ಸಾರಾಂಶ
ಸೆ.13 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಮಾಗಡಿಗೆ ಕರೆಸಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.
ಮಾಗಡಿ : ಸೆ.13 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಮಾಗಡಿಗೆ ಕರೆಸಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.
ಡಾ. ಸರ್ವಪಲ್ಲಿ ರಾಧಾಕೃಷ್ಣರವರ ಜನ್ಮದಿನದ ಪ್ರಯುಕ್ತ ತಾಲೂಕು ಹಂತದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಟ್ಟಣದಲ್ಲಿ 9 ಕೋಟಿ ವೆಚ್ಚದಲ್ಲಿ ಆಡಿಟೋರಿಯಂ ನಿರ್ಮಾಣ, 5 ಕೋಟಿ ವೆಚ್ಚದಲ್ಲಿ ಡಿಜಿಟಲ್ ಗ್ರಂಥಾಲಯ, ಹಲವು ವರ್ಷಗಳ ಬೇಡಿಕೆಯಾಗಿರುವ ಗುರುಭವನಕ್ಕೆ 6 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಈಗಾಗಲೇ ಟೆಂಡರ್ ಹಂತದಲ್ಲಿ ಇದ್ದು ಮುಖ್ಯಮಂತ್ರಿಗಳ ವಿಶೇಷ ಅನುದಾನದ ಅಡಿ ನಿರ್ಮಾಣ ಮಾಡಲಾಗುತ್ತಿದೆ. ಜತೆಗೆ ಕುದೂರು ಮತ್ತು ಮಾಗಡಿಯಲ್ಲಿ ಸುಸರ್ಜಿತ ಕ್ರೀಡಾಂಗಣ ನಿರ್ಮಾಣ ಮಾಡಲು ಶಂಕುಸ್ಥಾಪನೆ ಮಾಡಿಸಲಾಗುತ್ತದೆ ಈ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ನಮ್ಮ ಸರ್ಕಾರ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ ಸಿಎಸ್ಆರ್ ಅನುದಾನದ ಅಡಿ ತಾಲೂಕಿನಲ್ಲಿ ದುರಸ್ತಿ ಇರುವ ಶಾಲೆಗಳ ಕಟ್ಟಡಕ್ಕೆ ಅನುದಾನ ಬಿಡುಗಡೆ ಮಾಡಿ ಇನ್ನೂ ಎರಡು ವರ್ಷದಲ್ಲಿ ಯಾವುದೇ ಶಾಲೆಗೂ ಮೂಲಭೂತ ಸೌಲಭ್ಯಗಳ ಕೊರತೆ ಇರದಂತೆ ನೋಡಿಕೊಳ್ಳುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಪಂಚಾಯಿತಿ ಗೊಂದು ಮಾದರಿ ಶಾಲೆ : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಂಸದರಾದ ಡಿ.ಕೆ.ಸುರೇಶ್ ರವರ ಕಲ್ಪನೆಯಂತೆ ಪಂಚಾಯಿತಿಗೊಂದು ಮಾದರಿ ಶಾಲೆಯ ಮೂಲಕ ವಿದ್ಯಾರ್ಥಿಗಳಿಗೆ 1 ರಿಂದ 12ನೇ ತರಗತಿ ಆರಂಭಿಸಿ ಎಲ್ಲಾ ರೀತಿಯ ಸೌಲಭ್ಯವನ್ನು ಕೊಟ್ಟು ಶಿಕ್ಷಕರಿಗೆ ಅಲ್ಲಿಯೇ ಅತಿಥಿ ಭವನ ನಿರ್ಮಾಣ ಮಾಡುವ ಮೂಲಕ ಗುರುಕುಲ ಪದ್ಧತಿಯನ್ನು ಅನುಸರಿಸುವ ಕೆಲಸ ಮಾಡಲಾಗುತ್ತಿದ್ದು ಇದಕ್ಕಾಗಿ ನಮ್ಮ ತಾಲೂಕಿನಲ್ಲಿ 5 ರಿಂದ 6 ಎಕರೆ ಜಾಗವನ್ನು ಪಂಚಾಯಿತಿಗೊಂದು ಮಾದರಿ ಶಾಲೆ ಮಾಡುವ ನಿಟ್ಟಿನಲ್ಲಿ 6 ಕಡೆ ಪಂಚಾಯಿತಿ ಮಾದರಿ ಶಾಲೆ ಮಾಡಲು ಹೊರಟಿದ್ದು ಈ ಮೂಲಕ ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲಾ ಮಕ್ಕಳಿಗೆ ಸಿಗುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಬಾಲಕೃಷ್ಣ ತಿಳಿಸಿದರು.
ತಾಲ್ಲೂಕು ಶಿಕ್ಷಣಾಧಿಕಾರಿ ಚಂದ್ರಶೇಖರ್ ಮಾತನಾಡಿ, ಎನ್‌ಜಿಓಗಳ ಮೂಲಕ ಸರ್ಕಾರಿ ಹೆಚ್ಚಿನ ಸೌಲಭ್ಯಗಳನ್ನು ಕೊಡಿಸುವ ಕೆಲಸ ಮಾಡಲಾಗುತ್ತಿದ್ದು ಮಾಗಡಿ ತಾಲೂಕಿನಲ್ಲಿ ಒಟ್ಟು 850 ಶಿಕ್ಷಕರು ಬೇಕಾಗಿದ್ದು ಇದರಲ್ಲಿ 670 ಶಿಕ್ಷರು ಈಗ ಕೆಲಸ ಮಾಡುತ್ತಿದ್ದು ಉಳಿದ ಶಿಕ್ಷಕರನ್ನು ಅತಿಥಿ ಶಿಕ್ಷಕರ ರೂಪದಲ್ಲಿ ಕೆಲಸ ಮಾಡಿಸಲಾಗುತ್ತಿದೆ ಎಂದರು.
ಉತ್ತಮ ಶಿಕ್ಷಕರು, ನಿವೃತ್ತ ಶಿಕ್ಷಕರು ಮರಣ ಹೊಂದಿದ ಶಿಕ್ಷಕರ ಕುಟುಂಬದ ಸದಸ್ಯರನ್ನು ಸನ್ಮಾನಿಸಲಾಯಿತು ವಿವಿಧ ಕ್ರೀಡೆಯಲ್ಲಿ ವಿಜೇತರಾದ ಶಿಕ್ಷಕರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶರತ್ ಕುಮಾರ್, ತಾಲ್ಲೂಕು ಪಂಚಾಯಿತಿ ಇಒ ಡಿ.ಜೈಪಾಲ್, ಬಮುಲ್ ನಿರ್ದೇಶಕ ನರಸಿಂಹಮೂರ್ತಿ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸಿ.ಪ್ರಕಾಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಕಾರ್ಯದರ್ಶಿ ಟಿ.ಬಿ. ಗುಣಶೇಖರ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ತಿ.ನಾ. ಪದ್ಮನಾಭ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ. ಶ್ರೀನಿವಾಸ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಂ. ಮಂಜುನಾಥ್, ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಚ್. ಲೋಕೇಶ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜಗೋಪಾಲ್, ಸಂಪನ್ಮೂಲ ಅಧಿಕಾರಿ ಗುಲ್ಜಾರ್ ಅಹಮದ್, ಎಚ್.ಕೆ.ಗಂಗಾಧರಯ್ಯ, ಮುನಿಯಪ್ಪ, ನಾರಾಯಣ್, ಶಿಕ್ಷಕರಾದ ಜಯರಾಂ, ಮಲ್ಲೂರ್ ಲೋಕೇಶ್, ಕೆ.ಪಿ.ರಂಗಸ್ವಾಮಿ ಸೇರಿದಂತೆ ತಾಲೂಕಿನ ವಿವಿಧ ಶಾಲೆಯ ಶಿಕ್ಷಕರು ಭಾಗವಹಿಸಿದ್ದರು.