ಮೂಲ್ಕಿ: ಕಂಬಳದ ಕುರಿತು ಸುಪ್ರಿಂ ಕೋರ್ಟಿನ ತೀರ್ಪಿನ ಬಳಿಕ ಮುಂದಿನ ದಿನಗಳಲ್ಲಿ ಮ್ಯೆಸೂರು ಸೇರಿದಂತೆ ರಾಜ್ಯವ ವಿವಿಧ ಕಡೆ ಕಂಬಳ ನಡೆಯಲು ಹಾದಿ ಸುಗಮವಾಗಿದ್ದು, ಕಂಬಳವು ರಾಷ್ಟ್ರದಾದ್ಯಂತ ಪಸರಿಸಿ ಐಪಿಲ್‌ ಮಾದರಿಯಲ್ಲಿ ಮುಂದುವರಿಯಲಿ ಎಂದು ಬಮುಲ್‌ ಅಧ್ಯಕ್ಷ, ಮಾಜಿ ಸಂಸದ ಡಿ.ಕೆ. ಸುರೇಶ್‌ ಹೇಳಿದರು.

ಮೂಳೂರು-ಅಡ್ಡೂರು ಜೋಡುಕರೆ ಕಂಬಳ ಸಮಿತಿ ವತಿಯಿಂದ ಗುರುಪುರ ಮಾಣಿಬೆಟ್ಟುಗುತ್ತಿನಲ್ಲಿ ಕಂಬಳ ಸಮಿತಿ ಅಧ್ಯಕ್ಷ , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ನೇತೃತ್ವದಲ್ಲಿ ನಡೆದ 3ನೇ ವರ್ಷದ ಮೂಳೂರು-ಅಡ್ಡೂರು ಜೋಡುಕರೆ ಗುರುಪುರ ಕಂಬಳದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇನಾಯತ್‌ ಆಲಿಯವರು ಜಾತ್ಯತೀತದ ಸಂಕೇತವಾಗಿ ಗುರುಪುರದಲ್ಲಿ ಕಂಬಳವನ್ನು ಆಯೋಜಿಸುತ್ತಿದ್ದು, ಎಲ್ಲರಿಗೂ ಸ್ಫೂರ್ತಿ ನೀಡಿದೆ. ಕಂಬಳವು ಕ್ರೀಡೆಯ ಜೊತೆಗೆ ಧಾರ್ಮಿಕ ಕಾರ್ಯಕ್ರಮವಾಗಿದ್ದು, ನಮ್ಮ ಸಂಸ್ಕೃತಿ, ಧರ್ಮ, ಪರಂಪರೆಯನ್ನು ಉಳಿಸುವ ಕಾರ್ಯ ಯುವ ಪೀಳಿಗೆ ಮೂಲಕ ಮುಂದುವರಿಯಬೇಕು. ಇಂದಿನ ಬದಲಾವಣೆಯ ದಿನಗಳಲ್ಲಿ ಕಂಬಳದಲ್ಲಿ ಕೂಡ ಬದಲಾವಣೆ ನಡೆಯುತ್ತಿದ್ದು, ಕಂಬಳದ ಕೋಣಗಳು ಶ್ರಮಿಕರ ತಯಾರಿ, ಪ್ರಯತ್ನದ ಮೂಲಕ ಗೆಲುವನ್ನು ಸಾಧಿಸುತ್ತಿದ್ದು, ಇಂದಿನ ದುಬಾರಿಯ ದಿನಗಳಲ್ಲಿ ಕೋಣಗಳನ್ನು ಸಾಕುವುದು ಕಷ್ತದ ಕೆಲಸ. ಈಗ 24 ಕಡೆಗಳಲ್ಲಿ ನಡೆಯುತ್ತಿರುವ ಕಂಬಳವು ಮುಂದಿನ ದಿನಗಳಲ್ಲಿ ರಾಷ್ಟ್ರಾದ್ಯಂತ ನಡೆಯುವಂತಾಗಬೇಕು. ನಂದಿನಿ ಉತ್ಪನ್ನಗಳನ್ನು ಉಪಯೋಗಿಸುವ ಮೂಲಕ ರೈತರನ್ನು ಬೆಂಬಲಿಸಿ ಅವರ ಕಣ್ಣೀರನ್ನು ಒರೆಸುವ ಕಾರ್ಯ ಮಾಡಬೇಕೆಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕಂಬಳ ಸಮಿತಿ ವತಿಯಿಂದ ಡಿ.ಕೆ. ಸುರೇಶ್‌ ಅವರನ್ನು ಗೌರವಿಸಲಾಯಿತು. ಕಂಬಳ ಸಮಿತಿ ಅಧ್ಯಕ್ಷ ಇನಾಯತ್‌ ಆಲಿ ಸ್ವಾಗತಿಸಿದರು.

(ಚಿತ್ರ:4ಡಿ ಕೆ ಸುರೇಶ್‌)