ಮಹಿಳೆಯ ಜತೆ ಅಸಭ್ಯ ವರ್ತನೆ ತೋರಿದ ನಾಲ್ವರಿಗೆ ಜೈಲು

| Published : Nov 06 2024, 12:54 AM IST

ಸಾರಾಂಶ

ದೇವರಾಜ ನಾಗ ನಾಯ್ಕ, ನಾರಾಯಣ ಕರಿಯಾ ನಾಯ್ಕ, ಅಯ್ಯಪ್ಪ ಪುಲಕೇಶಿ ಕುಟ್ಟನ್ ಪಾಲಶರಿ, ಚಂದ್ರಶೇಖರ್ ನಾರಾಯಣ ನಾಯ್ಕಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ, ತೀರ್ಪು ನೀಡಿದೆ.

ಶಿರಸಿ: ಮಹಿಳೆಯ ಜತೆ ಅಸಭ್ಯವಾಗಿ ವರ್ತಿಸಿ ಹಲ್ಲೆ ನಡೆಸಿದ ನಾಲ್ವರು ಆರೋಪಿಗಳಿಗೆ ಕೆಳ ನ್ಯಾಯಾಲಯವು ನೀಡಿದ ಬಿಡುಗಡೆಯ ಆದೇಶದ ವಿರುದ್ಧ ಸರ್ಕಾರದ ಪರ ಸಲ್ಲಿಸಿದ ಮೇಲ್ಮನವಿ ಪುರಸ್ಕರಿಸಿದ ನಗರದ ೧ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.ದೇವರಾಜ ನಾಗ ನಾಯ್ಕ, ನಾರಾಯಣ ಕರಿಯಾ ನಾಯ್ಕ, ಅಯ್ಯಪ್ಪ ಪುಲಕೇಶಿ ಕುಟ್ಟನ್ ಪಾಲಶರಿ, ಚಂದ್ರಶೇಖರ್ ನಾರಾಯಣ ನಾಯ್ಕಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ, ತೀರ್ಪು ನೀಡಿದೆ.ಸಿದ್ದಾಪುರ ತಾಲೂಕಿನ ಕಾನಸೂರಿನಲ್ಲಿ ಮಹಿಳೆ ಹಾಗೂ ಪತಿ ಬಾಡಿಗೆಗೆ ಉಳಿದಿದ್ದರು. ಮನೆಯಲ್ಲಿ ಮಹಿಳೆಯು ಒಬ್ಬಳೇ ಇದ್ದಾಗ ಆರೋಪಿ ದೇವರಾಜ ನಾಗ ನಾಯ್ಕ ಮೂರ್ನಾಲ್ಕು ಬಾರಿ ಮನೆಗೆ ಬಂದು ತಾನು ಎಲ್‌ಐಸಿ ಏಜೆಂಟ್ ಎಂದು ಹೇಳಿ ಪಾಲಿಸಿ ಮಾಡಿಸಿ ಎಂದು ದುಂಬಾಲು ಬಿದ್ದಿದ್ದು, ಮಹಿಳೆಯು ತಾನೊಬ್ಬಳೇ ಇದ್ದಾಗ ಮನೆಗೆ ಬರಬೇಡಿ ಎಂದು ಹೇಳಿದರೂ ಮನೆಗೆ ಬಂದು ಮಹಿಳೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಅಸಭ್ಯವಾಗಿ ವರ್ತಿಸಿ ಮಾನಭಂಗ ಮಾಡಿದ್ದಾನೆ.

ಅಲ್ಲದೇ ದೂರು ದಾಖಲಿಸುವುದಾಗಿ ತಿಳಿಸಿದ ಮಹಿಳೆಯ ಪತಿ ಮೇಲೆಯೂ ದೇವರಾಜ ನಾಗ ನಾಯ್ಕ ಮತ್ತು ಸಂಗಡಿಗರು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದರು. ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ವಿಚಾರಣೆ ನಡೆಸಿದ ಸಿದ್ದಾಪುರದ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು 2023ರ ಮೇ ೨೫ರಂದು ಆರೋಪಿತರ ವಿರುದ್ಧ ಆರೋಪವು ಸಿದ್ಧಪಟ್ಟಿಲ್ಲವೆಂದು ಆರೋಪಿತರಿಗೆ ಬಿಡುಗಡೆಯ ತೀರ್ಪು ನೀಡಿತ್ತು. ತೀರ್ಪಿನ ಆದೇಶದ ವಿರುದ್ಧ ಸರ್ಕಾರದ ಪರವಾಗಿ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕೆಂದು ಶಿರಸಿ ನಗರದ ೧ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಶಿರಸಿಯ ಜಿಲ್ಲಾ ನ್ಯಾಯಾಲಯವು ಕೆಳ ನ್ಯಾಯಾಲಯವು ಆರೋಪಿತರಿಗೆ ಬಿಡುಗಡೆಗೊಳಿಸಿ ನೀಡಿದ ತೀರ್ಪನ್ನು ಬದಲಾಯಿಸಿ ೧ನೇ ಆರೋಪಿಗೆ ೩ ವರ್ಷ ಶಿಕ್ಷೆ ಹಾಗೂ ₹೧೨,೫೦೦ ದಂಡ ಹಾಗೂ ೨ರಿಂದ ೪ನೇ ಆರೋಪಿಗೆ ೩ ವರ್ಷ ಶಿಕ್ಷೆ ಹಾಗೂ ತಲಾ ₹೧೦,೫೦೦ ದಂಡ ಹಾಗೂ ೧ನೇ ಆರೋಪಿಯು ನೊಂದ ಮಹಿಳೆ ₹೫ ಸಾವಿರ ಪರಿಹಾರ ಹಾಗೂ ೧ರಿಂದ ೪ನೇ ಆರೋಪಿಗಳು ಮಹಿಳೆಯ ಗಂಡನಿಗೆ ₹೪ ಸಾವಿರ ಪರಿಹಾರದ ನೀಡಬೇಕೆಂದು ನಗರದ ೧ ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಿರಣ ಕಿಣಿ ಅವರು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ರಾಜೇಶ್ ಎಂ. ಮಳಗಿಕರ್ ವಾದ ಮಂಡಿಸಿದ್ದರು. ಜೇನುನೊಣ ಕಚ್ಚಿ ನಾಲ್ವರು ಅಸ್ವಸ್ಥ

ಭಟ್ಕಳ: ತಾಲೂಕಿನಲ್ಲಿ ಮಂಗಳವಾರ ಎರಡು ಪ್ರತ್ಯೇಕ ಕಡೆ ಜೇನುನೋಣ ದಾಳಿ ಮಾಡಿ ನಾಲ್ವರನ್ನು ಅಸ್ವಸ್ಥಗೊಳಿಸಿದೆ.ಪಟ್ಟಣದ ಜಾಲಿಕೋಡಿಯಲ್ಲಿ ಮನೆಯ ಒಳಗಡೆ ಇದ್ದ ಒಂದೇ ಕುಟುಂಬದರಾದ ಮಾಸ್ತಮ್ಮ ಮಂಜಪ್ಪ ನಾಯ್ಕ(70), ಜಾನಕಿ ನಾಯ್ಕ(37) ಹಾಗೂ ಸುರೇಶ ನಾಯ್ಕ(45) ಮೇಲೆ ಏಕಾಏಕಿ ಜೇನುನೊಣ ದಾಳಿ ಮಾಡಿದೆ. ಜೇನುನೊಣ ಕಚ್ಚಿ ತೀವ್ರ ಅಸ್ವಸ್ಥರಾದ ಮೂವರನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.ಮಂಗಳವಾರ ಶಿರಾಲಿಯ ಮಲ್ಲಾರಿ ನಿವಾಸಿ ಗಣಪತಿ ಮಂಜಯ್ಯ ನಾಯ್ಕ(55) ಮಾರುಕಟ್ಟೆಗೆ ಬರುವ ವೇಳೆ ಶಿರಾಲಿ ಬಂಗಾರಮಕ್ಕಿ ಕ್ರಾಸ್‌ ಬಳಿ ಜೇನುನೊಣ ದಾಳಿ ಮಾಡಿದ್ದು, ಇವರು ಕೂಡ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.