ದೇವೇಗೌಡರ ವಿರುದ್ಧದ ರಾಜಣ್ಣ ಹೇಳಿಕೆಗೆ ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಖಂಡನೆ

| Published : Apr 07 2024, 02:00 AM IST

ದೇವೇಗೌಡರ ವಿರುದ್ಧದ ರಾಜಣ್ಣ ಹೇಳಿಕೆಗೆ ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಖಂಡನೆ
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡಿರುವುದನ್ನು ಖಂಡಿಸುತ್ತೇನೆ ಎಂದು ಬೇಲೂರು ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಹೇಳಿದರು. ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಜಣ್ಣ ವಿರುದ್ಧ ಆಕ್ರೋಶ

ಕನ್ನಡಪ್ರಭ ವಾರ್ತೆ ಹಾಸನ

ತುಮಕೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹನುಮೇಗೌಡರು ನಾಮಪತ್ರ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡಿರುವುದನ್ನು ಖಂಡಿಸುತ್ತೇನೆ ಎಂದು ಬೇಲೂರು ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ‘ದೇವೇಗೌಡರು ಸಾಯುವ ವಯಸ್ಸಿನಲ್ಲಿ ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳಬೇಕಾಗಿತ್ತೇ? ಎಂದು ರಾಜಣ್ಣ ಟೀಕೆ ಮಾಡಿದ್ದಾರೆ. ಸಾಯುವ ವಯಸ್ಸು ಎಷ್ಟು ಇದೆ ಎಂದು ಹೇಳುವುದಕ್ಕೆ ಇವರು ಬ್ರಹ್ಮ ಅಲ್ಲ. ವಯಸ್ಸು ಮುಖ್ಯವಲ್ಲ. ಆ ವಯಸ್ಸಿನ ಇಚ್ಛಾಶಕ್ತಿ ಮುಖ್ಯ, ರಾಷ್ಟ್ರ ಮತ್ತು ರಾಜ್ಯದ ಬಗ್ಗೆ ಚಿಂತನೆ ಇಟ್ಟುಕೊಂಡು ೯೨ನೇ ವಯಸ್ಸಿನಲ್ಲೂ ರಾಜ್ಯಾದ್ಯಂತ ದೇವೇಗೌಡ ಪ್ರವಾಸ ಮಾಡಿದ್ದಾರೆ. ನಾನು ಕಿಂಗ್, ಸ್ಟಾರ್ ಎಂದು ರಾಜಣ್ಣ ಅಂದುಕೊಂಡಿದ್ದಾರೆ. ಆದರೆ ದೇವೇಗೌಡರಿಗೆ ಸಾಯುವ ವಯಸ್ಸು ಎಂದು ಹೇಳಿಕೆ ನೀಡಿರುವುದನ್ನು ಖಂಡಿಸುತ್ತೇವೆ’ ಎಂದು ಕಿಡಿಕಾರಿದರು.

‘ರಾಜಣ್ಣ ಅಗೌರವ ತೋರುವ ಕೆಲಸ ಮಾಡಿದ್ದಾರೆ, ದೇವೇಗೌಡರ ದೇಹಕ್ಕೆ ಮಾತ್ರ ವಯಸ್ಸಾಗಿದೆ, ಆದರೆ ಅವರ ಚಿಂತನೆಗಳಿಗೆ ಎಂದಿಗೂ ವಯಸ್ಸಾಗುವುದಿಲ್ಲ, ಅಪವಿತ್ರ ಮೈತ್ರಿ ಎನ್ನುವ ಕಾಂಗ್ರೆಸ್ ನಾಯಕರು ಈ ಹಿಂದೆ ಜೆಡಿಎಸ್ ಜೊತೆ ಮೈತ್ರಿ ಮಾಡಿದ್ದರು. ಅದು ಅಪವಿತ್ರ ಅಲ್ವಾ’ ಎಂದು ಪ್ರಶ್ನಿಸಿದರು.

‘ಇದೇ ರಾಜಣ್ಣ ಈ ಹಿಂದೆ ಜೆಡಿಎಸ್‌ನಲ್ಲಿ ಶಾಸಕರಾಗಿದ್ದಾಗ ಎಷ್ಟು ಮತ ಪಡೆದಿದ್ದರು ಎಂಬುದನ್ನು ಅವರು ಯೋಚಿಸಬೇಕು. ನಾಯಕ ಸಮಾಜವನ್ನು ಎಸ್ಟಿಗೆ ಸೇರಿಸಲು ದೇವೇಗೌಡರ ಶ್ರಮ ಅಪಾರ, ಅವರ ಹೋರಾಟದ ಫಲವಾಗಿ ಮೀಸಲಾತಿ ಸಿಕ್ಕಿದೆ. ಇಂದು ಎಸ್ಟಿ ಸಮುದಾಯದ ಅನೇಕ ಶಾಸಕರು ರಾಜಕೀಯಕ್ಕೆ ಬರಲು ಕಾರಣ ಆಗಿದೆ ಎಂಬುದನ್ನು ಯೋಚಿಸುವ ಅಗತ್ಯ ಇದೆ. ಕಾಂಗ್ರೆಸ್ ಹೈಕಮಾಂಡ್ ಸಚಿವರಿಗೆ ಈ ಬಾರಿ ಎಂಪಿ ಅಭ್ಯರ್ಥಿಗಳನ್ನು ಗೆಲ್ಲದೇ ಇದ್ದರೆ ತಮ್ಮ ಸಚಿವ ಸ್ಥಾನಗಳಿಗೆ ಕಂಟಕ ಬರಲಿದೆ ಎಂಬ ಸೂಚನೆ ನೀಡಿದ ಹಿನ್ನೆಲೆ ಹತಾಶಯರಾಗಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಹಾಸನ ಜಿಲ್ಲೆಯಲ್ಲಿ ಕೂಡ ಒಗ್ಗಟ್ಟಾಗಿ ಇದ್ದ ಕಾಂಗ್ರೆಸ್‌ನಲ್ಲಿ ಒಡಕು ಸೃಷ್ಟಿ ಮಾಡಿ ಸ್ವಪಕ್ಷದವರ ನಡುವೆ ಗಲಾಟೆ ಮಾಡಿಸುವ ಕೆಲಸ ಮಾಡಿದ್ದಾರೆ’ ಎಂದು ಲೇವಡಿ ಮಾಡಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ದ್ಯಾವೇಗೌಡ ಮಾತನಾಡಿ, ‘ಕಟ್ಟಾಯವು ಹಾಸನಕ್ಕೆ ಸೇರಬೇಕಾದ ಹೋಬಳಿಯನ್ನು ಉದ್ದೇಶಪೂರ್ವಕವಾಗಿ ಜೆಡಿಎಸ್ ಪಕ್ಷದವರು ಸಕಲೇಶಪುರಕ್ಕೆ ಸೇರಿಸಿದರು. ಇದರಿಂದಲೇ ಕಟ್ಟಾಯ ಹೋಬಳಿ ಅಭಿವೃದ್ಧಿಯಾಗಿಲ್ಲ ಎಂದು ಕಾಂಗ್ರೆಸ್ ಪಕ್ಷದ ಶಿವಲಿಂಗೇಗೌಡ ಮತ್ತು ದೇವರಾಜೇಗೌಡ ಹೇಳಿದ್ದಾರೆ. ಕಟ್ಟಾಯ ಹೋಬಳಿಯನ್ನು ಹಾಸನಕ್ಕೆ ಸೇರಿಸಬೇಕೆಂದು ಈ ವಿಚಾರವಾಗಿ ನಾವು ಜಿಲ್ಲಾಧಿಕಾರಿ ಕಚೇರಿ ಹಾಗೂ ಬೆಂಗಳೂರಲ್ಲಿ ಪ್ರತಿಭಟನೆ ಮಾಡಿದ್ದೇವೆ. ಆದರೆ ಕಾಂಗ್ರೆಸ್ ಪಕ್ಷದವರು ಏಕೆ ಪ್ರತಿಭಟಿಸಲಿಲ್ಲ’ ಎಂದು ಪ್ರಶ್ನೆ ಮಾಡಿದರು.

ಮುಖಂಡರಾದ ಸಯ್ಯಾದ್ ಅಕ್ಬರ್, ವಿಶ್ವನಾಥ್, ಜಗದೀಶ್, ಹೇಮರಾಜ್ ಇತರರು ಉಪಸ್ಥಿತರಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಲಿಂಗೇಶ್.