ಸಾರಾಂಶ
ಬೀದರ್: ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪೂರ್ (ಪಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರೌಢ ಶಾಲೆಗಳಿಗೆ ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್ ಭೇಟಿ ನೀಡಿ, ಶಾಲಾ ಮಕ್ಕಳ ಸಮಸ್ಯೆ ಆಲಿಸಿ, ಕುಂದುಕೊರತೆಗಳ ಮಾಹಿತಿ ಪಡೆದರು.
ಖಾಶೆಂಪೂರ್ (ಪಿ) ಗ್ರಾಮದ ಶಾಲೆಗಳಿಗೆ ಭೇಟಿ ನೀಡಿದ ಅವರು, ತರಗತಿಗಳಿಗೆ ತೆರಳಿ ಮಕ್ಕಳನ್ನು ಮಾತನಾಡಿಸಿ, ಶಾಲೆಯಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು, ಎಲ್ಲರೂ ಚನ್ನಾಗಿ ವಿದ್ಯಾಭ್ಯಾಸ ಮಾಡಿ ಉತ್ತಮ ಫಲಿತಾಂಶ ಪಡೆದುಕೊಳ್ಳಬೇಕು. ಶಾಲೆಯಲ್ಲಿ ಏನೇ ಸಮಸ್ಯೆಗಳು ಇದ್ದರು ನನ್ನ ಗಮನಕ್ಕೆ ತನ್ನಿ, ಸಂಬಂಧಿಸಿದ ಅಧಿಕಾರಿಗಳಿಗೆ ಮಾತನಾಡಿ ಪರಿಹರಿಸುವ ಕೆಲಸ ನಾನು ಮಾಡುತ್ತೇನೆ ಎಂದರು.ಶಾಲೆಯಲ್ಲಿನ ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಬೆಂಚ್ ವ್ಯವಸ್ಥೆ ಆಗಬೇಕು. ಶಾಲೆ ಕೆಲವು ಕಿಟಕಿ, ಬಾಗಿಲು ಹಾಳಾಗಿದ್ದು ಅವುಗಳ ಸರಿಪಡಿಸಬೇಕು. ನೀರಿನ ವ್ಯವಸ್ಥೆ, ಸ್ಮಾರ್ಟ್ ಕ್ಲಾಸ್, ಸೈನ್ಸ್ ಲ್ಯಾಬ್ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂಬ ಅನೇಕ ಬೇಡಿಕೆಗಳನ್ನು ಗ್ರಾಮಸ್ಥರು, ಶಿಕ್ಷಕರು, ಮಕ್ಕಳು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ಮುಂದಿಟ್ಟರು.
ಈ ವೇಳೆ ಬಂಡೆಪ್ಪ ಖಾಶೆಂಪೂರ್, ಸ್ಥಳದಲ್ಲಿಯೇ ಬಿಇಒ, ಡಿಡಿಪಿಐ, ಜಿಲ್ಲಾ ಪಂಚಾಯಿತಿ ಸಿಎಸ್ ಸೇರಿದಂತೆ ಅನೇಕರಿಗೆ ಕರೆ ಮಾಡಿ ಶಾಲೆಯಲ್ಲಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿ ಕೂಡಲೇ ಸಮಸ್ಯೆ ಪರಿಹರಿಸಲು ತಿಳಿಸಿದರು. ಇದೇ ವೇಳೆ ಶಾಲೆ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಕಟ್ಟಡಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಜಯಶ್ರೀ, ಶಿಕ್ಷಕಿಯರಾದ ಶಶಿಕಲಾ, ಮಾರ್ಥಾ, ಕೋಕಿಲಾ, ರಾಧಾ, ಶಿಕ್ಷಕರಾದ ಪರಮೇಶ್ವರ, ಪ್ರೌಢ ಶಾಲೆ ಮುಖ್ಯ ಶಿಕ್ಷಕಿ ಇಂದುಮತಿ, ಶಿಕ್ಷಕಿಯರಾದ ರಾಜೇಶ್ವರಿ, ಶಶಿಕಲಾ, ಶಿಕ್ಷಕರಾದ ಸಂಜುಕುಮಾರ, ಗ್ರಾಮಸ್ಥರಾದ ವಿಶ್ವನಾಥ ಬಾಲೇಬಾಯಿ, ಶರಣಪ್ಪ ಖಾಶೆಂಪುರ್, ಯೋಗೇಶ್ ವಗ್ಗೆ ಸೇರಿದಂತೆ ಶಿಕ್ಷಕರು, ಮಕ್ಕಳು, ಗ್ರಾಮಸ್ಥರು ಇದ್ದರು.