ಹುಟ್ಟೂರಿಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿ

| Published : Aug 09 2024, 12:34 AM IST

ಹುಟ್ಟೂರಿಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮ ದೇವತೆ ಗೋಗಾಲಮ್ಮನ ಗುಡಿಗೆ ಹೋಗಿ ದೇವಿ ದರ್ಶನ ಪಡೆದರು. ತಾವು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಕೋಟ್ಯಂತರ ರು. ಅನುದಾನ ನಿಡಿ ಜೀರ್ಣೋದ್ಧಾರಗೊಳಿಸಿದ್ದ ಗ್ರಾಮದ ಈಶ್ವರ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಕಾಮಗಾರಿಗಳನ್ನು ವೀಕ್ಷಿಸಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹುಟ್ಟೂರು ತಾಲೂಕಿನ ಬೂಕನಕೆರೆಗೆ ಆಗಮಿಸಿ ಗ್ರಾಮ ದೇವತೆ ಗೋಗಾಲಮ್ಮ ಮತ್ತು ಮನೆ ದೇವರು ಸ್ವತಂತ್ರ ಸಿದ್ದಲಿಂಗೇಶ್ವರರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಗವೀಮಠದ ಚನ್ನವೀರ ಶಿವಾಚಾರ್ಯ ಸ್ವಾಮೀಜಿಗಳಿಂದ ಆರ್ಶೀವಾದ ಪಡೆದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಮಾಲಾರ್ಪಣೆ ಮಾಡಿ ಸ್ವಾಗತಿಸಿದ ನಂತರ ಬಿ.ಎಸ್.ಯಡಿಯೂರಪ್ಪರೊಂದಿಗೆ ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡರು.

ಶಾಸಕರೊಂದಿಗೆ ಬೂಕನಕೆರೆ ಗ್ರಾಮಸ್ಥರು ಮಣ್ಣಿನ ಮಗ ಬಿ.ಎಸ್.ಯಡಿಯೂರಪ್ಪ ಅವರನ್ನು ಸಂಭ್ರಮದಿಂದ ಬರಮಾಡಿಕೊಂಡರು. ನಂತರ ಕುಟುಂಬದ ಸದಸ್ಯರು ಮತ್ತು ಗ್ರಾಮಸ್ಥರೊಂದಿಗೆ ಒಂದಷ್ಟು ಕಾಲ ಕಳೆದು ಗ್ರಾಮಸ್ಥರ ಕುಶಲೋಪರಿ ವಿಚಾರಿಸಿದರು.

ಗ್ರಾಮ ದೇವತೆ ಗೋಗಾಲಮ್ಮನ ಗುಡಿಗೆ ಹೋಗಿ ದೇವಿ ದರ್ಶನ ಪಡೆದರು. ತಾವು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಕೋಟ್ಯಂತರ ರು. ಅನುದಾನ ನಿಡಿ ಜೀರ್ಣೋದ್ಧಾರಗೊಳಿಸಿದ್ದ ಗ್ರಾಮದ ಈಶ್ವರ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಕಾಮಗಾರಿಗಳನ್ನು ವೀಕ್ಷಿಸಿದರು.

ಬೂಕನಕೆರೆಯಿಂದ ಸಮೀಪದ ಗವೀಮಠಕ್ಕೆ ಭೇಟಿ ನೀಡಿದ ಬಿ.ಎಸ್.ಯಡಿಯೂರಪ್ಪ, ಕುಲ ದೇವರಾದ ಸ್ವತಂತ್ರ ಸಿದ್ದಲಿಂಗೇಶ್ವರರ ಗದ್ದುಗೆಗೆ ಪೂಜೆ ಸಲ್ಲಿಸಿ ತೀರ್ಥ ಪ್ರಸಾದ ಪಡೆದರು.

ಸ್ವಚ್ಛತೆಗೆ ಸೂಚನೆ:

ಗವೀಮಠದ ಗದ್ದುಗೆ ಎದುರು ಹರಿಯುತ್ತಿರುವ ಹಳ್ಳದಲ್ಲಿ ಗಿಡ ಗೆಡ್ಡೆಗಳ ತುಂಬಿಕೊಂಡು ಅವ್ಯವಸ್ಥೆ ನೋಡಿ ಬೇಸರಗೊಂಡ ಯಡಿಯೂರಪ್ಪ ಈ ಕ್ಷೇತ್ರ ಪವಾಡ ಪುರುಷರು ಹಾಗೂ ಬಸವೋತ್ತರ ಕಾಲದ ಮಹಾಶರಣ ಸ್ವತಂತ್ರ ಸಿದ್ದಲಿಂಗೇಶ್ವರರ ತಪೋಭೂಮಿ. ಇಂತಹ ಪವಿತ್ರ ಕ್ಷೇತ್ರ ಸದಾ ಸ್ವಚ್ಛತೆಯಿಂದ ಕಂಗೊಳಿಸಬೇಕು ಎಂದು ಅಭಿಪ್ರಾಯಪಟ್ಟರು.

ಕೂಡಲೇ ಹಳ್ಳವನ್ನು ಶೀಘ್ರವೇ ಸ್ವಚ್ಛಗೊಳಿಸುವಂತೆ ವ್ಯಾಪ್ತಿಯ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗೆ ತಿಳಿಸಿ ಎಂದು ಸ್ಥಳೀಯ ಮುಖಂಡರಿಗೆ ಸೂಚಿಸಿದರು.

ಈ ವೇಳೆ ಶಾಸಕ ಎಚ್.ಟಿ.ಮಂಜು, ಗವೀಮಠದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಮೈಮುಲ್ ನಿರ್ದೇಶಕ ಎಸ್.ಸಿ.ಅಶೋಕ್, ತಾಪಂ ಮಾಜಿ ಸದಸ್ಯ ಬೂಕನಕೆರೆ ಹುಲ್ಲೆಗೌಡ, ತಾಲೂಕು ಬಿ.ಎಸ್.ಯಡಿಯೂರಪ್ಪ ಅಭಿಮಾನಿ ಬಳಗದ ಅಧ್ಯಕ್ಷ ಬೂಕನಕೆರೆ ಮದುಸೂದನ್, ಗ್ರಾಮ ಪಂಚಾಯ್ತಿ ಅಧ್ಯಕ್ಷ ಶ್ಯಾಂಪ್ರಸಾದ್ ಸೇರಿದಂತೆ ಬೂಕನಕೆರೆ ಗ್ರಾಮಸ್ಥರು ಮತ್ತು ವೀರಶೈವ ಸಮಾಜದ ಮುಖಂಡರು ಇದ್ದರು.