ಸಾರಾಂಶ
- ಜಗಳೂರು ತಾಲೂಕು ಮಾದಿಗ ಸಮಾಜ ಸಭೆ ಸರ್ಕಾರಕ್ಕೆ ಮುಖಂಡರ ಒತ್ತಾಯ - - - ಕನ್ನಡಪ್ರಭ ವಾರ್ತೆ ಜಗಳೂರು
ಮಾಜಿ ಸಚಿವ ಎಚ್.ಆಂಜನೇಯ ಅವರಿಗೆ ವಿಧಾನ ಪರಿಷತ್ತು ಟಿಕೆಟ್ ನೀಡಿ ಗೆಲ್ಲಿಸಬೇಕು ಎಂದು ಪಟ್ಟಣದ ಆದಿಜಾಂಬವ ವಿದ್ಯಾರ್ಥಿ ನಿಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮುಖಂಡರ ಸಭೆಯಲ್ಲಿ ತಾಲೂಕು ಮಾದಿಗ ಸಮಾಜ ಒತ್ತಾಯಿಸಿದೆ.ಹಿರಿಯ ಮುಖಂಡ ಎಚ್.ಶಂಭುಲಿಂಗಪ್ಪ ಮಾತನಾಡಿ, ವಿಧಾನ ಪರಿಷತ್ತಿನಲ್ಲಿ ಖಾಲಿ ಇರುವ ೧೧ ಸ್ಥಾನಗಳಲ್ಲಿ ಮಾದಿಗ ಸಮಾಜದ ನಾಯಕ ಆಂಜನೇಯ ಅವರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಮಾದಿಗ ಸಮಾಜ ದೊಡ್ಡ ಸಂಖ್ಯೆಯಲ್ಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದರೆ ಸಚಿವರಾಗುತ್ತಿದ್ದರು. ಆದರೆ, ಮತದಾರರ ಕೈ ಹಿಡಿಯಲಿಲ್ಲ. ಹಾಗಂತ ಸುಮ್ಮನೆ ಕೂರದೇ ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟಿಸುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮಾದಿಗ ಸಮಾಜದ ಮತಗಳು ಹೆಚ್ಚು ಬೀಳುವಂತೆ ಮಾಡಿದ್ದಾರೆ. ಆದ್ದರಿಂದ ಸಿಎಂ, ಡಿಸಿಎಂ ಅವರು ಆಂಜನೇಯ ಅವರಿಗೆ ಉತ್ತಮ ಸ್ಥಾನಮಾನ ನೀಡಬೇಕು ಎಂದರು.ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ ಮಾತನಾಡಿ, ದಾವಣಗೆರೆ- ಚಿತ್ರದುರ್ಗ ಅವಳಿ ಜಿಲ್ಲೆಗಳಿಗೆ ಆಂಜನೇಯ ಒಳ್ಳೆಯ ನಾಯಕತ್ವ ಹೊಂದಿದ್ದಾರೆ. ಭವಿಷ್ಯದಲ್ಲಿ ಮಾದಿಗ ಸಮಾಜ ಕಾಂಗ್ರೆಸ್ ಪರವಾಗಿ ಬಲವಾಗಿ ನಿಲ್ಲಬೇಕಾದರೆ ವಿಧಾನ ಪರಿಷತ್ತು ಚುನಾವಣೆಗೆ ಟಿಕೆಟ್ ನೀಡಿ, ಗೆಲ್ಲಿಸಿಕೊಂಡು ಬರಬೇಕು ಎಂದರು.
ಕೆಪಿಸಿಸಿ ಕಾರ್ಮಿಕ ವಿಭಾಗ ರಾಜ್ಯ ಸಂಘಟನಾ ಕಾರ್ಯದರ್ಶಿ ಗುತ್ತಿದುರ್ಗ ರುದ್ರೇಶ್ ಮಾತನಾಡಿ, ಆಂಜನೇಯ ಸಚಿವರಾಗಿದ್ದಾಗ ರಾಜ್ಯದಲ್ಲಿ ಎಸ್ಸಿ-ಎಸ್ಟಿ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸಿದರು. ಸಾವಿರಾರು ಫಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಸಿಕೊಟ್ಟಿದ್ದಾರೆ. ಇಂತಹ ನಾಯಕರ ಅವಶ್ಯಕತೆ ಇದೆ. ಆದ್ದರಿಂದ ಸರ್ಕಾರ ಗಮನಹರಿಸಬೇಕು ಎಂದರು.ಈ ಸಂದರ್ಭದಲ್ಲಿ ಪ.ಪಂ. ಮಾಜಿ ಅಧ್ಯಕ್ಷ ಮಂಜುನಾಥ್, ಮಾಜಿ ನಿವೃತ್ತ ನೌಕರ ಪಾಪಣ್ಣ, ಕೆಪಿಸಿಸಿ ಎಸ್‌ಸಿ ಘಟಕದ ಉಪಾಧ್ಯಕ್ಷ ಸಿ.ಎಂ.ಹೊಳೆ ಮಾರುತಿ, ಮುಖಂಡರಾದ ಹಟ್ಟಿ ತಿಪ್ಪೇಸ್ವಾಮಿ, ಹನುಮಂತಾಪುರ ಶಿವಣ್ಣ, ದೊಣೆಹಳ್ಳಿ ಗ್ರಾಪಂ ಅಧ್ಯಕ್ಷ ತಿಪ್ಪೇಸ್ವಾಮಿ, ಅಣಬೂರು ರೇಣುಕೇಶ್, ದಸಂಸ ಸಂಚಾಲಕ ಸತೀಶ್ ಮಾಚಿಕೆರೆ ಸೇರಿದಂತೆ ಮತ್ತಿತರರಿದ್ದರು.
- - - -23ಜೆ.ಎಲ್.ಆರ್1:ಜಗಳೂರಿನ ಪಟ್ಟಣದ ಆದಿಜಾಂಬ ವಿದ್ಯಾರ್ಥಿ ನಿಲಯದಲ್ಲಿ ಗುರುವಾರ ಮಾಜಿ ಸಚಿವ ಎಚ್.ಆಂಜನೇಯ ಅವರಿಗೆ ವಿಧಾನ ಪರಿಷತ್ತು ಟಿಕೆಟ್ ನೀಡಿ ಗೆಲ್ಲಿಸುವಂತೆ ತಾಲೂಕು ಮಾದಿಗ ಸಮಾಜ ಮುಖಂಡರು ಒತ್ತಾಯಿಸಿದರು.