ಸಹಕಾರ ಸಂಘಗಳಿಗೆ ಆದ್ಯತೆ ನೀಡಿದ್ದ ಮಾಜಿ ಪ್ರಧಾನಿ ನೆಹರು

| Published : Nov 17 2025, 01:02 AM IST

ಸಾರಾಂಶ

ಜವಾಹರಲಾಲ್ ನೆಹರು ಪ್ರಧಾನಿ ಆಗಿದ್ದಾಗ ಪಂಚವಾರ್ಷಿಕ ಯೋಜನೆಗಳ ಮೂಲಕ ದೇಶದಲ್ಲಿಯೇ ಮೊದಲ ಬಾರಿಗೆ ಸಹಕಾರ ಸಂಘಗಳ ಸ್ಥಾಪನೆಗೆ ಆಶಯ ವ್ಯಕ್ತಪಡಿಸಿದ್ದರು ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದ್ದಾರೆ.

- ಗೊಲ್ಲರಹಳ್ಳಿಯಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಶಾಸಕ ಶಾಂತನಗೌಡ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಜವಾಹರಲಾಲ್ ನೆಹರು ಪ್ರಧಾನಿ ಆಗಿದ್ದಾಗ ಪಂಚವಾರ್ಷಿಕ ಯೋಜನೆಗಳ ಮೂಲಕ ದೇಶದಲ್ಲಿಯೇ ಮೊದಲ ಬಾರಿಗೆ ಸಹಕಾರ ಸಂಘಗಳ ಸ್ಥಾಪನೆಗೆ ಆಶಯ ವ್ಯಕ್ತಪಡಿಸಿದ್ದರು ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ಶನಿವಾರ ತಾಲೂಕಿನ ಗೊಲ್ಲರಹಳ್ಳಿಯಲ್ಲಿರುವ ಶಿಮುಲ್‌ನ ಹಾಲು ಶೀಥಲೀಕರಣ ಕೇಂದ್ರ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿವರ್ಷ ನ.14 ರಿಂದ 21ರವರೆಗೆ ದೇಶಾದ್ಯಂತ ಸಹಕಾರ ಸಪ್ತಾಹ ನಡೆಯುತ್ತಿದೆ. ಅಲ್ಲಿ ಸಂಘದ ಅಭಿವೃದ್ಧಿ ಕುರಿತು ವಿಚಾರಗಳು ಮಂಡನೆಯಾಗಲಿವೆ ಎಂದರು.

ಹಾಲು ಉತ್ಪಾದಕರ ಸಹಕಾರ ಸಂಘಗಳು ಕುಟುಂಬಗಳ ನಿರ್ವಹಣೆ ಜೊತೆಗೆ ಮಕ್ಕಳ ಶಿಕ್ಷಣಕ್ಕೂ ಸಹಕಾರಿಯಾಗಿವೆ. ಎಷ್ಟೋ ತಾಯಂದಿರು ಹಾಲು ಮಾರಾಟದಿಂದ ಬಂದ ಹಣದಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ. ನಮ್ಮ ದಾವಣಗೆರೆ, ಚಿತ್ರದುರ್ಗ ಹಾಗೂ ಶಿವಮೊಗ್ಗ ಈ ಮೂರು ಜಿಲ್ಲೆಗಳ ಹಾಲು ಒಕ್ಕೂಟದಲ್ಲಿ 8 ರಿಂದ 9 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದ್ದರೆ, ದೇಶದಲ್ಲಿ 1 ಕೋಟಿ ಲೀಟರ್‌ಗೂ ಅಧಿಕ ಹಾಲು ಉತ್ಪಾದನೆಯಾಗುತ್ತಿದೆ. ದೇಶದಲ್ಲಿ ನಮ್ಮ ರಾಜ್ಯ ಹಾಲು ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ, ಕೆಎಂಎಫ್ ನಿರ್ದೇಶಕ ಬಿ.ಜಿ. ಬಸವರಾಜಪ್ಪ ಮಾತನಾಡಿ, ಪ್ರತಿಯೊಂದು ಗ್ರಾಮಗಳಲ್ಲಿ ಶಾಲೆ, ಆಸ್ಪತ್ರೆ ಮತ್ತು ಸಹಕಾರ ಸಂಘಗಳು ಇದ್ದರೆ ಆ ಗ್ರಾಮ ಅಭಿವೃದ್ಧಿಯಾದಂತೆ. ಹಾಲಿನ ಸಹಕಾರ ಸಂಘಗಳು ಗ್ರಾಮೀಣ ಭಾಗದ ಆರ್ಥಿಕ ಸ್ಥಿತಿಗತಿಗಳನ್ನು ಉತ್ತಮಪಡಿಸಿವೆ. ನಮ್ಮಲ್ಲಿ 114 ಸಂಘಗಳು ಇದ್ದು, ಅವೆಲ್ಲವೂ ಲಾಭದಾಯಕವಾಗಿವೆ ಎಂದು ಹೇಳಿದರು.

ಸಮಾರಂಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಕೆ. ಬಸಪ್ಪ, ಡಿ.ಜಿ. ವಿಶ್ವನಾಥ್, ಸಹಕಾರಿ ಧುರೀಣ ಜಗದೀಶಪ್ಪ ಬಣಕಾರ್ ಇತರರು ಮಾತನಾಡಿದರು. ರಾಜ್ಯ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷರಾದ ಮರುಳಸಿದ್ದಪ್ಪ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಎಚ್. ಷಣ್ಮುಖಪ್ಪ, ನಿರ್ದೇಶಕ ಡಿ.ಎಸ್. ಸುರೇಂದ್ರ ಗೌಡ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕೆ.ಜಿ. ರಮೇಶ್, ದಾವಣಗೆರೆ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಸಿರಿಗೆರೆ ರಾಜಣ್ಣ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷೆ ಎಚ್.ಜಿ. ಮಂಜುಳಾ ಗಣೇಶ್, ಎಸ್.ಜಿ. ಶೇಖರ್, ಸಂಜೀವ್ ಕುಮಾರ್, ಮಧು ಶ್ರೀನಿವಾಸ್ ಇತರರು ಉಪಸ್ಥಿತರಿದ್ದರು.

ನಿವೃತ್ತ ಆರ್ಥಶಾಸ್ತ್ರ ಉಪನ್ಯಾಸಕ ಡಾ. ಎಚ್.ಎಸ್. ಮಂಜುನಾತ್ ಉಪನ್ಯಾಸ ನೀಡಿದರು. ಗುಂಡಪ್ಪ ಯರಗಟ್ಟಿ ಸ್ವಾಗತಿಸಿ, ಹೊನ್ನಾಳಿ ಶಿವ ಬ್ಯಾಂಕ್‌ ಕಾರ್ಯದರ್ಶಿ ಕಾರ್ಯಕ್ರಮ ನಿರೂಪಿಸಿದರು. ಹೊನ್ನಾಳಿ ಸಹಕಾರಿ ಅಭಿವೃದ್ಧಿ ಅಧಿಕಾರಿ ನವೀನ್ ಕುಮಾರ್ ಇದ್ದರು.

- - -

(ಕೋಟ್‌) ಸಹಕಾರ ಸಂಘಗಳ ಪಿತಾಮಹ ಸಿದ್ದನಗೌಡ ತಮ್ಮ ಸಹಕಾರ ಚಿಂತನೆಗಳಿಂದ ಮನೆಮಾತಾಗಿದ್ದಾರೆ. ಇಂದು ದೇಶಾದ್ಯಂತ ಸಹಕಾರ ಸಂಘಗಳು ತಲೆಯೆತ್ತಿದ್ದು, ದೇಶದ ಅಭಿವೃದ್ಧಿಗೆ ತಮ್ಮದೇಯಾದ ಕೊಡುಗೆಗಳನ್ನು ನೀಡುತ್ತಿವೆ. ಸಹಕಾರ ಸಂಘಗಳು ಇಲ್ಲದೇ ಹೋಗಿದ್ದರೆ ನಾವು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಪರದಾಡಬೇಕಾಗುತ್ತಿತ್ತು. ಇಂದು ಸಹಕಾರ ಸಂಘಗಳು, ಪತ್ತಿನ ಸಂಘಗಳ ಮೂಲಕ ರೈತರು ಹೈನುಕಾರಿಕೆ ಮಾಡುವವರು ಸುಲಭವಾಗಿ ಸಾಲ ಸೌಲಭ್ಯ ಪಡೆಯಬಹುದು.

- ಎಂ.ಪಿ. ರೇಣುಕಾಚಾರ್ಯ, ಮಾಜಿ ಸಚಿವ.

- - -

-15ಎಚ್.ಎಲ್.ಐ2.ಜೆಪಿಜಿ:

ಕಾರ್ಯಕ್ರಮವನ್ನು ಶಾಸಕ ಡಿ.ಜಿ. ಶಾಂತನಗೌಡ ಉದ್ಘಾಟಿಸಿದರು.