ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಕೈಗಾರಿಕೆ ಮತ್ತು ಕಾರ್ಖಾನೆಗಳಲ್ಲಿ ಅನಾಹುತ ಮತ್ತು ವಿಪತ್ತುಗಳ ನಿರ್ವಹಣೆಗೆ ಸ್ಥಳೀಯ ಮಟ್ಟದಲ್ಲಿ ಬಿಕ್ಕಟ್ಟು ಪರಿಹಾರ ಸಮಿತಿಗಳನ್ನು ರಚಿಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಸೂಚಿಸಿದ್ದಾರೆ.ಪಣಂಬೂರು ಎಂಸಿಎಫ್‌ನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಬಿಕ್ಕಟ್ಟು ಪರಿಹಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪಣಂಬೂರು, ಬೈಕಂಪಾಡಿ, ಸುರತ್ಕಲ್ ಆಸುಪಾಸಿನಲ್ಲಿ ಹಲವು ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳಿವೆ. ಯಾವುದೇ ರೀತಿಯಲ್ಲಿ ಎದುರಾಗಬಹುದಾದ ವಿಪತ್ತು ಹಾಗೂ ದುರ್ಘಟನೆಗಳ ನಿರ್ವಹಣೆಗೆ ಕೈಗಾರಿಕೆಗಳು ಸನ್ನದ್ಧವಾಗಿರಬೇಕು. ಈ ನಿಟ್ಟಿನಲ್ಲಿ ತಮ್ಮದೇ ಆದ ವಿಪತ್ತು ನಿರ್ವಹಣೆ ಯೋಜನೆ ಮಾಡಿಕೊಂಡಿರಬೇಕು ಎಂದು ತಿಳಿಸಿದರು.
ಸ್ಥಳೀಯ ಮಟ್ಟದಲ್ಲಿ ಆಯಾ ಸ್ಥಳಕ್ಕೆ ಹೊಂದಿಕೊಂಡಂತೆ ಕೈಗಾರಿಕಾ ಪ್ರತಿನಿಧಿಗಳು, ಸ್ಥಳೀಯ ಸಂಸ್ಥೆಗಳು ಮತ್ತು ಸರ್ಕಾರಿ ಆಸ್ಪತ್ರೆಗಳ ವೈದ್ಯರನ್ನೊಳಗೊಂಡ ಸ್ಥಳಿಯ ಬಿಕ್ಕಟ್ಟು ನಿರ್ವಹಣಾ ಸಮಿತಿ ರಚಿಸಬೇಕು. ಇದರಿಂದ ಕೈಗಾರಿಕಾ ಪ್ರದೇಶದಲ್ಲಿ ಯಾವುದೇ ವಿಪತ್ತು ಎದುರಾದರೂ ಅದನ್ನು ನಿರ್ವಹಿಸುವುದರ ಜತೆಗೆ ಇತರ ಕೈಗಾರಿಕೆ ಘಟಕಗಳಿಗೆ ಹರಡದಂತೆ ನಿರ್ವಹಿಸಲು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.ರಕ್ಷಣಾ ಸಲಕರಣೆಗಳು, ಮಾನವ ಶಕ್ತಿ ಹಾಗೂ ಇತರ ಸಂಪನ್ಮೂಲಗಳ ವಿವರಗಳನ್ನು ಕೈಗಾರಿಕಾ ಘಟಕಗಳು ಆಗಿಂದಾಗ್ಗೆ ಪರಿಶೀಲಿಸಬೇಕು ಎಂದು ಸೂಚಿಸಿದರು.
ನೈಸರ್ಗಿಕ ವಿಪತ್ತು, ಕೈಗಾರಿಕಾ ಅಪಾಯ ಮತ್ತು ಸಂಭವನೀಯ ವಿಪತ್ತುಗಳು ಸಂಭವಿಸಿದಾಗ ಕೈಗೊಳ್ಳುವ ಕಾರ್ಯವಿಧಾನಗಳ ಬಗ್ಗೆ ಎಲ್ಲ ಕೈಗಾರಿಕಾ ಘಟಕಗಳು ಮಾಹಿತಿ ಹೊಂದಿರಬೇಕು. ಪ್ರಾಥಮಿಕ ಹಂತದಲ್ಲಿ ಸಮುದಾಯದ ಸಹಾಯ ಅಗತ್ಯವಿದ್ದು, ಈ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಅಪಾಯಕಾರಿ ಕಾರ್ಖಾನೆಗಳ ಸುತ್ತಮುತ್ತಲಿನ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸುವಂತೆ ಸಲಹೆ ನೀಡಿದರು.ತೈಲ ಸಾಗಾಟದ ಟ್ಯಾಂಕರ್‌ಗಳು ಲೋಡಿಂಗ್‍ನಿಂದ ಅನ್‍ಲೋಡಿಂಗ್ ಸ್ಥಳದವರೆಗೂ ಸಾಗಾಟದ ಹಾದಿಯಲ್ಲಿ ಯಾವುದೇ ಸೋರಿಕೆ ಸೇರಿದಂತೆ ಅನಾಹುತಗಳಾಗದಂತೆ ಆಯಾ ತೈಲ ಕಂಪೆನಿಗಳೇ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟೋನಿ ಮರಿಯಪ್ಪ, ಕಾರ್ಖಾನೆಗಳ ಉಪನಿರ್ದೇಶಕ ಎಂ.ಎಸ್. ಮಹಾದೇವ್, ಎಂಸಿಎಫ್ ಮುಖ್ಯ ಉತ್ಪಾದನಾಧಿಕಾರಿ ಗಿರೀಶ್, ಜಿಲ್ಲಾ ವಿಪತ್ತು ನಿರ್ವಹಣಾ ಸಮನ್ವಯಾಧಿಕಾರಿ ವಿಜಯ್ ಕುಮಾರ್, ವಿವಿಧ ಕೈಗಾರಿಕಾ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಇಲಾಖೆಗಳ ಅಧಿಕಾರಿಗಳು ಇದ್ದರು.ಸಭೆಯ ನಂತರ ಎಂಸಿಎಫ್ ಕಾರ್ಖಾನೆಯಲ್ಲಿ ಅಮೋನಿಯಾ ಸೋರಿಕೆ ದುರ್ಘಟನೆಯನ್ನು ನಿರ್ವಹಿಸುವ ಬಗ್ಗೆ ಜಿಲ್ಲಾಧಿಕಾರಿ ಉಪಸ್ಥಿತಿಯಲ್ಲಿ ಅಣುಕು ಪ್ರದರ್ಶನ ನಡೆಯಿತು.