ಲಕ್ಷ್ಮೇಶ್ವರ: ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆ ನಂ. 1ರಲ್ಲಿ ಅಸ್ತಮಾ ರೋಗಿಗಳಿಗೆ ಉಚಿತ ಮಂತ್ರೌಷಧಿ ವಿತರಣಾ ಕಾರ್ಯಕ್ರಮ ಸೋಮವಾರ ರಾತ್ರಿ ನಡೆಯಿತು. ರಾಜ್ಯದ ವಿವಿಧ ಭಾಗ ಹಾಗೂ ಹೊರರಾಜ್ಯದಿಂದಲೂ ಸಾವಿರಾರು ಜನರು ಔಷಧಿ ಪಡೆಯಲು ಆಗಮಿಸಿದ್ದು ವಿಶೇಷವಾಗಿತ್ತು.

ಸಮಾರಂಭದ ಸಾನ್ನಿಧ್ಯ ವಹಿಸಿ ಕುಂದಗೋಳದ ಬಸವಣ್ಣ ಸ್ವಾಮಿಗಳು ಮಾತನಾಡಿ, ಕಳೆದ 60 ವರ್ಷಗಳಿಂದ ಪಾರಂಪರಿಕ ವೈದ್ಯ ಬಾಬುರಾವ್ ಕುಲಕರ್ಣಿ ಹಾಗೂ ಮಂತ್ರಾಲಯ ಪಾದಯಾತ್ರೆ ಸಂಘವು ಅಸ್ತಮಾ ರೋಗಿಗಳ ಕಾಯಿಲೆ ಗುಣಪಡಿಸುತ್ತಿರುವುದು ನಿಜವಾಗಿಯೂ ಹೆಮ್ಮೆಯ ಸಂಗತಿ ಎಂದರು.

ಅಸ್ತಮಾ ಕಾಯಿಲೆಗೆ ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ಮಾತ್ರ ಗುಣಪಡಿಸುವ ಶಕ್ತಿ ಇದೆ. ಆದ್ದರಿಂದ ಭಾರತೀಯ ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ಅಲೋಪತಿಯಲ್ಲಿ ಗುಣಪಡಿಸಲಾಗದ ಹಲವು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇದೆ. ಅಸ್ತಮಾ ಕಾಯಿಲೆಗೆ ಹಲವು ಕಟ್ಟುಪಾಡುಗಳನ್ನು ವಿಧಿಸಿಕೊಂಡಲ್ಲಿ ರೋಗದಿಂದ ಮುಕ್ತಿ ಪಡೆಯಲು ಸಾಧ್ಯವಾಗುತ್ತದೆ ಎಂದರು.

ಮೃಗಶಿರ ಮಳೆ ನಕ್ಷತ್ರದ ಆರಂಭದ ಗಳಿಗೆಯಲ್ಲಿ ಈ ಔಷಧಿಯನ್ನು ಸೇವಿಸುವುದರಿಂದ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಹೇಳಿದ ಅವರು, ಕಳೆದ 60 ವರ್ಷಗಳಿಂದ ನಿರಂತರವಾಗಿ ಇಂತಹ ಉಚಿತ ಅಸ್ತಮಾ ಯಜ್ಞವನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಇಂತಹ ಸಮಾಜ ಸೇವೆ ಮಾಡುವ ಶಕ್ತಿಯನ್ನು ದೇವರು ಇಲ್ಲಿನ ಸಂಘಟನೆಗಳಿಗೆ ನೀಡಲಿ ಎಂದರು.

ಈ ವೇಳೆ ಶಿವಪ್ರಕಾಶ ಲಿಂಬಯ್ಯಸ್ವಾಮಿಮಠ, ವಿ.ಜಿ. ಪಡಗೇರಿ, ಪಿಎಸ್‌ಐ ನಾಗರಾಜ ಗಡದ, ಡಾ. ಹರೀಶ್ ಕುಲಕರ್ಣಿ ಮಾತನಾಡಿದರು. ಹುಲ್ಲೂರಿನ ಅಮೋಘಿಮಠದ ಸಿದ್ದೇಶ್ವರ ಸ್ವಾಮಿಗಳು, ಎಂ.ಆರ್. ಪಾಟೀಲ, ಮಂಜುಳಾ ಹೂಗಾರ ಇದ್ದರು. ಕೃಷ್ಣಾ ಕುಲಕರ್ಣಿ ಕಾರ್ಯಕ್ರಮ ನಿರ್ವಹಿಸಿದರು. ವರುಣನ ಕೃಪೆಗಾಗಿ ರೈತರಿಂದ ವಿಶೇಷ ಪೂಜೆ


ಗದಗ: ತಾಲೂಕಿನ ಲಕ್ಕುಂಡಿ ಗ್ರಾಮದ ಶ್ರೀದುರ್ಗಾದೇವಿ ದೇವಸ್ಥಾನದಲ್ಲಿ ಮಂಗಳವಾರ ವರುಣನ ಕೃಪೆಗಾಗಿ ರೈತರು ವಿಶೇಷ ಪೂಜೆ ಸಲ್ಲಿಸಿದರು.ದುರ್ಗಾದೇವಿ ದೇವಿಗೆ ವಿಶೇಷ ಪೂಜೆ, ಅಭಿಷೇಕ ನೆರವೇರಿಸಿ, ನಂತರ ಗ್ರಾಮದ ಎಲ್ಲ ದೇವಸ್ಥಾನಗಳಲ್ಲಿ ದೇವರಿಗೆ ಉಡಿ ತುಂಬುವ ವಿಧಿ ವಿಧಾನಗಳನ್ನು ಪೂರೈಸಿದರು. ದಂಡಿನ ದುರ್ಗಾದೇವಿ ಕೆರೆಯ ದಡದಲ್ಲಿ ಮಣ್ಣಿನಿಂದ ಈಶ್ವರ ಲಿಂಗ, ಬಸವಣ್ಣನ ಮೂರ್ತಿ ನಿರ್ಮಿಸಿ ಮುತ್ತೈದೆಯರು ವಿಶೇಷವಾಗಿ ಪೂಜೆ ನೆರವೇರಿಸಿದರು.

ಷಡಕ್ಷರಯ್ಯ ಬದ್ನಿಮಠ ಅವರು, ವಿಧಿ ವಿಧಾನಗಳೊಂದಿಗೆ ವರುಣ ಕೃಪೆಗಾಗಿ ಮಂತ್ರಘೋಷಗಳನ್ನು ಪಠಣ ಮಾಡಿದರು. ಮುಂಗಾರು ಮಳೆ ಆರಂಭವಾಗಿ ಒಂದು ತಿಂಗಳು ಕಳೆದರೂ ಮಳೆ ಬಾರದೇ ಇರುವುದಕ್ಕೆ ಸೇರಿದ ಭಕ್ತರು ಶ್ರದ್ಧೆಯಿಂದ ಪ್ರಾರ್ಥಿಸಿದರು.ದೇವಸ್ಥಾನದ ಆವರಣದಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿತು. ನಮ್ಮ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮಳೆ ಸುರಿದು ಅಲ್ಲಿಯ ಜಮೀನುಗಳಲ್ಲಿ ಬಿತ್ತನೆ ಕಾರ್ಯ ಮುಗಿದಿದೆ. ಆದರೆ ಲಕ್ಕುಂಡಿಯಲ್ಲಿ ಈವರೆಗೂ ಮಳೆಯಾಗದೇ ಇರುವುದರಿಂದ ಬಿತ್ತನೆ ಮಾಡಿಲ್ಲ. ಆದ್ದರಿಂದ ದುರ್ಗಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಗ್ರಾಮದ ಎಲ್ಲ ದೇವಸ್ಥಾನಗಳಲ್ಲಿ ಮುತ್ತೈದೆಯರು ಉಡಿ ತುಂಬುವ ಕಾರ್ಯ ಮಾಡಿದ್ದು, ವರುಣನ ಕೃಪೆಗಾಗಿ ಪ್ರಾರ್ಥನೆ ಮಾಡಿದ್ದೇವೆ ಎಂದು ರೈತರಾದ ಪ್ರಭು ಕುಂಬಾರ, ಶಿವಪ್ಪ ಬಿನ್ನಾಳ, ಅಜ್ಜಪ್ಪ ಕವಲೂರು, ಬಸವರಾಜ ಹಣವಾಳ, ಈಶಪ್ಪ ಕುಂಬಾರ, ಬಸಯ್ಯ ನರಗುಂದಮಠ ಇತರರು ತಿಳಿಸಿದರು.