ಸಾರಾಂಶ
ಮಂಡ್ಯ: ಬಿಜೆಪಿ-ಜೆಡಿಎಸ್ ಮೈತ್ರಿ ನಂತರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮೊದಲ ಬಾರಿಗೆ ಕೇಸರಿ ಶಾಲು ಧರಿಸಿ ಕಮಲ ಪಡೆಯೊಳಗೆ ಕಾಣಿಸಿಕೊಂಡರು. ಸ್ಥಳೀಯ ಜೆಡಿಎಸ್ ನಾಯಕರ ಹೆಗಲ ಮೇಲೂ ಕೇಸರಿ ಶಾಲು ಕಂಡುಬಂದಿದ್ದು ವಿಶೇಷವಾಗಿತ್ತು.
ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ವಿರೋಧಿಸಿ ಹಿಂದೂಪರ ಸಂಘಟನೆಗಳು ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಬೆಂಬಲ ಸೂಚಿಸಲು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಂಡ್ಯ ನಗರಕ್ಕೆ ಆಗಮಿಸಿದ್ದರು.
ಮಾಜಿ ಸಚಿವರಾದ ಸಿ.ಟಿ.ರವಿ, ಕೆ.ಸಿ.ನಾರಾಯಣಗೌಡ, ಮಾಜಿ ಶಾಸಕ ಪ್ರೀತಂಗೌಡ ಇದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಡಿ.ರಮೇಶ್ ಅವರು ಕುಮಾರಸ್ವಾಮಿ ಅವರಿಗಾಗಿ ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಿದ್ದರು.
ಎಚ್‌ಡಿಕೆ ಬಂದ ಕೂಡಲೇ ಅವರನ್ನು ಬಿಜೆಪಿಯವರಿದ್ದ ವೇದಿಕೆಗೆ ಹೋಗಲು ಬಿಡದೆ ವಾಹನವನ್ನೇರಿಸಿದರು. ಅವರೊಂದಿಗೆ ಶಾಸಕ ಎಚ್.ಟಿ.ಮಂಜು,ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಸೇರಿ ಇತರರು ವಾಹನವನ್ನೇರಿದರು.
ಕುಮಾರಸ್ವಾಮಿಯವರನ್ನು ಕಂಡು ಜೆಡಿಎಸ್ ಕಾರ್ಯಕರ್ತರು ಪ್ರೀತಂಗೌಡ ಮಾತನಾಡುತ್ತಿದ್ದರೂ ಶಿಳ್ಳೆ ಹಾಕುತ್ತಿದ್ದರು. ಈ ನಡುವೆಯೂ ಪ್ರೀತಂಗೌಡ ಮಾತು ಮುಂದುವರೆಸಿದರು.
ನಂತರ ಪ್ರೀತಂಗೌಡ ಸಿ.ಟಿ.ರವಿಗೆ ಮಾತನಾಡಲು ಹೇಳಿ ಮೈಕ್ ಕೈಗಿಟ್ಟರು. ಕುಮಾರಸ್ವಾಮಿಯವರಿದ್ದ ವಾಹನದಲ್ಲಿ ಮೈಕ್ ಹಾಗೂ ಧ್ವನಿವರ್ಧಕವಿಲ್ಲದ ಕಾರಣ ಅವರು ಎಲ್ಲರತ್ತ ಕೈಬಿಸುತ್ತಿದ್ದರು.
ಸಿ.ಟಿ.ರವಿ ಮಾತು ಆರಂಭಿಸಿದರು. ಕೆಲಸಮಯದಲ್ಲೇ ಕುಮಾರಸ್ವಾಮಿಯವರನ್ನು ವೇದಿಕೆಗೆ ಬರುವಂತೆ ಆಹ್ವಾನಿಸಿದರು. ಅದರಂತೆ ವಾಹನದಿಂದ ಕೆಳಗಿಳಿದುಬಂದ ಕುಮಾರಸ್ವಾಮಿ ಬಿಜೆಪಿಯವರು ಇದ್ದ ವೇದಿಕೆಗೆ ತೆರಳಿದರು.
ಸ್ಥಳೀಯ ಜೆಡಿಎಸ್ ನಾಯಕರೂ ಅವರನ್ನು ಹಿಂಬಾಲಿಸಿದರು. ಬಿಜೆಪಿಯವರು ತಾವಿದ್ದ ಸ್ಥಳಕ್ಕೇ ಕುಮಾರಸ್ವಾಮಿ ಅವರನ್ನು ಕರೆಸಿಕೊಂಡು ಮುಜುಗರ ಉಂಟುಮಾಡಿದರು.
ವೇದಿಕೆ ಏರಿದ ಕುಮಾರಸ್ವಾಮಿ ಸೇರಿ ಜೆಡಿಎಸ್ ನಾಯಕರಿಗೆ ಸಿ.ಟಿ.ರವಿ ಮತ್ತಿತರರು ಕೇಸರಿ ಶಾಲು ನೀಡಿದರು. ಅದನ್ನು ಹೆಗಲ ಮೇಲೆ ಹಾಕಿಕೊಂಡು ಬಿಜೆಪಿ ನಾಯಕರ ಜೊತೆ ನಿಂತರು.
ಪಾದಯಾತ್ರೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಬಳಿ ಒಂದೇ ಒಂದು ಜೆಡಿಎಸ್ ಬಾವುಟವೂ ಕಂಡುಬರದೆ ಸಂಪೂರ್ಣ ಕೇಸರಿಮಯವಾಗಿತ್ತು.