ಪ್ರಾಕೃತಿಕ ವಿಕೋಪ ಎದುರಿಸಲು ಉಪ ಸಮಿತಿ ರಚನೆ: ಪುತ್ತೂರು ಎಸಿ

| Published : May 22 2024, 12:59 AM IST

ಪ್ರಾಕೃತಿಕ ವಿಕೋಪ ಎದುರಿಸಲು ಉಪ ಸಮಿತಿ ರಚನೆ: ಪುತ್ತೂರು ಎಸಿ
Share this Article
  • FB
  • TW
  • Linkdin
  • Email

ಸಾರಾಂಶ

ಉಪ್ಪಿನಂಗಡಿಯಲ್ಲಿ ಸಾಮಾನ್ಯವಾಗಿ ಪ್ರತೀ ವರ್ಷ ನೆರಹಾವಳಿಯಿಂದ ಸಮಸ್ಯೆ ಉಂಟಾಗುತ್ತದೆ. ಇಲ್ಲಿ ಯಾಂತ್ರಿಕದೋಣಿ ವ್ಯವಸ್ಥೆ, ಮುಳುಗುತಜ್ಞರ ವ್ಯವಸ್ಥೆ ಮಾಡಲಾಗಿದೆ ಎಂದು ಎಸಿ ಜುಬಿನ್‌ ಮಹೋಪಾತ್ರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

ಮಳೆಗಾಲದಲ್ಲಿ ಸಂಭವಿಸುವ ಪ್ರಕೃತಿ ವಿಕೋಪ ಎದುರಿಸಲು ಪುತ್ತೂರು ಉಪವಿಭಾಗದಲ್ಲಿ ಸಿದ್ಧತೆ ಮಾಡಲಾಗಿದೆ. ಜಿಲ್ಲಾಧಿಕಾರಿ ನಿರ್ದೇಶನದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿನ ಚಾರ್ಮಾಡಿ ಹಾಗೂ ಶಿರಾಡಿ ಘಾಟ್ ರಸ್ತೆಗಳಲ್ಲಿ ಮಳೆಗಾಲದಲ್ಲಿ ಉಂಟಾಗಬಹುದಾದ ಅನಾನುಕೂಲತೆ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ನಗರ ಮತ್ತು ಗ್ರಾಮೀಣ ಮಟ್ಟದಲ್ಲಿ ಪ್ರಾಕೃತಿಕ ವಿಕೋಪ ಉಪಸಮಿತಿಗಳನ್ನು ರಚಿಸಲಾಗಿದೆ ಎಂದು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ತಿಳಿಸಿದ್ದಾರೆ.

ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಳೆಗಾಲದಲ್ಲಿ ತುರ್ತು ವ್ಯವಸ್ಥೆ ಕೈಗೊಳ್ಳಲು ಮೆಸ್ಕಾಂ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ಎಲ್ಲಾ ಇಲಾಖಾಧಿಕಾರಿಗಳ ಸಮನ್ವಯ ತಂಡ ರಚನೆ ಮಾಡಲಾಗುವುದು. ಆ ಮೂಲಕ ಪ್ರಾಣಹಾನಿ ಮತ್ತು ಆಸ್ತಿ ಹಾನಿ ತಡೆಯುವ ಪ್ರಯತ್ನ ನಡೆಸಲಾಗುವುದು. ಘಾಟ್ ಭಾಗದಲ್ಲಿ ಘಟನೆಗಳು ನಡೆದಾಗ ತಕ್ಷಣ ಮಾಹಿತಿ ಪಡೆದುಕೊಳ್ಳಲು ಸ್ಥಳೀಯ ಉಪಸಮಿತಿ ಹೆಚ್ಚು ಕೆಲಸ ಮಾಡಲಿದೆ. ಪಿಡಿಒ ನೇತೃತ್ವದ ಪಂಚಾಯಿತಿ ಮಟ್ಟದ ಉಪಸಮಿತಿ ಹಾಗೂ ನಗರದಲ್ಲಿ ೩ ವಲಯಗಳನ್ನು ಒಳಗೊಂಡಂತೆ ಸಮಿತಿ ಮಾಡಲಾಗುವುದು. ಈ ಸಮಿತಿಗಳು ಜವಾಬ್ದಾರಿ ವಹಿಸಿಕೊಂಡು ಕಾರ್ಯೋನ್ಮುಖವಾಗಲಿದೆ ಎಂದು ವಿವರಿಸಿದರು.ಈ ಸಮಿತಿ ಹಂತ ಮೀರಿದ ಘಟನೆಗಳು ಸಂಭವಿಸಿದಲ್ಲಿ ತಾಲೂಕು ಮಟ್ಟದ ಪ್ರಾಕೃತಿಕ ವಿಕೋಪ ರಕ್ಷಣಾ ಸಮಿತಿ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಪಡೆಗಳ ನೆರವು ಪಡೆದುಕೊಳ್ಳಲು ಯೋಜನೆ ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಅಣಕು ಪ್ರಾತ್ಯಕ್ಷಿಕೆ: ಪ್ರಾಕೃತಿಕ ವಿಕೋಪಕ್ಕೆ ಸಂಬಧಿಸಿದಂತೆ ಪುತ್ತೂರು ಉಪವಿಭಾಗದಲ್ಲಿ ವಿವಿಧ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಅಣಕು ಪ್ರಾತ್ಯಕ್ಷಿಕೆಗಳನ್ನು ನಡೆಸಿ ಜಾಗೃತಿ ಮೂಡಿಲಾಗುತ್ತಿದೆ. ಅಣಕು ಪ್ರದರ್ಶನಕ್ಕೆ ಜನತೆಯಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಪ್ರಾಕೃತಿಕ ವಿಕೋಪಗಳು ಉಂಟಾದಾಗ ತಕ್ಷಣ ಮಾಡಿಕೊಳ್ಳಬೇಕಾದ ವ್ಯವಸ್ಥೆಗಳನ್ನು ರೂಪಿಸಲು ಯೋಜಿಸಲಾದ ಈ ಅಣಕು ಪ್ರದರ್ಶನದಲ್ಲಿ ಇಲಾಖೆಯ ಅಧಿಕಾರಿಗಳ ಜತೆಗೆ ಜನತೆಯೂ ಆಸಕ್ತಿಯಿಂದ ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಪುತ್ತೂರು ನಗರದಲ್ಲಿ ರಾಜಕಾಲುವೆಗಳ ಸ್ವಚ್ಛತೆ ನಡೆಸಿದಂತೆ ಸುಬ್ರಹ್ಮಣ್ಯ ದೇವಳದ ‘ದರ್ಪಣ ತೀರ್ಥ’ದ ಭಾಗದಲ್ಲಿಯೂ ಸ್ವಚ್ಛತೆ ಕಾರ್ಯಕ್ರಮ ಮಾಡಲಾಗಿದೆ. ಉಪವಿಭಾಗದ ಎಲ್ಲಾ ತಾಲೂಕುಗಳಲ್ಲಿಯೂ ಕಾಲುವೆಗಳನ್ನು ಸ್ವಚ್ಛಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸುಬ್ರಹ್ಮಣ್ಯದಲ್ಲಿರುವ ಮುಳುಗುಸೇತುವೆ ಬಳಿ ಕಾವಲುಗಾರರನ್ನು ನೇಮಕ ಮಾಡಲಾಗುವುದು. ಮುಂಗಾರು ಮಳೆಯ ಸಂದರ್ಭದಲ್ಲಿ ಸಂಭಾವ್ಯ ಅಪಾಯಗಳ ವೇಳೆ ಜನತೆಯ ರಕ್ಷಣೆಗೆ ಹೋಮ್ ಗಾರ್ಡ್‌ಗಳ ತಂಡವೂ ಕೆಲಸ ಮಾಡಲಿದೆ. ಸುಮಾರು ೭೦ ಅಧಿಕ ಹೋಮ್ ಗಾರ್ಡುಗಳು ಪ್ರಾಕೃತಿಕ ವಿಕೋಪದ ಸಂದರ್ಭ ತಮ್ಮ ಸೇವೆ ನೀಡಲಿದ್ದಾರೆ. ಇದರಲ್ಲಿ ಒಂದು ತಂಡ ಉಪ್ಪಿನಂಗಡಿಯಲ್ಲಿ ಕೆಲಸ ಮಾಡಲಿದೆ ಎಂದು ಮಾಹಿತಿ ನೀಡಿದರು.

ಉಪ್ಪಿನಂಗಡಿಯಲ್ಲಿ ಸಾಮಾನ್ಯವಾಗಿ ಪ್ರತೀ ವರ್ಷ ನೆರಹಾವಳಿಯಿಂದ ಸಮಸ್ಯೆ ಉಂಟಾಗುತ್ತದೆ. ಇಲ್ಲಿ ಯಾಂತ್ರಿಕದೋಣಿ ವ್ಯವಸ್ಥೆ, ಮುಳುಗುತಜ್ಞರ ವ್ಯವಸ್ಥೆ ಮಾಡಲಾಗಿದೆ. ಹೋಮ್ ಗಾರ್ಡ್‌ಗಳ ತಂಡದಲ್ಲಿಯೂ ಮುಳಗುತಜ್ಞರಿದ್ದು, ಅವರನ್ನೂ ವಿವಿಧ ಕಡೆಗಳಲ್ಲಿ ಬಳಕೆ ಮಾಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಮಿಂಚು ಬಂಧಕ ನಿರ್ಮಾಣಕ್ಕೆ ವೈಜ್ಞಾನಿಕವಾಗಿ ಒಂದಷ್ಟು ಪರಿಶೀಲನೆ ಅಗತ್ಯವಿದೆ. ಸಿಡಿಲು ಬಡಿಯುತ್ತಿರುವ ಪ್ರದೇಶ ಜನವಾಸ್ತವ್ಯದ ಸ್ಥಳವಾಗಿರಬೇಕು. ಮಿಂಚು ಬಂಧಕ ನಿರ್ಮಿಸುವ ಭಾಗದ ಕಲ್ಲು, ಮಣ್ಣು, ಅಂತರ್ಜಲದ ಮಟ್ಟ ಪರಿಶೀಲನೆಯಾಗಬೇಕು. ಆದರೂ ಇದರಿಂದ ಶೇ.೧೦೦ ರಷ್ಟು ಫಲಿತಾಂಶ ಪಡೆಯಲು ಸಾಧ್ಯವಿಲ್ಲ. ಒಂದು ಮಿಂಚು ಬಂಧಕ ಅಳವಡಿಕೆಗೆ ರೂ.೨ ಲಕ್ಷಕ್ಕೆ ಹೆಚ್ಚು ವೆಚ್ಚವಾಗುತ್ತದೆ. ಸರ್ಕಾರ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ದಾನಿಗಳ ನೆರವಿನಿಂದ ಉಪವಿಭಾಗದ ಕೆಲ ಭಾಗದಲ್ಲಿಯಾದರೂ ಮಿಂಚು ಬಂಧಕ ನಿರ್ಮಿಸುವ ಚಿಂತನೆ ಇದೆ ಎಂದು ತಿಳಿಸಿದರು.