ಆಸ್ಪತ್ರೆಗೆ ಬರುವವರಿಗೆ ಪ್ರೀತಿಯಿಂದ ಚಿಕಿತ್ಸೆ ನೀಡಿ

| Published : Sep 30 2024, 01:22 AM IST

ಆಸ್ಪತ್ರೆಗೆ ಬರುವವರಿಗೆ ಪ್ರೀತಿಯಿಂದ ಚಿಕಿತ್ಸೆ ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಮಕೃಷ್ಣನಗರ ಪ್ರಮುಖ ರಸ್ತೆಗಳಲ್ಲಿ ವಾಕಥಾನ್‌

ಕನ್ನಡಪ್ರಭ ವಾರ್ತೆ ಮೈಸೂರು

ಪ್ರೀತಿ ಇದ್ದಲ್ಲಿ ಐಶ್ವರ್ಯ ಮತ್ತು ಕೀರ್ತಿ ತಾನಾಗಿ ಬರುತ್ತದೆ. ಆದ್ದರಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಪ್ರೀತಿಯಿಂದ ಚಿಕಿತ್ಸೆ ನೀಡಿ ಎಂದು ಬೇಬಿ ಮಠದ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಕರೆ ನೀಡಿದರು.

ರಾಮಕೃಷ್ಣನಗರದ ಸುಯೋಗ್‌ ಆಸ್ಪತ್ರೆಯು ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಏರ್ಪಡಿಸಿರುವ ಉಚಿತ ಆಂಜಿಯೋಗ್ರಾಂ ಹಾಗೂ ಆಂಜಿಯೋಪ್ಲಾಸ್ಟಿ ಶಿಬಿರದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ''''''''ವೈದ್ಯ ನಾರಾಯಣೋ ಹರಿ'''''''' ಎಂದು ಹೇಳಲಾಗುತ್ತದೆ. ವೈದ್ಯರು ದೇವರಿಗೆ ಸಮಾನ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ, ಪ್ರೀತಿಯಿಂದ ಮಾತನಾಡಿಸಿ ಎಂದು ಸಲಹೆ ಮಾಡಿದರು.

ಕೆಲವರು ಐಶ್ವರ್ಯಕ್ಕಾಗಿ, ಕೀರ್ತಿಗಾಗಿ ಕೆಲಸ ಮಾಡುತ್ತಾರೆ. ಆದ್ದರಿಂದ ಪ್ರೀತಿ ಇದ್ದಲ್ಲಿ ಇವೆರಡೂ ಬರುತ್ತವೆ ಎಂದು ಚಿಕ್ಕ ಕಥೆಯ ಮೂಲಕ ವಿವರಿಸಿದರು.

ವಿದೇಶಗಳಿಗೆ ಹೋಲಿಸಿದಲ್ಲಿ ನಮ್ಮಲ್ಲಿ ಆಸ್ಪತ್ರೆಗಳು, ಕ್ಲಿನಿಕ್‌ಗಳು ಹೆಚ್ಚಿವೆ. ಈ ಪರಿಸ್ಥಿತಿ ಏಕೆ? ಎಂಬ ಬಗ್ಗೆ ಪ್ರತಿಯೊಬ್ಬರೂ ಆಲೋಚಿಸಿ, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

ಹಿರಿಯ ಹೃದ್ರೋಗತಜ್ಞ ಡಾ.ಸಿ.ಡಿ. ಶ್ರೀನಿವಾಸಮೂರ್ತಿ ಅವರು ಶಿಬಿರ ಉದ್ಘಾಟಿಸಿ ಮಾತನಾಡಿ, ಆಂಜಿಯೋಗ್ರಾಂ, ಆಂಜಿಯೋಪ್ಲಾಸ್ಟಿ ಮಾಡುವ ಸಲಕರಣೆಗಳು ದುಬಾರಿ. ವಿದೇಶಗಳಲ್ಲಿ ಕೂಡ ಈ ಚಿಕಿತ್ಸೆಗೆ 4 ಲಕ್ಷ ರು.ಗಳಾಗುತ್ತವೆ. ಹೀಗಿರುವಾಗ ಸುಯೋಗ್‌ ಆಸ್ಪತ್ರೆಯ ಮುಖ್ಯಸ್ಥ ಡಾ.ಎಸ್‌.ಪಿ. ಯೋಗಣ್ಣ ಅವರು ಪ್ರತಿ ವರ್ಷ ಬಡವರಿಗೆ ಉಚಿತವಾಗಿ ಈ ಚಿಕಿತ್ಸೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಹೃದ್ರೋಗ, ಅಧಿಕ ರಕ್ತದೊತ್ತಡ, ಮಧುಮೇಹ ಮೊದಲಾದ ಖಾಯಿಲೆಗಳಿಗೆ ಜೀವನಶೈಲಿಯೂ ಕೂಡ ಕಾರಣವಾಗುತ್ತದೆ. ಆದ್ದರಿಂದ ಜೀವನ ಶೈಲಿಯನ್ನು ಬದಲಿಸಿಕೊಳ್ಳುವ ಮೂಲಕ ಈ ರೋಗಗಳನ್ನು ನಿಯಂತ್ರಣಕ್ಕೆ ತರಬಹುದು ಎಂದರು.

ಹೃದಯ ಮಾನವ ದೇಹದ ಪ್ರಮುಖ ಅಂಗ. ಅದು ರಕ್ತವನ್ನು ಪಂಪ್‌ ಮಾಡುವ ದೇಹದ ಇತರೆ ಭಾಗಗಳಿಗೆ ಒದಗಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ನಿತ್ಯ ದೈಹಿಕ ಕಸರತ್ತು ಮಾಡಬೇಕು. ವಾಕಿಂಗ್‌ ಮಾಡಬೇಕು ಎಂದು ಅವರು ಸಲಹೆ ಮಾಡಿದರು.

ಸುಯೋಗ್‌ ಆಸ್ಪತ್ರೆ ಸಂಸ್ಥಾಪಕ ಡಾ.ಎಸ್‌.ಪಿ. ಯೋಗಣ್ಣ ಮಾತನಾಡಿ, ಸಮಾಜದ ಋಣ ನಮ್ಮ ಮೇಲಿದೆ. ಅದನ್ನು ತೀರಿಸಲು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಬಡವರಿಗೆ ನೆರವಾಗಲು ಬೇರೆ ಬೇರೆ ರೀತಿಯ ಶಿಬಿರಗಳನ್ನು ಮಾಡುತ್ತಿದ್ದೇವೆ ಎಂದರು.

ಮುಖ್ಯಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮಾತನಾಡಿ, ಮನುಷ್ಯರಿಗೆ ಹೃದಯ ಹಾಗೂ ಮನಸ್ಸು ಮುಖ್ಯ. ಹೃದಯ ಮಿಡಿಯುತ್ತಿದ್ದರೆ, ಮನಸ್ಸು ಕೆಲಸ ಮಾಡಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ ಎಂದರು.

ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ಪಿ. ಜಯಕುಮಾರ್‌ ಸ್ವಾಗತಿಸಿದರು. ಹಿಮಾನಲಯ ಫೌಂಡೇಷ್‌್‌ ಮುಖ್ಯಸ್ಥ ಎನ್‌. ಅನಂತ ನಿರೂಪಿಸಿ, ವಂದಿಸಿದರು.

ಡಾ.ಸುಯೋಗ್‌ ಯೋಗಣ್ಣ, ಸುಧಾ ಯೋಗಣ್ಣ, ಶಾಂತಾ ಶ್ರೀನಿವಾಸಮೂರ್ತಿ ಮೊದಲಾದವರು ಇದ್ದರು.

--------

ಇದಕ್ಕೂ ಮೊದಲು ಹೃದ್ರೋಗದ ಬಗ್ಗೆ ಅರಿವು ಮೂಡಿಸಲು ರಾಮಕೃಷ್ಣನಗರ ವೃತ್ತದಿಂದ ಪ್ರಮುಖ ರಸ್ತೆಗಳಲ್ಲಿ ವಾಕಥಾನ್‌ ನಡೆಯಿತು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಪಾರಿವಾಳ ಹಾರಿಬಿಡುವ ಮೂಲಕ ವಾಕಥಾನ್‌ಗೆ ಚಾಲನೆ ನೀಡಿದರು. ಆಸ್ಪತ್ರೆ ಮುಖ್ಯಸ್ಥ ಡಾ.ಎಸ್‌.ಪಿ. ಯೋಗಣ್ಣ, ಕಾರ್ಡಿಯಾಲಜಿ ಸೊಸೈಟಿ ಅಧ್ಯಕ್ಷ ಡಾ.ಎಂ. ಮಂಜಪ್ಪ, ಡಾ.ಪಿ. ಜಯಕುಮಾರ್‌, ಡಾ.ಸುಯೋಗ್‌ ಯೋಗಣ್ಣ, ಡಾ.ರಾಜೇಂದ್ರಪ್ರಸಾದ್‌ ಮೊದಲಾದವರು ಇದ್ದರು.

ಕೆಂಪು ಬಣ್ಣದ ಟೀ- ಶರ್ಟ್‌ ಹಾಗೂ ಟೋಪಿ ಧರಿಸಿದ್ದ ವೈದ್ಯರು, ದಾದಿಯರು, ಸಿಬ್ಬಂದಿ, ಸುಯೋಗ್‌ ಆಸ್ಪತ್ರೆ, ಸುಯೋಗ್‌ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಸಮೂಹ, ಸುಯೋಗ್‌ ಡಯಾಬಿಟಿಕ್ಸ್‌ ಹೆಲ್ತ್‌ ಕ್ಲಬ್‌, ಸುಯೋಗ್‌ ವುಮೆನ್ಸ್‌ ಹೆಲ್ತ್‌ ಕ್ಲಬ್‌, ಶ್ರೀ ರಾಮಕೃಷ್ಣ ಸೇವಾ ಪ್ರತಿಷ್ಠಾನದ ಸದಸ್ಯರು ವಾಕಥಾನ್‌ನಲ್ಲಿ ಸಾಗಿದರು.