ಹಿಂಗಣಿ ಸರ್ಕಾರಿ ಶಾಲೆಗೆ ಬೇಕಿದೆ ಕಾಯಕಲ್ಪ

| Published : May 22 2024, 12:59 AM IST

ಸಾರಾಂಶ

ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯಗಳು ಇಲ್ಲ ಎಂಬುದು ಸೇರಿದಂತೆ ನಾನಾ ಕಾರಣಗಳಿಂದ ಜನರು ಮೊದಲೇ ಮಾರುದ್ಧ ದೂರು ಓಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳು ಶಿಥಿಲಾವಸ್ಥೆಗೆ ತಲುಪಿದ್ದು, ವಿದ್ಯಾರ್ಥಿಗಳು ಜೀವ ಭಯದಲ್ಲೇ ಪಾಠ ಕೇಳುವಂತಾಗಿದೆ.

ಶಂಕರ ಹಾವಿನಾಳ

ಕನ್ನಡಪ್ರಭ ವಾರ್ತೆ ಚಡಚಣ

ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯಗಳು ಇಲ್ಲ ಎಂಬುದು ಸೇರಿದಂತೆ ನಾನಾ ಕಾರಣಗಳಿಂದ ಜನರು ಮೊದಲೇ ಮಾರುದ್ಧ ದೂರು ಓಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳು ಶಿಥಿಲಾವಸ್ಥೆಗೆ ತಲುಪಿದ್ದು, ವಿದ್ಯಾರ್ಥಿಗಳು ಜೀವ ಭಯದಲ್ಲೇ ಪಾಠ ಕೇಳುವಂತಾಗಿದೆ.ಇದಕ್ಕೆ ನಿದರ್ಶನ ಎಂಬಂತೆ ತಾಲೂಕಿನ ಹಿಂಗಣಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಇದೀಗ ತಾನೇ ಮಳೆಗಾಲ ಆರಂಭಗೊಂಡಿದೆ. ಬೇಸಿಗೆ ರಜೆ ಮುಗಿಸಿ ವಿದ್ಯಾರ್ಥಿಗಳು ಶಾಲೆಗಳತ್ತ ಹೆಜ್ಜೆ ಇಡಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ, ಶಾಲೆಯ ಕೊಠಡಿ, ಗೋಡೆಗಳು ಬಿರುಕು ಬಿಟ್ಟು ಅಪಾಯಕ್ಕೆ ಆಹ್ವಾನ ನೀಡುವಂತಿವೆ.

ತಾಲೂಕಿನಿಂದ ಸುಮಾರು 25 ಕಿಮೀ ದೂರದಲ್ಲಿರುವ ಹಾಗೂ ಭೀಮಾ ನದಿಗೆ ಹೊಂದಿಕೊಂಡಿದ್ದ ಈ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 310 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅದರಲ್ಲಿ 180ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುತ್ತಾದ್ದಾರೆ. ಆದರೆ ಅವರಿಗೆ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವುದು ಮಾತ್ರ ವಿಪರ್ಯಾಸವೇ ಸರಿ.

1ರಿಂದ ಎಂಟನೇ ತರಗತಿ ಇರುವ ಈ ಶಾಲೆಯಲ್ಲಿ 310 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಏಳು ಜನ ಶಿಕ್ಷಕರನ್ನು ಹೊಂದಿದ ಶಾಲೆ ಸುಮಾರು 50 ವರ್ಷಗಳ ಹಿಂದೆ ನಿರ್ಮಿಸಿರುವ ಮತ್ತು ಅತೀ ಚಿಕ್ಕದಾಗಿರುವ 7 ಕೋಣೆಗಳಿವೆ. ಆದರೆ, ಆ ಕೋಣೆಗಳು ಎಲ್ಲ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳುವಷ್ಟು ಸ್ಥಳಾವಕಾಶವಿಲ್ಲದೇ ಪರದಾಡುವಂತಾಗಿದೆ. ಹೀಗಾಗಿ ಇಲ್ಲಿ ಕೋಣೆಗಳ ನಿರ್ಮಾಣ ಅಗತ್ಯವಾಗಿದೆ.

ಮಳೆ ಬಂದರೆ ಮಕ್ಕಳಿಗೆ ಬಲು ಕಷ್ಟ:

ಶಿಥಿಲಗೊಂಡಿರುವುದರಿಂದ ಚಾವಣಿ ಯಾವ ಸಂದರ್ಭದಲ್ಲಿ ಕುಸಿದು ಬೀಳುತ್ತದೆ ಎಂದು ಜೀವ ಭಯದಲ್ಲಿ ಕಲಿಕೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲ ಬಂತೆಂದರೆ ಸಾಕು ಶಾಲೆಯ ಚಾವಣಿ ಸೋರಿ ಎಲ್ಲ ಕೋಣೆಗಳಲ್ಲೂ ನೀರಿನಿಂದ ಆವರಿಸುತ್ತದೆ. ಇದರಿಂದ ಶಾಲೆಗೆ ರಜೆ ನೀಡಬೇಕು. ಇಲ್ಲವಾದಲ್ಲಿ ವಿದ್ಯಾರ್ಥಿಗಳಿಂದ ಸ್ವಚ್ಛತೆಗೊಳಿಸಿ ಮತ್ತೆ ಶಿಕ್ಷಣ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ ಎನ್ನುತ್ತಾರೆ ಅಲ್ಲಿಯ ವಿದ್ಯಾರ್ಥಿಗಳು.

ಅರ್ಧಕ್ಕೆ ನಿಂತ ಶೌಚಾಲಯ ಕಟ್ಟಡ:

ಮುಖ್ಯ ಶಿಕ್ಷಕರ ಕೋಣೆ ಒಂದು ಮಾತ್ರ ಸರಿಯಾಗಿದೆ. ಶಾಲೆಗೆ ಕಾಂಪೌಂಡ್‌ ವ್ಯವಸ್ಥೆ ಇದ್ದರೂ ದ್ವಾರ ಬಾಗಿಲು ಮಾತ್ರ ಸುವ್ಯವಸ್ಥೆಯಲ್ಲಿ ಇಲ್ಲದಿರುವುದರಿಂದ ಗ್ರಾಮದ ಪುಂಡ ಪೋಕರಿಗಳಿಗೆ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಶೌಚಾಲಯ ನಿರ್ಮಾಣಕ್ಕೆ ಹಣ ಮಂಜೂರಾದರೂ ಶೌಚಾಲಯದ ಕಟ್ಟಡ ಅರ್ಧಕ್ಕೆ ನಿಂತು ವಿದ್ಯಾರ್ಥಿಗಳಿಗೆ ಅನಾಕೂಲವಾಗಿದೆ. ವಿದ್ಯಾರ್ಥಿನಿಯರಿಗೆ ಶೌಚಾಲಯ ವ್ಯವಸ್ಥೆ ಇಲ್ಲದಿರುವುದು ಮಾತ್ರ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗುತ್ತಿದೆ.

ಒಟ್ಟಿನಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ಈಗಾಗಲೇ ಜನರಿಗೆ ತಾತ್ಸಾರ ಉಂಟಾಗಿದೆ. ಇನ್ನಾದರೂ ಅಧಿಕಾರಿಗಳು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಸರ್ಕಾರಿ ಶಾಲೆಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕಾಗಿದೆ. ---

ಕೋಟ್‌

ನಮ್ಮೂರಿನ ಶಾಲೆಗೆ ನಾನು ಅಧ್ಯಕ್ಷನಾಗಿದ್ದು ಹೆಮ್ಮೆ. ಅದಕ್ಕಾಗಿ ಶಾಲೆಗೆ ಬೇಕಾಗಿರುವ ಹಳೆ ಕೋಣೆಗಳನ್ನು ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಾಣ ಮಾಡಲು ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗದಿರುವುದು ನೋವಿನ ಸಂಗತಿ. ಅಲ್ಲದೇ ಶೌಚಾಲಯ ನಿರ್ಮಾಣಕ್ಕೆ ಒತ್ತಾಯಿಸಿದರೂ ಹಾಗೂ ಇಂಡಿ ಮುಖ್ಯ ನ್ಯಾಯಾಧೀಶರು ಆಗಮಿಸಿ ಶೌಚಾಲಯ ಪೂರ್ಣಗೊಳಿಸುವಂತೆ ಹೇಳಿದರೂ ನಿರ್ಮಾಣವಾಗದಿರುವುದು ನೋವು ತಂದಿದೆ.

- ಅಂಬಣ್ಣ ಗುಬ್ಯಾಡ ಎಸ್‌ಡಿಎಂಸಿ ಅಧ್ಯಕ್ಷ

--

ಶಾಲೆಯ ಕೋಣೆಗಳು ಹಳೆಯದಾಗಿವೆ. ಹೊಸ ಕೋಣೆಗಳ ನಿರ್ಮಾಣ ಮಾಡಲುವಂತೆ ಗ್ರಾಮ ಪಂಚಾಯ್ತಿ ಅಧ್ಯಕ್ಷರ ಗಮನಕ್ಕೆ ತಂದಿದ್ದೇನೆ. ಅವರು ಶಾಸಕರ ಗಮನಕ್ಕೆ ತಂದು ಹೊಸ ಕೋಣೆಗಳು ನಿರ್ಮಾಣ ಮಾಡುವ ಭರವಸೆ ನೀಡಿದ್ದಾರೆ.

-ಆರ್ ಜಿ ಭೈರಗೊಂಡ, ಮುಖ್ಯ ಶಿಕ್ಷಕ ಹಿಂಗಣಿ

----

ಹಿಂಗಣಿ ಪ್ರಾಥಮಿಕ ಶಾಲೆಯ ದುಸ್ಥಿತಿಯ ಕುರಿತು ನಮ್ಮ ಗಮನಕ್ಕೆ ಬಂದಿಲ್ಲ. ಖುದ್ದಾಗಿ ಶಾಲೆಗೆ ಭೇಇ ನೀಡಿ ಪರಿಶೀಲಿಸಿ ಹೊಸ ಕಟ್ಟಡ ನಿರ್ಮಾಣ ಮಾಡಲು ಗ್ರಾಮಸ್ಥರು ಒತ್ತಾಯಿಸಿದರೆ ಅವರ ಮನವಿ ಆಧರಿಸಿ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುತ್ತೇವೆ.

-ಎಸ್‌.ಜೆ.ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಚಡಚಣ