ಶ್ರೀಗಳಿಂದ ಕೆರೆಗಳ ವೀಕ್ಷಣೆ ಕಾರ್ಯಕ್ರಮಕ್ಕೆ ಸಮಿತಿ ರಚನೆ

| Published : Sep 03 2024, 01:42 AM IST

ಶ್ರೀಗಳಿಂದ ಕೆರೆಗಳ ವೀಕ್ಷಣೆ ಕಾರ್ಯಕ್ರಮಕ್ಕೆ ಸಮಿತಿ ರಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಜಗಳೂರು ತಾಲೂಕಿನ 57 ಕೆರೆ ತುಂಬಿಸುವ ಯೋಜನೆಯಲ್ಲಿ ಈಗಾಗಲೇ 36 ಕೆರೆಗಳಿಗೆ ನೀರು ಹರಿಯುತ್ತಿದೆ. ಮುಂದಿನ ದಿನಗಳಲ್ಲಿ ತರಳಬಾಳು ಶ್ರೀಗಳನ್ನು ಆಹ್ವಾನಿಸಲು ಮಾಜಿ ಶಾಸಕರು ಮತ್ತು ಎಂಜಿನಿಯರ್‌ಗಳು ಸೇರಿದಂತೆ ಒಟ್ಟು 10 ಮಂದಿ ಸದಸ್ಯರ ಸಮಿತಿ ರಚಿಸಿ ಸಾಧಕ- ಬಾಧಕಗಳನ್ನು ಚರ್ಚಿಸಲಾಗುವುದು. ಬಳಿಕ ಶ್ರೀಗಳ ಒಪ್ಪಿಗೆ ಪಡೆದು ಕಾರ್ಯಕ್ರಮಕ್ಕೆ ದಿನಾಂಕ ನಿಗದಿಪಡಿಸಲಾಗುವುದು ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

- ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಹೇಳಿಕೆ । ತರಳಬಾಳು ಕೇಂದ್ರದಲ್ಲಿ ಪೂರ್ವಭಾವಿ ಸಭೆ- - - ಕನ್ನಡಪ್ರಭ ವಾರ್ತೆ ಜಗಳೂರು

ತಾಲೂಕಿನ 57 ಕೆರೆ ತುಂಬಿಸುವ ಯೋಜನೆಯಲ್ಲಿ ಈಗಾಗಲೇ 36 ಕೆರೆಗಳಿಗೆ ನೀರು ಹರಿಯುತ್ತಿದೆ. ಮುಂದಿನ ದಿನಗಳಲ್ಲಿ ತರಳಬಾಳು ಶ್ರೀಗಳನ್ನು ಆಹ್ವಾನಿಸಲು ಮಾಜಿ ಶಾಸಕರು ಮತ್ತು ಎಂಜಿನಿಯರ್‌ಗಳು ಸೇರಿದಂತೆ ಒಟ್ಟು 10 ಮಂದಿ ಸದಸ್ಯರ ಸಮಿತಿ ರಚಿಸಿ ಸಾಧಕ- ಬಾಧಕಗಳನ್ನು ಚರ್ಚಿಸಲಾಗುವುದು. ಬಳಿಕ ಶ್ರೀಗಳ ಒಪ್ಪಿಗೆ ಪಡೆದು ಕಾರ್ಯಕ್ರಮಕ್ಕೆ ದಿನಾಂಕ ನಿಗದಿಪಡಿಸಲಾಗುವುದು ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಪಟ್ಟಣದ ತರಳಬಾಳು ಕೇಂದ್ರದಲ್ಲಿ ಭಾನುವಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಕೆರೆಗಳಿಗೆ ಶೇ.70 ರಷ್ಟು ನೀರು ಹರಿದುಬಂದಿದೆ. ಸಾಕಷ್ಟು ಮಳೆಯೂ ಸುರಿದಿದೆ. ಇನ್ನೊಂದು ವಾರದಲ್ಲಿ ಇನ್ನು ನಾಲ್ಕು ಕೆರೆಗಳಿಗೆ ನೀರು ಹರಿಸುವ ಭರವಸೆಯನ್ನು ಎಂಜಿನಿಯರ್‌ಗಳು ನೀಡಿದ್ದಾರೆ ಎಂದರು.

ಬಯಲು ರಂಗಮಂದಿರದಲ್ಲಿ ಕಾರ್ಯಕ್ರಮ:

ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ ಮತ್ತು ಎಚ್.ಪಿ.ರಾಜೇಶ್ ಎಲ್ಲರೂ ಒಂದುಗೂಡಿ ಡಾ.ಶಿವಮೂರ್ತಿ ಶಿವಾಚಾರ್ಯರ ಸಲಹೆ ಪಡೆಯಲಾಗುವುದು. ಶ್ರೀಗಳನ್ನು ಯಾವ ಮಾರ್ಗದ ಮೂಲಕ ಕರೆ ತರಬೇಕು, ಕೆರೆಗಳಲ್ಲಿ ಪೂಜೆ ಸಲ್ಲಿಸುವ ಜಾಗದಲ್ಲಿ ಜಾಲಿ ಗಿಡಗಳನ್ನು ಕತ್ತರಿಸುವ ಕೆಲಸ ಮತ್ತು ರಸ್ತೆ ಗುಂಡಿಗಳನ್ನು ಮುಚ್ಚಿಸುವ ಕಾರ್ಯ ಆಗಬೇಕಿದೆ. ಕನಿಷ್ಠ ಒಂದು ದಿನಕ್ಕೆ 10 ಕೆರೆಯಂತೆ ನಾಲ್ಕು ದಿನಗಳ ಕಾಲ ಕೆರೆ ವೀಕ್ಷಣೆ ಮಾಡಲು ಸಮಯ ಬೇಕಾಗುತ್ತದೆ. ಕಡೆಯ ದಿನ ಪಟ್ಟಣದ ಬಯಲು ರಂಗಮಂದಿರದಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ದಾಸೋಹದ ವ್ಯವಸ್ಥೆಗೂ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.

ಎಂಜಿನಿಯರ್‌ಗಳು ಕಾಮಗಾರಿ ಮುಗಿಸಬೇಕು:

ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, ಶ್ರೀಗಳು ತಾಲೂಕಿನ ಎಲ್ಲ ಕೆರೆಗಳಿಗೆ ಭೇಟಿ ನೀಡುತ್ತಿರುವುದು ಸಂತೋಷದ ವಿಷಯ. ಶಾಸಕನಾಗಿದ್ದ ಅವಧಿಯಲ್ಲಿ ಯೋಜನೆ ಜಾರಿಯಾಗಿತ್ತು. ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಹಾಗೂ ಎಸ್.ವಿ.ರಾಮಚಂದ್ರ ಮತ್ತು ಈಗಿನ ಶಾಸಕ ಬಿ.ದೇವೇಂದ್ರಪ್ಪ ಅವರ ಕೊಡುಗೆ ಸಾಕಷ್ಟಿದೆ. ಕೆರೆ ತುಂಬಿಸುವ ಕಾರ್ಯದಲ್ಲಿ ಶ್ರೀಗಳು ಆಧುನಿಕ ಭಗೀರಥರು. ಇನ್ನು 20ಕ್ಕೂ ಹೆಚ್ಚು ಕೆರೆಗಳಿಗೆ ನೀರು ಹರಿಸುವ ಕಾರ್ಯ ಬಾಕಿ ಇದೆ. ರಂಗಯ್ಯನದುರ್ಗ ಕೊಂಡುಕುರಿ ಅರಣ್ಯ ವ್ಯಾಪ್ತಿಯ ಕೆರೆಗಳಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಕ್ರಾಸಿಂಗ್ ನಂತರದ ಕೆರೆಗಳಿಗೆ ಕಾನೂನು ತೊಡಕಿರುವ ಕಾರಣ ಕಾಮಗಾರಿ ಪೂರ್ಣಗೊಳಿಸುವ ಕಾರ್ಯ ಬಾಕಿ ಇದೆ. ತಕ್ಷಣ ಎಂಜಿನಿಯರ್‌ಗಳು ಕ್ರಮ ಕೈಗೊಂಡು ಕಾಮಗಾರಿ ಮುಗಿಸಬೇಕು ಎಂದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಲೇರುದ್ರೇಶ್, ತರಳಬಾಳು ಮಠದ ಸಮಿತಿ ಸದಸ್ಯ ನಾಗರಾಜ್, ನಿವೃತ್ತ ಶಿಕ್ಷಕ ಓಂಕಾರಪ್ಪ, ನೀರಾವರಿ ನಿಗದಮ ಎಂಜಿನಿಯರ್ ಶ್ರೀಧರ್, ಚಂದ್ರನಾಯ್ಕ್, ಪಿ. ಸುರೇಶಗೌಡ, ಎಂ.ಎಸ್. ಪಾಟೀಲ್, ಕೆಪಿಸಿಸಿ ಎಸ್‌ಟಿ ಘಟಕ ಅಧ್ಯಕ್ಷ ಕೆ.ಪಿ.ಪಾಲಯ್ಯ, ಶಿವನಗೌಡ, ಕೆಚ್ಚೇನಹಳ್ಳಿ ದೀಪಕ್ ಪಟೇಲ್, ಎನ್ಎಸ್. ರಾಜಣ್ಣ, ಎಂ.ಎಸ್. ಪಾಟೀಲ್, ಕೆ.ಎಂ. ಬಸವರಾಜಪ್ಪ, ಶಂಶೀರ್ ಅಹಮ್ಮದ್ ಇತರರು ಇದ್ದರು.

- - -

ಬಾಕ್ಸ್ * ಶಾಸಕರು ಸಮಿತಿ ರಚಿಸಿ, ಚರ್ಚಿಸಲಿ: ಶಶಿ ಪಾಟೀಲ್‌ ಭರಮಸಾಗರ ಕೆರೆ ಸಮಿತಿ ಅಧ್ಯಕ್ಷ ಚೌಲಿಹಳ್ಳಿ ಶಶಿ ಪಾಟೀಲ್ ಮಾತನಾಡಿ, ಶ್ರೀಗಳು ಆಗಮಕ್ಕೆ ಕೆರೆಯಿಂದ ಕೆರೆಗೆ ರೂಟ್ ಮ್ಯಾಪ್ ಸಿದ್ಧಪಡಿಸಬೇಕು. ದಿನಕ್ಕೆ 8ರಿಂದ 10 ಕೆರೆಗಳನ್ನು ವೀಕ್ಷಣೆಗೆ ಮಾಡಿಸಲು ಯೋಜನೆ ಹಾಕಿಕೊಳ್ಳಬೇಕು. ಈ ನಿಟ್ಟಿನಲ್ಲಿ ಶೀಘ್ರವೇ ಸಮಿತಿ ರಚಿಸಬೇಕು. ಸೆ.24ರಂದು ಹಿರಿಯ ಶ್ರೀಗಳ ಶ್ರದ್ಧಾಂಜಲಿ ಸಮಾರಂಭವಿದೆ. ಅದಕ್ಕೂ ಮುಂಚೆ ಶ್ರೀಗಳ ಕೆರೆ ವೀಕ್ಷಣೆಗೆ ಆಗಮಿಸಬೇಕೋ ಅಥವಾ ಮುಗಿದ ನಂತರ ಆಗಮಿಸಬೇಕೋ ಎಂಬುದನ್ನು ಶಾಸಕರು ಸಮಿತಿ ಜೊತೆ ಚರ್ಚಿಸಿ ನಂತರ ತೀರ್ಮಾನ ಮಾಡಿಕೊಂಡರೆ ಉತ್ತಮ ಎಂದು ಸಲಹೆ ನೀಡಿದರು.

- - - -01ಜೆ.ಜಿ.ಎಲ್1:

ಜಗಳೂರು ಪಟ್ಟಣದ ತರಳಬಾಳು ಕೇಂದ್ರದಲ್ಲಿ ಭಾನುವಾರ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿದರು.