ಸಾರಾಂಶ
ಮಂಗಳೂರಿನ ಉದ್ಯಮಿ, ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರ ಮುಮ್ತಾಝ್ ಆಲಿ(52)ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬುಧವಾರ ಪೊಲೀಸರು ಮತ್ತೆ ಮೂವರನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ ಐದಕ್ಕೆ ಏರಿದೆ. ಮಂಗಳವಾರ ಬಂಧಿತ ಪ್ರಮುಖ ಆರೋಪಿ ಸಹಿತ ಇಬ್ಬರಿಗೆ ನ್ಯಾಯಾಲಯ ಪೊಲೀಸ್ ಕಸ್ಟಡಿ ವಿಧಿಸಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರಿನ ಉದ್ಯಮಿ, ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರ ಮುಮ್ತಾಝ್ ಆಲಿ(52)ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬುಧವಾರ ಪೊಲೀಸರು ಮತ್ತೆ ಮೂವರನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ ಐದಕ್ಕೆ ಏರಿದೆ. ಮಂಗಳವಾರ ಬಂಧಿತ ಪ್ರಮುಖ ಆರೋಪಿ ಸಹಿತ ಇಬ್ಬರಿಗೆ ನ್ಯಾಯಾಲಯ ಪೊಲೀಸ್ ಕಸ್ಟಡಿ ವಿಧಿಸಿದೆ.ಈ ಪ್ರಕರಣದಲ್ಲಿ ಉಳಿದ ಆರೋಪಿಗಳಾದ ಅಬ್ದುಲ್ ಸತ್ತಾರ್, ಮುಸ್ತಾಫಾ ಮತ್ತು ಖಲಂದರ್ ಶಾಫಿ ಎಂಬವರನ್ನು ಬುಧವಾರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೊನೆಯ ಆರೋಪಿ ಕಾರು ಚಾಲಕ ಸಿರಾಜ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ಪ್ರಮುಖ ಆರೋಪಿ ಸುರತ್ಕಲ್ ಕೃಷ್ಣಾಪುರ 7ನೇ ಬ್ಲಾಕ್ ನಿವಾಸಿ ಆಯಿಷಾ ರೆಹಮತ್(41) ಮತ್ತು ಆಕೆಯ ಪತಿ, ಆರೋಪಿ ಶೊಯಿಬ್‌ನನ್ನು ಅಕ್ಟೋಬರ್ 17 ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.ರೆಹಮತ್ ಮತ್ತು ಆಕೆಯ ಪತಿ ಶೊಯಿಬ್‌ನನ್ನು ಸೋಮವಾರ ಸಂಜೆ ಕಲ್ಲಡ್ಕದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಘಟನೆಗೆ ಸಂಬಂಧಿಸಿ ಮಮ್ತಾಝ್ ಆಲಿ ಅವರ ಸಹೋದರ ಹೈದರ್ ಆಲಿ ಎಂಬವರು ರೆಹಮತ್, ಅಬ್ದುಲ್ ಸತ್ತಾರ್, ಖಲಂದರ್ ಶಾಫಿ, ಮುಸ್ತಫಾ, ಶೊಯಿಬ್, ಸಿರಾಜ್ ಎಂಬವರು ಮಾನಸಿಕ ಕಿರುಕುಳ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಶಂಕೆ ವ್ಯಕ್ತಪಡಿಸಿ ಕಾವೂರು ಪೊಲೀಸರಿಗೆ ದೂರು ನೀಡಿದ್ದರು.
ಅವರ ದೂರು ಆಧರಿಸಿ ಐಪಿಸಿ 308(2), 308(5), 352, 351(2) 190 ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.