ಎಲ್ಲ ಕ್ಷೇತ್ರಗಳಲ್ಲೂ ಯಶಸ್ಸುಗಳಿಸುವ ಶಕ್ತಿ ಮಹಿಳೆಗಿದೆ: ಮಲ್ಲಿಗೆ ವೀರೇಶ್

| Published : Mar 28 2024, 12:46 AM IST

ಎಲ್ಲ ಕ್ಷೇತ್ರಗಳಲ್ಲೂ ಯಶಸ್ಸುಗಳಿಸುವ ಶಕ್ತಿ ಮಹಿಳೆಗಿದೆ: ಮಲ್ಲಿಗೆ ವೀರೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಇಂದು ಮಹಿಳೆ ಎಲ್ಲ ಕ್ಷೇತ್ರಗಳಲ್ಲೂ ಸಾಧನೆಯ ಶಿಖರವೇರಿದ್ದಾಳೆ, ಆದರೆ ಮತದಾನ ಮಾಡುವಲ್ಲಿಯೂ ಅವಳು ಜಾಗೃತಿ ವಹಿಸಬೇಕು. ಮನೆಯಲ್ಲಿ ಪುರುಷರು ಹೇಳಿದ ವ್ಯಕ್ತಿಗಾಗಲಿ ಪಕ್ಷಕ್ಕಾಗಲಿ ಮತ ನೀಡದೆ ತನ್ನ ಅಭಿಪ್ರಾಯ ಮಂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಎಲ್ಲ ಕ್ಷೇತ್ರಗಳಲ್ಲೂ ಯಶಸ್ಸುಗಳಿಸುವ ಶಕ್ತಿ ಮಹಿಳೆಗಿದೆ. ತೆರೆಮರೆಯಲ್ಲಿ ಸರಿದಿರುವವರನ್ನು ಬೆಳಕಿಗೆ ತರುವ ಕಾಯಕವನ್ನು ಸಂಘ ಸಂಸ್ಥೆಗಳು ಮಾಡಬೇಕು ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಮಲ್ಲಿಗೆ ವೀರೇಶ್ ಹೇಳಿದರು.

ಸಖಿ ಫೌಂಡೇಶನ್ ಮತ್ತು ಸೂರ್ಯ ಚಾರಿಟಬಲ್ ಟ್ರಸ್ಟ್ ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆಯ ’ಸಖಿ ಸಂಭ್ರಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದು ಮಹಿಳೆ ಎಲ್ಲ ಕ್ಷೇತ್ರಗಳಲ್ಲೂ ಸಾಧನೆಯ ಶಿಖರವೇರಿದ್ದಾಳೆ, ಆದರೆ ಮತದಾನ ಮಾಡುವಲ್ಲಿಯೂ ಅವಳು ಜಾಗೃತಿ ವಹಿಸಬೇಕು. ಮನೆಯಲ್ಲಿ ಪುರುಷರು ಹೇಳಿದ ವ್ಯಕ್ತಿಗಾಗಲಿ ಪಕ್ಷಕ್ಕಾಗಲಿ ಮತ ನೀಡದೆ ತನ್ನ ಅಭಿಪ್ರಾಯ ಮಂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು.

ಸುಧಾಯೋಗಣ್ಣ, ಜಯಲಕ್ಷ್ಮಿ ವೆಂಕಟರಾಮು, ಪುಷ್ಪ ಅಯ್ಯಂಗಾರ್, ವಿದುಷಿ ನೇತ್ರಾ ನಂದನ್, ಸುಮತಿ ಸುಬ್ರಹ್ಮಣ್ಯ ಅವರಿಗೆ ಸ್ಫೂರ್ತಿ ಸಖಿ ಪ್ರಶಸ್ತಿ ಪ್ರದಾನ ಮಾಡಿದರು.

ಸ್ವಾಸ್ಥ್ಯ ಸಮಾಜಕ್ಕಾಗಿ ಸಖಿ ಮಾನವ ಸರಪಳಿ ಕಾರ್ಯಕ್ರಮದಲ್ಲಿ ವಿಷಯ ಮಂಡಿಸಿದ ಸಾಹಿತಿ ಬಿ.ಆರ್. ನಾಗರತ್ನ ಅವರು, ಆರೋಗ್ಯಕರ ಸಮಾಜ ನಿರ್ಮಾಣ ಮಾಡುವಲ್ಲಿ ಮಹಿಳೆಯ ಪಾತ್ರ ಪ್ರಮುಖವಾಗಿರುತ್ತದೆ. ಪ್ರತಿ ಮನೆಯ ಹೆಣ್ಣು ತನ್ನ ಮನೆಯ ಸದಸ್ಯರನ್ನು ಉತ್ತಮ ನಾಗರೀಕರನ್ನಾಗಿ ಮಾಡುವಲ್ಲಿ ಆಸಕ್ತಿ ತೋರಿದರೆ ಅಲ್ಲಿ ಯಾವುದೇ ಅವ್ಯವಸ್ಥೆ ಇರುವುದಿಲ್ಲ ಎಂದರು.

ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ದೇಸೀ ಪಾನೀಯ ಸ್ಪರ್ಧೆ, ಸೂಪರ್ ಅತ್ತೆ ಸಖತ್ ಸೊಸೆ, ಸಖಿಗೊಂದು ಸ್ಯಾರಿ ಎಂಬ ಆಟಗಳನ್ನು ಆಯೋಜಿಸಿತ್ತು.

ಸೂಪರ್ ಅತ್ತೆ ಸಖತ್ ಸೊಸೆಯಾಗಿ ಭ್ರಮರವಾಣಿ ಹಾಗೂ ಮಾಲಿನಿ ವಿಜೇತರಾದರು. ಕೆ.ಪಿ. ರಂಜಿನಿ, ಮಾಲಿನಿ, ರತ್ನರವರು ಸೀರೆಯ ನಿಖರವಾದ ಬೆಲೆಯನ್ನು ಹೇಳಿ ಸೀರೆಯನ್ನು ಬಹುಮಾನವಾಗಿ ಪಡೆದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಸಮಾಜ ಸೇವಕ ರಘುರಾಂ ವಾಜಪೇಯಿ ಹಾಗೂ ಸಂಸ್ಥೆಯ ಸಂಸ್ಥಾಪನಾ ಕಾರ್ಯದರ್ಶಿ ಗಾಯತ್ರಿ ಸುಂದರೇಶ್ ಇದ್ದರು.