ಭ್ರೂಣಹತ್ಯೆ ತಡೆಗೆ ಕ್ಷಿಪ್ರ ಕಾರ್ಯಪಡೆ ರಚನೆ: ಡಿಸಿ

| Published : Jun 08 2024, 12:30 AM IST

ಸಾರಾಂಶ

ಮಹಾಲಿಂಗಪುರದಲ್ಲಿ ನಡೆದ ಹೆಣ್ಣು ಭ್ರೂಣಹತ್ಯೆ ಮತ್ತು ಗರ್ಭಿಣಿ ಮಹಿಳೆ ಮರಣ ಪ್ರಕರಣ ಮರುಕಳಿಸದಂತೆ ಜಿಲ್ಲಾ ಮಟ್ಟದ ಹಾಗೂ ಉಪವಿಭಾಗ ಮಟ್ಟದ ಸಮಿತಿಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ಭ್ರೂಣಹತ್ಯೆ ಪ್ರಕರಣಗಳನ್ನು ಪತ್ತೆ ಹಚ್ಚಲು ಕ್ಷಿಪ್ರ ಕಾರ್ಯಪಡೆ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮಹಾಲಿಂಗಪುರದಲ್ಲಿ ನಡೆದ ಹೆಣ್ಣು ಭ್ರೂಣಹತ್ಯೆ ಮತ್ತು ಗರ್ಭಿಣಿ ಮಹಿಳೆ ಮರಣ ಪ್ರಕರಣ ಮರುಕಳಿಸದಂತೆ ಜಿಲ್ಲಾ ಮಟ್ಟದ ಹಾಗೂ ಉಪವಿಭಾಗ ಮಟ್ಟದ ಸಮಿತಿಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ಭ್ರೂಣಹತ್ಯೆ ಪ್ರಕರಣಗಳನ್ನು ಪತ್ತೆ ಹಚ್ಚಲು ಕ್ಷಿಪ್ರ ಕಾರ್ಯಪಡೆ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ತಿಳಿಸಿದ್ದಾರೆ.

ಈ ಕುರಿತು ಪ್ರಕಣೆ ನೀಡಿರುವ ಅವರು, ಜಿಲ್ಲಾ ಮಟ್ಟದ ಕಂದಾಯ ಇಲಾಖೆ, ಪೊಲೀಸ್, ಆರೋಗ್ಯ ಮತ್ತು ನಗರಾಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ತಂಡ ರಚಿಸಲಾಗಿದೆ. ಪಿಸಿ ಮತ್ತು ಪಿ.ಎನ್.ಡಿ.ಟಿ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನದಲ್ಲಿ ತಂಡ ನಿರ್ವನಿರ್ವಹಿಸಬೇಕಾದ ಕರ್ತವ್ಯದ ಬಗ್ಗೆ ತಿಳಿಸಲಾಗಿದೆ. ಕಾಲಕಾಲಕ್ಕೆ ಸ್ಕ್ಯಾನಿಂಗ್ ಸೆಂಟರ್‌ಗಳ ತಪಾಸಣೆ ನಡೆಸುವುದು, ನೂನ್ಯತೆ ಕಂಡುಬಂದಲ್ಲಿ ನಿಗದಿತ ಸಮಯದೊಳಗೆ ಕಾಯ್ದೆಯನುಸಾರ ಕ್ರಮಕೈಗೊಳ್ಳಲು ಜಿಲ್ಲಾ ಸಕ್ಷಮ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲು ತಿಳಿಸಲಾಗಿದೆ.

ಭ್ರೂಣಹತ್ಯೆ ಮತ್ತು ಪತ್ತೆಯಂತಹ ಕಾನೂನು ಬಾಹಿತ ಚಟುವಟಿಕೆ ಕಂಡುಬಂದಲ್ಲಿ ಕೂಡಲೇ ಕಾಯ್ದೆಯನುಸಾರ ಕ್ರಮ ಕೈಗೊಳ್ಳಲು ತಿಳಿಸಲಾಗಿದ್ದು, ಸ್ಕ್ಯಾನಿಂಗ್ ಸೆಂಟರ್‌ಗಳ ವಿರುದ್ಧ ನ್ಯಾಯಾಲಯದಲ್ಲಿ ತ್ವರಿತವಾಗಿ ಪ್ರಕರಣ ದಾಖಲಿಸುವುದು, ರಾಜ್ಯ ಸಕ್ಷಮ ಪ್ರಾಧಿಕಾರದ ಪತ್ರದನ್ವಯ ಗುಪ್ತ ಕಾರ್ಯಾಚರಣೆ ನಡೆಸಲಾಗುತ್ತದೆ. ಪ್ರತಿ ಎರಡು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ನಡೆಸಿ, ಗುಪ್ತ ಕಾರ್ಯಾಚರಣೆ ನಡೆಸಲು ಸಹಾಯ ಮಾಡಲಾಗುತ್ತದೆ. ಜಿಲ್ಲೆಗಳಲ್ಲಿರುವ ಪ್ರತಿಯೊಂದು ಜೆನೆಟಿಕ್ ಕೌನ್ಸೆಲಿಂಗ್ ಕೇಂದ್ರ, ಜೆನೆಟಿಕ್ ಲ್ಯಾಬ್‌ಗಳು, ಜೆನೆಟಿಕ್‌ ಕ್ಲಿನಿಕ್‌ಗಳು, ಅಲ್ಟ್ರಾಸೌಂಡ್‌ ಕೇಂದ್ರಗಳು ಇತ್ಯಾದಿಗಳ ಮೇಲೆ ದಾಳಿ ನಡೆಸಿ ಅಗತ್ಯ ಕಾನೂನು ಕ್ರಮ ಜರುಗಿಸಲು ನಿದೇರ್ಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಅಧಿಕಾರಿಗಳ ಅಮಾನತುಗೊಳಿಸಲು ಶಿಫಾರಸು:

ಭ್ರೂಣಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದ ಅಧಿಕಾರಿಗಳಗಳಿಗೆ ನೋಟಿಸ್ ನೀಡಲಾಗಿತ್ತು. ನೋಟಿಸ್ ಗೆ ನೀಡಿದ ಉತ್ತರ ಪರಿಶೀಲಿಸಿದಾಗ ಅದರಲ್ಲಿ ಕರ್ತವ್ಯ ನಿರ್ಲಕ್ಷ್ಯ ತೋರಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಈ ಆರೋಪದ ಮೇಲೆ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಡಿ.ಬಿ. ಪಟ್ಟಣಶೆಟ್ಟಿ ಅವರನ್ನು ಅಮಾನತುಗೊಳಿಸಲು ಹಾಗೂ ತಾಲೂಕಿನ ವೈದ್ಯಾಧಿಕಾರಿ ಡಾ.ವೆಂಕಟೇಶ ಮಲಘಾಣ ಅವರ ವಿರುದ್ಧ ಇಲಾಖೆ ವಿಚಾರಣೆ ನಡೆಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ.ರಂದೀಪ್ ಅವರಿಗೆ ಶಿಫಾರಸು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ತಿಳಿಸಿದ್ದಾರೆ.

ಜಿಲ್ಲಾ ಸಕ್ಷಮ ಪ್ರಾಧಿಕಾರಕ್ಕೆ ಜಿಲ್ಲಾಧಿಕಾರಿ ನೇಮಕ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಗರ್ಭಪೂರ್ವ ಮತ್ತು ಪ್ರಸವಪೂರ್ವ ಪತ್ತೆ ಹಚ್ಚುವ ತಂತ್ರಗಳು ಕಾಯ್ದೆ 1994 ಮತ್ತು ನಿಯಮಗಳು 1996 ಇವುಗಳನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜಿಲ್ಲಾಧಿಕಾರಿಗಳನ್ನು ಜಿಲ್ಲಾಮಟ್ಟದ ಜಿಲ್ಲಾ ಸಕ್ಷಮ ಪ್ರಾಧಿಕಾರಿಯಾಗಿ ನೇಮಕ ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಅಲ್ಲದೆ, ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಪತ್ತೆ ಹಚ್ಚುವ ತಂತ್ರಗಳು ಕಾಯ್ದೆ 1994ರ ಸೆಕ್ಷನ್‌ 17(3)(ಬಿ) ರಲ್ಲಿ ನೀಡಲ್ಪಟ್ಟಿರುವ ಅಧಿಕಾರ ಚಲಾಯಿಸಿ ಉಪ ವಿಭಾಗಾಧಿಕಾರಿಗಳನ್ನು ಅವರ ಉಪವಿಭಾಗಗಳಿಗೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರಿಗಳನ್ನಾಗಿ ನೇಮಿಸಲಾಗಿದ್ದು, ಹೆಣ್ಣು ಭ್ರೂಣಹತ್ಯೆಗೆ ಸಂಬಂಧಿಸಿದಂತೆ ದೂರುಗಳು ಇದ್ದಲ್ಲಿ ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಬಹುದಾಗಿದೆ ಎಂದವರು ತಿಳಿಸಿದ್ದಾರೆ.