ಕೊಪ್ಪಳ: ಮಾಜಿ ಸಿಎಂ ಸಿದ್ದರಾಮಯ್ಯ ಕಾರ್ಖಾನೆ ಒಡಂಬಡಿಕೆ ರದ್ದು ಮಾಡಬೇಕಿತ್ತು. ನೂತನ ಸಿಎಂ ಮುಂದೆ ಗೋಳು ತೋಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ಸಿಂಧನೂರು ನಿವಾಸಿ ಹಾಗೂ ಸ್ಲಂ ನಿರ್ಮೂಲನಾ ಹೋರಾಟ ಸಮಿತಿ ಅಧ್ಯಕ್ಷ ಸಬ್ಜ್ ಅಲಿ ಸಾಬ್ ಹೇಳಿಕೆ

ನಗರದ ನಗರಸಭೆ ಮುಂದೆ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತ ರಕ್ಷಣಾ ವೇದಿಕೆಯಿಂದ ಜರುಗುತ್ತಿರುವ ಬಲ್ಡೋಟ ಕಾರ್ಖಾನೆ ಹಠಾವೋ ಹಾಗೂ ಮಾಲಿನ್ಯ ವಿರೋಧಿಸಿ 225ನೇ ದಿನದ ಹೋರಾಟವನ್ನುದ್ದೇಶಿಸಿ ಮಾತನಾಡಿದರು.

ಇಲ್ಲಿರುವ ಸ್ಪಾಂಜ್ ಐರನ್, ಸೀಮೆಂಟ್, ಸ್ಟೀಲ್, ಕ್ರಿಮಿನಾಶಕ, ರಸಗೊಬ್ಬರ, ವಿದ್ಯುತ್ ತಯಾರಿಕೆ ಮಾಡುವ 28 ಕಾರ್ಖಾನೆಗಳನ್ನು ಜಲಾಶಯ, ನದಿ ಪಾತ್ರದಲ್ಲಿ ಸ್ಥಾಪಿಸಲಾಗಿದೆ. ಕಾರ್ಖಾನೆಗಳು ಅಕ್ರಮವಾಗಿ ನೀರು ಬಳಸಿ, ಮಾಲಿನ್ಯದ ತ್ಯಾಜ್ಯವನ್ನು ನೀರಿಗೆ ಬೆರೆಸಿ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ. ಇದೇ ನದಿಯ ನೀರು ಸ್ಥಳೀಯ ಆಡಳಿತಗಳು ನಗರ, ಹಳ್ಳಿಗಳಿಗೆ ಕುಡಿಯಲು ಸರಬುರಾಜು ಮಾಡುತ್ತಿವೆ. ಈ ನೀರು ಕುಡಿಯುವ ಜನರು ಗಂಭೀರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಮೂರು ದಶಕದಲ್ಲಿ ಈ ಕಾರ್ಖಾನೆಗಳಿಂದ ಆದ ನಷ್ಟ ಅಳೆಯಲು ಸಾಧ್ಯವಿಲ್ಲ. ಬಲ್ಡೋಟ ಕಾರ್ಖಾನೆ ಇಷ್ಟು ದೊಡ್ಡ ಮಟ್ಟದ ವಿಸ್ತರಣೆ ಆಗಬಾರದು ಎಂದು ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ತಾತ್ಕಾಲಿಕ ತಡೆ ನೀಡಿ ಇಲ್ಲಿನ ಜನರಿಗೆ ಭರವಸೆ ಮೂಡಿಸಿದರು. ಅವರೊಬ್ಬ ಸಮಾಜವಾದಿ ಹಿನ್ನೆಲೆಯಿಂದ ಬಂದ ಅಗ್ರಗಣ್ಯ ನಾಯಕರಾಗಿದ್ದರು. ಸಿದ್ದರಾಮಯ್ಯ ಶಾಶ್ವತವಾಗಿ ಈ ಕಾರ್ಖಾನೆ ಒಡಬಂಡಿಕೆ ರದ್ದು ಮಾಡಬೇಕಿತ್ತು. ಇದಾಗಿದ್ದರೆ ಇಲ್ಲಿನ ಜನರು ಕೊಂಡಾಡುತ್ತಿದ್ದರು. ಈಗ ಮತ್ತೇ ''''ಬಡೆ ಸಾಬ್ ಆಗಯಾ ಫಿರ್ಸೆ ಶುರು ಕರ್'''' ಎನ್ನುವಂತೆ ಮತ್ತೆ ನೂತನ ಮುಖ್ಯಮಂತ್ರಿ ಮುಂದೆ ಗೋಳು ತೋಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಏನೇ ಆಗಲಿ ಒಗ್ಗಟ್ಟಿನಿಂದ ಹೋರಾಟ ಮಾಡಿ ಜೀವ, ಆರೋಗ್ಯ ಉಳಿಸಿಕೊಳ್ಳೋಣ ಎಂದರು.

ಹೋರಾಟದ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಭೀಮಸೇನ ಕಲಕೇರಿ, ಡಾ. ಬಸವರಾಜ ಪೂಜಾರ, ಮೂಕಪ್ಪ ಮೇಸ್ತ್ರಿ ಬಸಾಪುರ, ಯಮನೂರಪ್ಪ ಹಾಲಳ್ಳಿ ಬಸಾಪುರ, ಶಂಭುಲಿಂಗಪ್ಪ ಹರಗೇರಿ, ನಿವೃತ್ತ ಅಂಚೆ ಅಧಿಕಾರ ರವಿ ಕಾಂತನವರ, ಬಸವರಾಜ ಹೂಗಾರ ಸಿಂಧೋಗಿ, ನಾಗಪ್ಪ ಕಿನ್ನಾಳ, ಬಸವರಾಜಪ್ಪ ಶೆಟ್ಟರ್, ಉಮೇಶ ಗಣಪಾ ಕುಣಿಕೆರಿ, ವೆಂಕಣ್ಣ ಭೀಮಾಚಾರ ಕಟ್ಟಿ, ಶಿವಪ್ಪ ಹಲಗೇರಿ, ಭೀಮಸೇನ ಬಿ. ಕೆ., ಶಿವಪ್ಪ ಜಲ್ಲಿ, ಬಸಪ್ಪ ಕುದ್ರಿಮೋತಿ, ಕೊಟ್ರಪ್ಪ ಅಳ್ಳಿಕೇರಿ, ಗವಿಸಿದ್ದಪ್ಪ ಚಿಕೇನಕೊಪ್ಪ ಇತರರಿದ್ದರು.