ಉತ್ತಮ ಕೆಲಸ ಮಾಡುವ ಮೂಲಕ ಎರಡನೇ ಬಾರಿ ಸಿಎಂ ಆಗಿರುವ ಸಿದ್ಧರಾಮಯ್ಯ ಅತಿ ಹೆಚ್ಚಿನ ದಿನಗಳವರೆಗೆ ಸಿಎಂ ಆಗುವ ಮೂಲಕ ಸಾಧನೆ ಮಾಡಿರುವುದು ನಮಗೆ ಸಂತಸ ತಂದಿದೆ ಎಂದು ಮಾಜಿ ಸಚಿವ ವೆಂಕಟರಮಣಪ್ಪ ತಿಳಿಸಿದರು.

ಕನ್ನಡಪ್ರಭವಾರ್ತೆ ಪಾವಗಡ

ಉತ್ತಮ ಕೆಲಸ ಮಾಡುವ ಮೂಲಕ ಎರಡನೇ ಬಾರಿ ಸಿಎಂ ಆಗಿರುವ ಸಿದ್ಧರಾಮಯ್ಯ ಅತಿ ಹೆಚ್ಚಿನ ದಿನಗಳವರೆಗೆ ಸಿಎಂ ಆಗುವ ಮೂಲಕ ಸಾಧನೆ ಮಾಡಿರುವುದು ನಮಗೆ ಸಂತಸ ತಂದಿದೆ ಎಂದು ಮಾಜಿ ಸಚಿವ ವೆಂಕಟರಮಣಪ್ಪ ತಿಳಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ವತಿಯಿಂದ ಬುಧವಾರ ಪಟ್ಟಣದ ನೌಕರರ ಸಂಘದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 2026 ನೇ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.

ಉಳುವವನೆ ಭೂ ಒಡೆಯ ಎಂಬ ಘೋಷಣೆಯೊಂದಿಗೆ 1974ರಲ್ಲಿ ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದ ಕೀರ್ತಿ ದೇವರಾಜು ಅರಸು ಅವರಿಗೆ ಸಲ್ಲಬೇಕಿದೆ. ಎರಡು ಬಾರಿ ಸಿಎಂ ಅಗಿ ರಾಜ್ಯಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದ ಹಿನ್ನಲೆಯಲ್ಲಿ ದೇವರಾಜ ಅರಸು ಅವರು ರಾಜ್ಯದಲ್ಲಿ ದಾಖಲೆ ಸೃಷ್ಟಿಸಿದ್ದರು. ಇವರ ಮಾದರಿಯನ್ನೆ ಅನುಸರಿಸಿದ ಸಿಎಂ ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆ ಸೇರಿದಂತೆ ರಾಜ್ಯಕ್ಕೆ ಉಪಯುಕ್ತ ಹಾಗೂ ಶಾಶ್ವತವಾದ ಅನೇಕ ರೀತಿಯ ಯೋಜನೆ ಜಾರಿಪಡಿಸಿ ಹೆಚ್ಚು ದಿನ ಸಿಎಂ ಅಗಿ ಇತಿಹಾಸ ಸೃಷ್ಟಿಸಿದ್ದಾರೆ ಎಂದರು.

ಕುಡಿಯುವ ನೀರಿನ ವಿಚಾರದಲ್ಲಿ ಪಾವಗಡ ತಾಲೂಕಿಗೆ ನೀರು ತರಿಸುವ ಯೋಜನೆ ಕುರಿತು ಬೆಂಗಳೂರಿನ ಗೃಹದಲ್ಲಿ ಭೇಟಿಯಾಗಿ ಸಮಸ್ಯೆ ಕುರಿತು ಗಮನ ಸೆಳೆದು ಪಟ್ಟುಹಿಡಿದ ಹಿನ್ನೆಲೆಯಲ್ಲಿ 2,350ಕೋಟಿ ವೆಚ್ಚದಲ್ಲಿ ತುಂಗಭದ್ರಾ ಡ್ಯಾಂನಿಂದ ಕುಡಿಯುವ ನೀರು ಸರಬರಾಜು ಮಾಡಲು ಆದೇಶಿಸುವ ಮೂಲಕ ಈ ಭಾಗದ ಜನರ ಬಹುದೊಡ್ಡ ಸಮಸ್ಯೆಗೆ ಪರಿಹಾರ ನೀಡಿದ ಕೀರ್ತಿ ಸಿದ್ಧರಾಮಯ್ಯ ಸಲ್ಲುತ್ತದೆ ಎಂದರು. 13ಸಾವಿರ ಹೆ.ಪ್ರದೇಶದಲ್ಲಿ 2,500ಮೆಗಾ ವ್ಯಾಟ್‌ ಸೋಲಾರ್‌ ವಿದ್ಯುತ್‌ ಉತ್ಪಾದನೆ ಗೆ ಅವಕಾಶ ಕಲ್ಪಿಸಿದ ಅವರ ಕೊಡುಗೆ ಅವಸ್ಮರಣೀಯ ಎಂದರು.

ಈ ವೇಳೆ ತಹಸೀಲ್ದಾರ್‌ ವೈ.ರವಿ, ತಾಪಂ ಇಒ ಮಧುಸೂದನ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ,ಎಚ್‌.ವಿ.ರವಿಕುಮಾರ್, ಮೈಲಾರಪ್ಪ, ಆದಿನಾರಾಯಣಪ್ಪ,ಎನ್.ಆರ್.ಅಶ್ವಥ್, ದೇವೇಂದ್ರಪ್ಪ, ಸುರೇಶ್, ಗಣೇಶ್ ಬಾಬು, ಕಿರಣ್‌ಕುಮಾರ್‌, ಶೇಖರ್ ಬಾಬು, ಮಾರುತೇಶ್, ಗಂಗಾಧರ್ ಉಪಸ್ಥಿತರಿದ್ದರು.