಂಧ ವಿಧಿಸಿರುವ ಸುಪ್ರೀಂಕೋರ್ಟ್, ಚಿತ್ರದುರ್ಗದ ಮುರುಘಾಮಠದ ಆಡಳಿತಕ್ಕೆ ಮೂರು ದಿನಗಳ ಒಳಗಾಗಿ ಮೇಲ್ವಿಚಾರಣಾ ಸಮಿತಿ‌ ರಚಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿದೆ.

ಕನ್ನಡಪ್ರಭ ವಾರ್ತೆ ನವದೆಹಲಿ

ಮುರುಘಾ ಶ್ರೀ ಡಾ.ಶಿವಮೂರ್ತಿ ಮುರುಘಾ ಸ್ವಾಮೀಜಿಯವರ ಆಡಳಿತಕ್ಕೆ ನಿರ್ಬಂಧ ವಿಧಿಸಿರುವ ಸುಪ್ರೀಂಕೋರ್ಟ್, ಚಿತ್ರದುರ್ಗದ ಮುರುಘಾಮಠದ ಆಡಳಿತಕ್ಕೆ ಮೂರು ದಿನಗಳ ಒಳಗಾಗಿ ಮೇಲ್ವಿಚಾರಣಾ ಸಮಿತಿ‌ ರಚಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿದೆ. ಮಠದ ಆಡಳಿತವನ್ನು ಸರಕಾರವೇ ನೋಡಿಕೊಳ್ಳಬೇಕು. ಅಲ್ಲದೆ, ಮೇಲ್ವಿಚಾರಣಾ ಸಮಿತಿಯಲ್ಲಿ ಆರೋಪಿಗಳು ಇರದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದೆ. ಈ ಸಂಬಂಧ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ್ದು, ಮುಂದಿನ ಎರಡು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.

ಫೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ಜೈಲು ಸೇರಿದ್ದ ಪೀಠಾಧ್ಯಕ್ಷ ಮುರುಘಾ ಶ್ರೀಯವರು, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಪ್ರಸ್ತುತ ಮಠದ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು. ಇದನ್ನು ಪ್ರಶ್ನಿಸಿ, ಮಾಜಿ ಸಚಿವ ಏಕಾಂತಯ್ಯ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಮಂಗಳವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ವಿಕ್ರಮನಾಥ್ ನೇತೃತ್ವದ ಪೀಠ, ಈ ಸಂಬಂಧ ಮಧ್ಯಂತರ ಆದೇಶ ನೀಡಿದೆ. ಮಠದ ಹಾಸ್ಟೇಲ್‌ ನಲ್ಲಿದ್ದ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪದಡಿ 2022ರಲ್ಲಿ ಮುರುಘಾ ಶ್ರೀಯವರ ಬಂಧನವಾಗಿತ್ತು. ಈ ಹಿನ್ನೆಲೆಯಲ್ಲಿ ಮಠಕ್ಕೆ ಆಡಳಿತಾಧಿಕಾರಿಯಾಗಿ ನಿವೃತ್ತ ಐಎಎಸ್ ಅಧಿಕಾರಿ ಪಿಎಸ್ ವಸ್ತ್ರದ ಅವರನ್ನು ನೇಮಕ ಮಾಡಲಾಗಿತ್ತು. 14 ತಿಂಗಳ ಬಳಿಕ 2023ರ ನವೆಂಬರ್‌ನಲ್ಲಿ ಮುರುಘಾ ಶ್ರೀಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಈ ಮಧ್ಯೆ, ವಸ್ತ್ರದ ಅವರ ನೇಮಕ ಪ್ರಶ್ನಿಸಿ ಮಠದ ಭಕ್ತರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್‌, ಮಠಕ್ಕೆ ಆಡಳಿತಾಧಿಕಾರಿ ನೇಮಿಸಿ ಸರಕಾರ ಮಾಡಿದ್ದ ಆದೇಶವನ್ನು ರದ್ದುಪಡಿಸಿತ್ತು. ಬಳಿಕ, ಮುರುಘಾಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಅಧ್ಯಕ್ಷರಾಗಿ ಮರುನೇಮಕಗೊಂಡ ಸ್ವಾಮೀಜಿ, ಮಠದ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು. ಈ ಮಧ್ಯೆ, ಫೋಕ್ಸೋ ಆರೋಪಿಯೊಬ್ಬರಿಗೆ ಮಠದ ಆಡಳಿತಾಧಿಕಾರ ನೀಡಿರುವುದನ್ನು ಪ್ರಶ್ನಿಸಿ, ಏಕಾಂತಯ್ಯ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.