ಸಾರಾಂಶ
ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)
ಪರಿಸರ ಸಂರಕ್ಷಣೆ, ಅರಣೀಕರಣ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಮತ್ತು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಜತ್ತಿ ಫೌಂಡೇಶನ್ ಬದ್ಧವಾಗಿದೆ. ಮಹಿಳಾ ಸಶಸ್ತ್ರೀಕರಣ ಬೆಳೆಸಲು ಮಹಿಳಾ ಘಟಕ ಆರಂಭಿಸುವ ಮೂಲಕ ಗೃಹೋದ್ಯಮಕ್ಕೆ ಅವಕಾಶ ನೀಡಲು ಚಿಂತನೆಯಲ್ಲಿದ್ದೇವೆ ಎಂದು ಜತ್ತಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಧ್ರುವ ಜತ್ತಿ ಹೇಳಿದರು.ತೇರದಾಳದ ಬಣಜಿಗರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸಿ ಉದ್ಘಾಟಿಸಿ ಮಾತನಾಡಿದ ಅವರು, ಬಣಜಿಗರು ಸರ್ವರೊಡನೆ ಸಮನ್ವತೆಯ ಬದುಕು ನಡೆಸುವ ಜನಾಂಗವಾಗಿದ್ದು, ಮಧುರ ಭಾಷೆಯ ಜೊತೆಗೆ ವ್ಯವಹಾರ ನಿರ್ವಹಣೆಯ ಕುಶಲತೆ ಹೊಂದಿದ್ದಾರೆ. ಕೃಷಿ, ಪರಿಸರ, ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಪ್ರತಿಭಾವಂತರಿಗೆ ನೆರವು ಕಲ್ಪಿಸುವುದು, ಆರ್ಥಿಕವಾಗಿ ಹಿಂದುಳಿದವರಿಗೆ ಸೌಕರ್ಯ ಕಲ್ಪಿಸಿ ಸಮುದಾಯಿಕ ಆರ್ಥಿಕ ಸ್ವಾವಲಂಬನೆ ಮೂಡಿಸುವುದು, ಜತ್ತಿ ಫೌಂಡೇಶನ್ ಕನಸಾಗಿದ್ದು, ಇದಕ್ಕೆ ಸಾರ್ವಜನಿಕರ ಸಹಕಾರ ಬೇಕು. ಪ್ರತಿಭೆಗಳು ಕಮರಿ ಹೋಗದಂತೆ ಮತ್ತು ದೇಶದ ಆಸ್ತಿಯಾಗುವಂತೆ ನೆರವು ನೀಡುವ ಮೂಲಕ ದೇಶದ ಬೌದ್ದಿಕ ಶಕ್ತಿ ಹೆಚ್ಚಳಗೊಳಿಸುವುದು ನಮ್ಮ ಧ್ಯೇಯವಾಗಿದೆ ಎಂದರು.
ಜಮಖಂಡಿ ಅರ್ಬನ್ ಬ್ಯಾಂಕ್ ನಿರ್ದೇಶಕಿ ವೈಶಾಲಿ ಗೊಂದಿ ಮಾತನಾಡಿ, ಶಿಕ್ಷಣದೊಡನೆ ತಾಯಂದಿರು ನಮ್ಮತನದ ಸಂಸ್ಕೃತಿ ನಾಶವಾಗದಂತೆ ಮತ್ತು ಮುಂದಿನ ಪೀಳಿಗೆ ನಮ್ಮ ಸನಾತನ ಪರಂಪರೆ ಮತ್ತು ಸಂಸ್ಕೃತಿ ಕಟ್ಟುನಿಟ್ಟಾಗಿ ಆಚರಿಸುವಂತೆ ಬಾಲ್ಯದಲ್ಲೇ ಮಕ್ಕಳಿಗೆ ಬಣಜಿಗ ಪರಂಪರೆ ರೂಢಿಸಬೇಕೆಂದರು. ಸಾನ್ನಿಧ್ಯ ವಹಿಸಿದ್ದ ಹಳಿಂಗಳಿ ಶರಣಬಸವೇಶ್ವರ ಮಠದ ಶರಣಬಸವ ದೇವರು ನಮ್ಮ ಸಮಾಜ ಮೊದಲು ನಮ್ಮದೇ ಆದ ಸಂಸ್ಕೃತಿ ಮತ್ತು ಸಂಪ್ರದಾಯ ಪಾಲಿಸಬೇಕು. ವಿಶ್ವದೆಲ್ಲೆಡೆ ಎಲ್ಲಿ ವಿಭೂತಿ, ಕುಂಕುಮ, ಗಂಧ, ರುದ್ರಾಕ್ಷಿ ಇದೆಯೋ ಅಲ್ಲೆಲ್ಲ ಭಾರತ ರಾರಾಜಿಸುತ್ತದೆ. ಕ್ರಿಸ್ತಪೂರ್ವ ಕಾಲದಲ್ಲೇ ವೇದ, ಆಗಮ, ಭಾಷ್ಯಗಳನ್ನು ಬರೆದು ಗುರುಕುಲ ಶಿಕ್ಷಣ ನೀಡುತ್ತಿದ್ದು, ಭಾರತದ ಸಂಸ್ಕೃತಿ ನಾಶಕ್ಕೆ ಮೆಕಾಲೆ ಶಿಕ್ಷಣ ಅಳವಡಿಕೆ ಬ್ರಿಟಿಷರ ಕುತಂತ್ರವಾಗಿತ್ತು. ಪ್ರತಿಭೆಗಳಿಗೆ ಭಾರತದಲ್ಲಿ ಎಂದೂ ಬರವಿಲ್ಲ. ನಮ್ಮಲ್ಲಿನ ಪ್ರತಿಭೆಯ ಮೂಲಕವೇ ವಿಶ್ವಾದ್ಯಂತ ಭಾರತೀಯ ಸಂಸ್ಕೃತಿ ಪಸರಿಸುವಂತಾಗಬೇಕು. ಶರಣರು ಕಲ್ಯಾಣ ಕ್ರಾಂತಿಯಲ್ಲಿ ಬಲಿಯಾದರೂ, ಸಂಸ್ಕೃತಿ, ಯೋಗಯುಕ್ತ ಜೀವನ ಶರಣರ ಜೀವನಕ್ರಮವಾಗಿತ್ತು. ಅದರ, ಉಳಿವೆಗೆ ವಚನ ಸಂಪುಟಗಳ ರಕ್ಷಿಸಿ ಜೀವ ಕೊಟ್ಟರೂ ಧರ್ಮ ಬಿಡದ ಪರಂಪರೆ ನಮ್ಮದು. ಕೇವಲ ಅಕ್ಷರ ಕಲಿಯದೇ ಅರಿವು ಬೆಳೆಸಿಕೊಳ್ಳುವ ಮತ್ತು ನಮ್ಮತನದ ಆಚರಣೆ ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಮುಂದಿನ ಪೀಳಿಗೆಗೆ ಧರ್ಮದ ವಾರಸುತನ ನೀಡುವ ಹೊಣೆಗಾರಿಕೆ ನಮ್ಮ ತಾಯಂದಿರ ಮೇಲಿದೆ ಎಂದು ಆಶೀರ್ವಚನ ನೀಡಿದರು.ಅಧ್ಯಕ್ಷ ರಮೇಶ ಪಟ್ಟಣಶೆಟ್ಟಿ, ಬಸವರಾಜ ಅವರಾದಿ, ಅಪ್ಪು ಮಂಗಸೂಳಿ ಉಪಸ್ಥಿತರಿದ್ದರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ದಾಖಲೆ ಮೆರೆದ ಸಮಾಜದ ಪ್ರತಿಭೆಗಳನ್ನು ಗಣ್ಯರು ಸನ್ಮಾನಿಸಿದರು. ಸಾನ್ವಿ ಸೊಟ್ಟಿ ಪ್ರಾರ್ಥಿಸಿದರು. ಗಿರೀಶ ಯಾದವಾಡ ಸ್ವಾಗತಿಸಿದರು. ಸುರೇಶ ಮುಚ್ಚಂಡಿ ಪ್ರಾಸ್ತಾವಿಕ ಮಾತುಗಳಾಡಿದರು. ಶಂಕರ ಮಂಗಸೂಳಿ ವಂದಿಸಿದರು. ಸಭೆಯಲ್ಲಿ ಬಾಬುರಾಜೇಂದ್ರ ಹಂಜಿ, ಡಾ.ಮೋಹನ ನಿಡೋಣಿ, ಡಾ.ಸಿದ್ದು ಹಂಜಿ, ರವಿ ಮಹಾಬಳಶೆಟ್ಟಿ, ಬಸವರಾಜ ಪಟ್ಟಣಶೆಟ್ಟಿ, ವೀರಭದ್ರ ಮಂಗಸೂಳಿ, ದೀಪಾ ಮಹಾಬಳಶೆಟ್ಟಿ, ಶೀತಲ ಹಂದಿಗನೂರ, ಡಾ.ಶಿವಾನಂದ ವಾಲಿ, ಗಿರೀಶ ಬಿಜ್ಜರಗಿ, ಅರುಣ ಯಾದವಾಡ, ಸಂತೋಷ ಪಟ್ಟಣಶೆಟ್ಟಿ, ಸುನಂದಾ ಹಂಜಿ, ವಿದ್ಯಾ ಯಾದವಾಡ, ಪಾರ್ವತಿ ಬಿಜ್ಜರಗಿ, ಸುಪ್ರಿಯಾ ಪಟ್ಟಣಶೆಟ್ಟಿ, ರಮೇಶ ಶೇಡಬಾಳ, ವಿಜಯ ಬಿಜ್ಜರಗಿ ಸೇರಿದಂತೆ ಸಮಾಜದ ಪ್ರಮುಖರಿದ್ದರು.