ಸಾರಾಂಶ
- ಸೀತೂರು ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ವಾರ್ಷಿಕ ಮಹಾ ಸಭೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಮುಂದಿನ ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ ಹೊಸದಾಗಿ 3328 ಸಂಜೀವಿನಿ ಸ್ವಸಹಾಯ ಗುಂಪುಗಳ ರಚನೆ ಮಾಡಬೇಕು ಎಂಬ ಗುರಿ ಹೊಂದಲಾಗಿದೆ ಎಂದು ಎಲ್.ಆರ್.ಎಂ.ನ ಜಿಲ್ಲಾ ವ್ಯವಸ್ಥಾಪಕ ರಾಜೇಶ್ ತಿಳಿಸಿದರು.
ಶುಕ್ರವಾರ ನಾಗರಮಕ್ಕಿ ದೇವಸ್ಥಾನದಲ್ಲಿ ಸೀತೂರು ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು. 2023-24 ಆರ್ಥಿಕ ವರ್ಷದಲ್ಲಿ ಪ್ರತಿಯೊಬ್ಬ ಮಹಿಳೆ ಸಂಜೀವಿನಿ ಒಕ್ಕೂಟದ ವ್ಯಾಪ್ತಿಗೆ ತರಬೇಕು ಎಂದು ಗುರಿ ಇಟ್ಟು ಕೊಳ್ಳಲಾಗಿದೆ. 2021ರಲ್ಲಿ ಸೀತೂರಿನಲ್ಲಿ ಸಂಜೀವಿನಿ ಒಕ್ಕೂಟ ರಚನೆಯಾಗಿದೆ. ಪ್ರಾರಂಭದಲ್ಲಿ 26 ಸ್ವಸಹಾಯ ಸಂಘಗಳಿದ್ದು ಈಗ 33 ಸ್ವಸಹಾಯ ಸಂಘಗಳಿವೆ. 4 ವಾರ್ಡುಗಳಲ್ಲಿ 432 ಸದಸ್ಯರಿದ್ದಾರೆ. ಮುಂದಿನ 6 ತಿಂಗಳಲ್ಲಿ 15 ಸ್ವಸಹಾಯ ಸಂಘ ರಚನೆಯಾಗಬೇಕಾಗಿದೆ. 5 ಸಿಬ್ಬಂದಿಇದ್ದು. ಪ್ರತಿ 2 ವರ್ಷಕ್ಕೆ ಪದಾಧಿಕಾರಿಗಳ ಆಯ್ಕೆಯಾಗಬೇಕಾಗಿದೆ. ಒಕ್ಕೂಟದ ಮಹಾ ಸಭೆಯಲ್ಲಿ ಒಕ್ಕೂಟದ ಕಾರ್ಯಚಟುವಟಿಕೆ, ಅನುದಾನದ ಸದ್ಬಳಕೆ. ಜಮಾ-ಖರ್ಚು ಮಂಡನೆ, ಸದಸ್ಯರ ಪರಪ್ಸರ ಚರ್ಚೆ ನಡೆಸಲಾಗುತ್ತದೆ. ಉದ್ಯೋಗ ಖಾತ್ರಿ ಯೋಜನೆಯಡಿ ಸೀತೂರು ಸಂಜೀವಿನಿ ಒಕ್ಕೂಟದ ಕಚೇರಿ ಕಟ್ಟಡ ಕಟ್ಟಲು ಕಳೆದ ವರ್ಷ 17 ಲಕ್ಷ ಮಂಜೂರಾಗಿತ್ತು ಎಂದರು.ಎನ್.ಆರ್.ಎಲ್.ಎಂ.ನ ತಾಲೂಕು ವ್ಯವಸ್ಥಾಪಕ ಸುಬ್ರಮಣ್ಯ ಮಾತನಾಡಿ, ತಾಲೂಕಿನ 14 ಗ್ರಾಪಂನಲ್ಲೂ ಸಂಜೀವಿನಿ ಒಕ್ಕೂಟ ರಚನೆಯಾಗಿದೆ. ಅನುದಾನದ ಸದ್ಬಳಕೆಯಾಗಿದೆ. ಪ್ರತಿಯೊಂದು ಒಕ್ಕೂಟದ ಆಡಿಟ್ ಆಗಿದೆ.ಈಗಾಗಲೇ 11 ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾ ಸಭೆ ನಡೆದಿದೆ. ಸದಸ್ಯರು ಮಾಸಿಕ ಸಭೆಯಲ್ಲಿ ಭಾಗವಹಿಸುವುದು ಕಷ್ಟವಾಗುತ್ತದೆ ಎಂದು ಮಹಾ ಸಭೆ ಏರ್ಪಡಿಸುತ್ತೇವೆ. ಎನ್.ಆರ್.ಎಲ್.ಎಂ.ಯೋಜನೆಯಲ್ಲಿ ಎಲ್ಲಾ ಸ್ವಸಹಾಯ ಸಂಘಗಳನ್ನು ಒಗ್ಗೂಡಿಸಿ ಗ್ರಾಮ ಮಟ್ಟದಲ್ಲಿ ಒಕ್ಕೂಟ ರಚನೆ ಮಾಡಿದ್ದೇವೆ. ಇದರಲ್ಲಿ ಕಾರ್ಯಕಾರಿ ಸಮಿತಿ ರಚನೆಯಾಗಿದೆ. 5 ಜನ ಸಿಬ್ಬಂದಿ ನೇಮಕವಾಗಿದೆ. ಮಹಾ ಸಭೆಯಲ್ಲಿ ಮುಕ್ತ ಚರ್ಚೆ ನಡೆಯಬೇಕಾಗಿದೆ.1960 ರ ಸಹಕಾರ ಕಾಯ್ದೆಯಡಿ ಒಕ್ಕೂಟನೋಂದಣಿಯಾಗಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಜ್ಯೋತಿ ಮಾತನಾಡಿ, ಎನ್.ಆರ್.ಎಲ್.ಎಂ.ನ ಮೇಲಾಧಿಕಾರಿ ನೀಡಿದ ಮಾಹಿತಿಸದಸ್ಯರಿಗೆ ಹೆಚ್ಚು ಪರಿಣಾಮಕಾರಿಯಾಗಲಿದೆ. ಕಳೆದ 3 ವರ್ಷದಿಂದ ನಾನು ಅಧ್ಯಕ್ಷೆಯಾಗಿದ್ದು ಎಲ್ಲ ಪದಾಧಿಕಾರಿಗಳು ಸಹಕಾರ ನೀಡಿದ್ದಾರೆ ಎಂದರು. ಮುಖ್ಯ ಅತಿಥಿಗಳಾಗಿದ್ದ ಗ್ರಾಪಂ ಸದಸ್ಯ ಎನ್.ಪಿ.ರಮೇಶ್ ಮಾತನಾಡಿ, ಸಂಜೀವಿನಿ ಒಕ್ಕೂಟ ಚೆನ್ನಾಗಿ ನಡೆದುಕೊಂಡು ಹೋಗುತ್ತಿದ್ದು ಗ್ರಾಪಂನಿಂದ ಎಲ್ಲಾ ಸಹಕಾರ ನೀಡುತ್ತೇವೆ ಎಂದರು.ಗ್ರಾಪಂ ಸದಸ್ಯ ಎಚ್.ಇ. ದಿವಾಕರ ಮಾತನಾಡಿ, ಹಿಂದೆ ಮಾಜಿ ಸಚಿವೆ ಮೋಟಮ್ಮ ಅವರ ಕಾಲದಲ್ಲಿ ಸ್ತ್ರೀ ಶಕ್ತಿ ಗುಂಪುಗಳು ರಚನೆಯಾಗಿದ್ದವು. ಮುಂದೆ ಸಂಜೀವಿನಿ ಒಕ್ಕೂಟ ಉತ್ತಮ ಕೆಲಸ ಮಾಡಿ ಆರ್ಥಿಕ ಸ್ವಾವಲಂಬನೆ ಗಳಿಸಬೇಕು ಎಂದು ಸಲಹೆ ನೀಡಿದರು.
ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಸಂದ್ಯಾ,ಉಪಾಧ್ಯಕ್ಷೆ ಪೂರ್ಣಿಮ, ಖಚಾಂಚಿ ಆಶಾ, ಉಪ ಕಾರ್ಯದರ್ಶಿ ಪೂಜಾಶ್ರೀ, ವಲಯ ಮೇಲ್ವೀಚಾರಕ ಗಿರೀಶ್, ಕೌಸಲ್ಯ ಅಭಿವೃದ್ಧಿ ಮೇಲ್ವೀಚಾರಕ ಕಿಶೋರ್ ಇದ್ದರು. ಅರ್ಪಿತ ವರದಿ ವಾಚಿಸಿದರು. ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತಮ ಅಂಕ ಪಡೆದ ಒಕ್ಕೂಟದ ಸದಸ್ಯರ 3 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.