ಹಾಸನ ಜಿಲ್ಲೆಯಲ್ಲಿ ಪ್ರತಿ ತಿಂಗಳು ೪೫-೫೦ ಎಚ್‌ಐವಿ ಪ್ರಕರಣ: ಜಿಲ್ಲಾ ಆರೋಗ್ಯ ಇಲಾಖೆಯ ಡಾ.ಸಂಧ್ಯಾ ಬಿ.

| Published : May 02 2024, 12:18 AM IST

ಹಾಸನ ಜಿಲ್ಲೆಯಲ್ಲಿ ಪ್ರತಿ ತಿಂಗಳು ೪೫-೫೦ ಎಚ್‌ಐವಿ ಪ್ರಕರಣ: ಜಿಲ್ಲಾ ಆರೋಗ್ಯ ಇಲಾಖೆಯ ಡಾ.ಸಂಧ್ಯಾ ಬಿ.
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನ ಜಿಲ್ಲೆಯಲ್ಲಿ ಪ್ರತಿ ತಿಂಗಳು ೪೫ ರಿಂದ ೫೦ ಹೊಸ ಎಚ್‌ಐವಿ ಸೋಂಕಿತ ಪ್ರಕರಣಗಳು ದಾಖಲಾಗುತ್ತಿವೆ. ಅದರಲ್ಲಿಯೂ ಹದಿಯರೆಯದವರೇ ಹೆಚ್ಚು ಆಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಡಾ.ಸಂಧ್ಯಾ ಬಿ. ಹೇಳಿದರು. ಹಾಸನದಲ್ಲಿ ಆಯೋಜಿಸಿದ್ದ ಎಚ್‌ಐವಿ, ಏಡ್ಸ್ ಅರಿವು ಕಾರ್‍ಯಕ್ರಮದಲ್ಲಿ ಮಾತನಾಡಿದರು.

ಎಚ್‌ಐವಿ, ಏಡ್ಸ್‌ ಅರಿವು । ಎಚ್‌ಐವಿನಲ್ಲಿ ಭಾರತವೇ ಮೊದಲು

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲೆಯಲ್ಲಿ ಪ್ರತಿ ತಿಂಗಳು ೪೫ ರಿಂದ ೫೦ ಹೊಸ ಎಚ್‌ಐವಿ ಸೋಂಕಿತ ಪ್ರಕರಣಗಳು ದಾಖಲಾಗುತ್ತಿವೆ. ಅದರಲ್ಲಿಯೂ ಹದಿಯರೆಯದವರೇ ಹೆಚ್ಚು ಆಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಏಡ್ಸ್ ಮತ್ತು ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸಂಧ್ಯಾ ಬಿ. ಆತಂಕ ವ್ಯಕ್ತಪಡಿಸಿದ್ದಾರೆ.

ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು-ಸ್ವಾಯತ್ತ ಕಾಲೇಜಿನ ರೆಡ್ ರಿಬ್ಬನ್ ಘಟಕದ ವತಿಯಿಂದ ಆಯೋಜಿಸಿದ್ದ ಎಚ್‌ಐವಿ, ಏಡ್ಸ್ ಅರಿವು ಕಾರ್‍ಯಕ್ರಮದಲ್ಲಿ ಮಾತನಾಡಿ, ‘ಎಚ್‌ಐವಿ ಪ್ರಕರಣಗಳಲ್ಲಿ ಜೀವನಪೂರ್ತಿ ಚಿಕಿತ್ಸೆ ತೆಗೆದುಕೊಳ್ಳಬೇಕು. ಅಸುರಕ್ಷಿತ ಲೈಂಗಿಕತೆಯಿಂದ, ತಾಯಿಯಿಂದ ಮಗುವಿಗೆ ಬರುವಂತಹದ್ದು, ಎಚ್‌ಐವಿ ಸೋಂಕಿತರ ಸೂಜಿಯನ್ನು ಮತ್ತೆ ಬೇರೆ ವ್ಯಕ್ತಿಗೆ ಉಪಯೋಗಿಸಿದರೆ ಎಚ್‌ಐವಿ ಬರುತ್ತಿದೆ. ತಾಯಿ-ತಂದೆ ಇಬ್ಬರು ಸೋಂಕಿತರಿದ್ದರೂ ಮಕ್ಕಳಿಗೆ ಬಾರದಂತೆ ತಡೆಗಟ್ಟಲು ಈಗ ಚಿಕಿತ್ಸೆ ನೀಡಲಾಗುತ್ತಿದೆ. ಸಂತೆ ಮತ್ತು ಮಾರುಕಟ್ಟೆಗಳಲ್ಲಿ ಟ್ಯಾಟೂ ಹಾಕುವುದರಿಂದಲೂ ಪದೇ ಪದೇ ಅದೇ ಸೂಜಿಯನ್ನು ಬಳಸುವುದರಿಂದ ಸೋಂಕು ಹರಡಬಹುದು. ಡ್ರಗ್ ತೆಗೆದುಕೊಳ್ಳುವಾಗಲೂ ಕೆಲವೊಮ್ಮೆ ಬರಬಹುದು. ಆದರೆ ಹೆಚ್ಚಿನ ಪ್ರಕರಣಗಳು ಅಸುರಕ್ಷಿತ ಲೈಂಗಿಕತೆಯಿಂದಲೇ ದಾಖಲಾಗುತ್ತಿವೆ. ಕೆಲ ಹುಚ್ಚಾಟಕ್ಕೆ ಸಿಲುಕಿ ಎಷ್ಟೋ ಹೆಣ್ಣು ಮಕ್ಕಳು ಈ ರೋಗಕ್ಕೆ ತುತ್ತಾಗುತ್ತಿದ್ದಾರೆ. ಈ ರೀತಿಯ ಜಾಗೃತಿಯನ್ನು ಪ್ರತಿಯೊಬ್ಬರೂ ಪಡೆದರೆ ಎಚ್‌ಐವಿ ಸೋಂಕನ್ನು ನಿಯಂತ್ರಿಸಬಹುದು. ಪದೇ ಪದೇ ಅರಿವು ಕಾರ್‍ಯಕ್ರಮಗಳನ್ನು ನಡೆಸುವ ಅನಿವಾರ್ಯತೆಯಿದೆ. ಪಾಶ್ಚಾತ್ಯ ಸಂಸ್ಕೃತಿಯನ್ನು ಬೇರೆ ಬೇರೆ ವಿಚಾರವನ್ನು ಅನುಕರಿಸುವುದಿದೆ. ಈ ವಿಚಾರವನ್ನು ಅನುಸರಿಸುವುದಿಲ್ಲ. ಎಚ್‌ಐವಿ ಪ್ರಕರಣದಲ್ಲಿ ಭಾರತ ಮೊದಲು ಎಂಬುದು ಆತಂಕಕಾರಿ ವಿಚಾರವಾಗಿದೆ’ ಎಂದು ಹೇಳಿದರು.

ಕಾಲೇಜಿನ ರೆಡ್ ರಿಬ್ಬನ್ ಘಟಕದ ಸಂಚಾಲಕರಾದ ಪ್ರಮೀಳಾ, ‘ಎಚ್‌ಐವಿ ಮತ್ತು ಏಡ್ಸ್ ಅರಿವು ಪ್ರತ್ಯೇಕವಾಗಿ ವಿದ್ಯಾರ್ಥಿಗಳಿಗೆ ತಲುಪಸಲೇಬೇಕು ಎಂಬ ಉದ್ದೇಶದಿಂದ ಕಾರ್‍ಯಕ್ರಮ ಆಯೋಜಿಸಲಾಗಿತ್ತು. ಎಚ್‌ಐವಿ ಎನ್ನುವ ಸೋಂಕು ಬಂದರೆ ವ್ಯಕ್ತಿಯಲ್ಲಿರುವ ರೋಗ ನಿರೋಧಕ ಶಕ್ತಿಯನ್ನ ಕುಂದಿಸುತ್ತದೆ. ಆ ಮೂಲಕ ವ್ಯಕ್ತಿಯ ದೇಹವನ್ನು ಅನೇಕ ಕಾಯಿಲೆಗಳಿಗೆ ಆವಾಸ ಸ್ಥಾನವಾಗಿಸುತ್ತದೆ. ಚಿಕಿತ್ಸೆ ಪಡೆಯದೆ ಹೋದರೆ ೧೦ ವರ್ಷದ ನಂತರ ಏಡ್ಸ್ ಆಗಿ ಪರಿವರ್ತನೆ ಆಗುತ್ತದೆ. ಸೋಂಕಿತ ವ್ಯಕ್ತಿಯನ್ನು ನಾವು ಸಮಾಜದಿಂದ ಮತ್ತು ಮನೆಯಿಂದ ದೂರವಿಡುತ್ತಿರುವುದು ಬೇಸರದ ಸಂಗತಿಯಾಗಿದೆ’ ಎಂದು ತಿಳಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡ್ಯಾಪ್ಕ್ಯೊ ವಿಭಾಗದ ಹಾಸನ ಜಿಲ್ಲಾ ಮೇಲ್ವಿಚಾರಕ ರವಿಕುಮಾರ್ ಬಲ್ಲೇನಹಳ್ಳಿ, ಯುವಜನತೆ ಸಣ್ಣ ಸಣ್ಣ ಆಸೆಗಳಿಗೆ ಮಾರು ಹೋಗಿ ತಮ್ಮ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಸೋಂಕಿತ ಎಷ್ಟೋ ಪ್ರಕರಣಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿ, ಆದರ್ಶಗಳೇ ಇಲ್ಲದಂತೆ ಯುವಜನತೆ ಬದುಕುತ್ತಿದ್ದಾರೆ. ತಂದೆ-ತಾಯಿಗಳು ಎಂದಿಗೂ ತಮ್ಮ ಮಕ್ಕಳನ್ನು ಬಿಟ್ಟುಕೊಡುವುದಿಲ್ಲ ಬೇರೊಬ್ಬರ ಮೇಲೆ ಅದರ ಹೊರೆಯನ್ನು ಹಾಕುತ್ತಾರೆ. ಆದರೆ ಮಕ್ಕಳು ಆ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಏಡ್ಸ್ ಬರುವ ೪ ಮಾರ್ಗಗಳಿಂದ ದೂರವಿರಿ ಎಂದು ಸಲಹೆ ನೀಡಿದರು.

ಪ್ರಾಂಶುಪಾಲ ಡಾ.ಎಂ.ಬಿ.ಇರ್ಷಾದ್ ಮಾತನಾಡಿ, ಪ್ರತಿ ಮನೆಯಲ್ಲಿಯೂ ಹೆಣ್ಣು ಮಕ್ಕಳಿದ್ದಾರೆ. ಅವರ ತಂದೆ-ತಾಯಿಗಳು ನೂರಾರು ಕನಸನ್ನು ಕಾಣುತ್ತಿರುತ್ತಾರೆ. ಜಾಗೃತವಾಗಿ ಜೀವನವನ್ನು ನಡೆಸಬೇಕಾಗಿದೆ. ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳುವುದು ಬಹಳ ಅಗತ್ಯವಿದೆ. ಕ್ಷಣಿಕ ಸುಖ ಬದುಕನ್ನು ಬಲಿ ತೆಗೆದುಕೊಳ್ಳುತ್ತದೆ. ಆಕರ್ಷಣೆಯ ಪ್ರಪಂಚಕ್ಕೆ ಮಾರು ಹೋಗದೆ ಸಮಾಜಕ್ಕೆ ಆಸ್ತಿಯಾಗಬೇಕು ಎಂದು ಹೇಳಿದರು.

ಪತ್ರಾಂಕಿತ ವ್ಯವಸ್ಥಾಪಕ ಸತ್ಯಮೂರ್ತಿ ಕೆ.ಟಿ., ದೈಹಿಕ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕ ಪವನ್ ಜಿ.ಕೆ. ಇದ್ದರು. ರೆಡ್ ರಿಬ್ಬನ್ ಘಟಕದ ಸದಸ್ಯ ಹಾಗೂ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ಗೋಪಾಲ್ ಎಂ.ಪಿ., ಸ್ವಾಗತಿಸಿದರು. ಘಟಕದ ಸದಸ್ಯ ಹಾಗೂ ಸಮಾಜಶಾಸ್ತ್ರ ಸ್ನಾತಕೋತ್ತರ ವಿಭಾಗದ ಸಹ ಪ್ರಾದ್ಯಾಪಕ ಡಾ.ಸುರೇಶ್ ಸಿ. ವಂದಿಸಿದರು.