ಸಾರಾಂಶ
ಜಾಗೃತಿ ಶಿಬಿರ, ಗಾಲಿಕುರ್ಚಿ ಜಾಥಾ । ಯೋಗ, ಪ್ರಾಣಾಯಾಮ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಹಾಸನನಗರದ ರಾಜೀವ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಆವರಣದಲ್ಲಿ ಜೂ.೨೦, ೨೧ ಹಾಗೂ ೨೨ ರಂದು ಮೂರು ದಿನಗಳ ಕಾಲ ಬೆನ್ನುಹುರಿ ಆಪಘಾತಕ್ಕೊಳಗಾದವರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಗಾಲಿ ಕುರ್ಚಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸೇವಾ ಭಾರತಿ ಸಂಸ್ಥೆಯ ಹಿರಿಯ ಮ್ಯಾನೇಜರ್ ಚರಣ್ ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಸೇವಾ ಭಾರತಿ-ಸೇವಾಧಾಮ ರಾಜೀವ್ ಆಯುರ್ವೇದ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ, ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ ಸಹಯೋಗದಲ್ಲಿ ಜೂ.೨೦ ರಿಂದ ಮೂರು ದಿನಗಳ ಕಾಲ ಉಚಿತ ಆರೋಗ್ಯ ತಪಾಸಣೆ ಮತ್ತು ಗಾಲಿ ಕುರ್ಚಿ ಜಾಥಾವನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.ನಗರದ ರಾಜೀವ್ ಆಯುರ್ವೇದ ವೈದ್ಯಕೀಯ ವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಆವರಣದಲ್ಲಿ ಮೂರು ದಿನಗಳ ಕಾಲ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪಿ.ಎನ್.ಶಿವಸ್ವಾಮಿ ಉದ್ಘಾಟಿಸಲಿದ್ದಾರೆ. ಕನ್ಯಾಡಿಯ ಸೇವಾ ಭಾರತಿಯ ಕಾರ್ಯದರ್ಶಿ ಬಾಲಕೃಷ್ಣ ಅಧ್ಯಕ್ಷತೆ ವಹಿಸಲಿದ್ದು, ರಾಜೀವ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಎಸ್ ರತ್ನ, ಹಿಮ್ಸ್ ನಿರ್ದೇಶಕ ಡಾ.ಎಸ್.ವಿ.ಸಂತೋಷ್, ಜಿಲ್ಲಾ ಶಾಸ್ತ್ರ ಚಿಕಿತ್ಸಕ ಡಾ.ಲೋಕೇಶ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ಆರ್.ಅನುಪಮಾ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಶಿಬಿರದಲ್ಲಿ ಫಲಾನುಭವಿಗಳಿಗೆ ಉಚಿತ ವೈದ್ಯಕೀಯ ತಪಾಸಣೆ ಸೌಲಭ್ಯವನ್ನು ಒದಗಿಸಲಾಗಿದ್ದು ಜತೆಗೆ ಯೋಗ, ಪ್ರಾಣಾಯಾಮ, ಒತ್ತಡ ಗಾಯ ನಿರ್ವಹಣೆ, ಆಪ್ತ ಸಮಾಲೋಚನೆ, ಮನೋರಂಜನೆ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಅರ್ಹ ಫಲಾನುಭವಿಗಳಿಗೆ ಗಾಲಿ ಕುರ್ಚಿ, ಮೆಡಿಕಲ್ ಕಿಟ್ ಹಾಗೂ ನೀರಿನ ಹಾಸಿಗೆಗಳನ್ನು ಹಸ್ತಾಂತರಿಸಲಾಗುವುದು. ಕಾರ್ಯಾಗಾರದ ಕೊನೆಯ ದಿನ ಜೂ.೨೨ರಂದು ಸೇವಾ ಭಾರತೀಯ ವತಿಯಿಂದ ಗಾಲಿ ಕುರ್ಚಿ ರ್‍ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ. ಹಾಸಿಗೆ ಹಿಡಿದು ಬೆನ್ನುಹುರಿ ಅಪಘಾತಕ್ಕೊಳಗಾದ ಅಂಗವಿಕಲರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಹಾಗೂ ಎಲ್ಲರಂತೆ ಬದುಕಲು ಧೈರ್ಯ ತುಂಬುವ ಹಾಗೂ ಜಾಗೃತಿ ಮೂಡಿಸಲು ಅಂದು ಬೆಳಿಗ್ಗೆ ೯ ಗಂಟೆಗೆ ಮಹಾರಾಜ ಉದ್ಯಾನದ ಮುಂಭಾಗದಿಂದ ಎನ್ನಾರ್ ಸರ್ಕಲ್ ಮೂಲಕ ರ್‍ಯಾಲಿ ಸಾಗಲಿದೆ ಎಂದರು.ಜೂ.೨೨ ರಂದು ಮಧ್ಯಾಹ್ನ ೧೨ ಗಂಟೆಗೆ ಸಮಾರೋಪ ಸಮಾರಂಭ ಜರಗಲಿದ್ದು, ರಾಜೀವ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ಎಸ್.ಎ.ನಿತಿನ್, ವಿ.ನಿರಂಜನ್ ನೆರ್ಲಿಗೆ, ಯೋಗನಾಥ್, ಗಂಗಾಧರ್ ಭಾಗವಹಿಸುವರು ಎಂದರು.
ಸಂಘಟನಾ ಕಾರ್ಯದರ್ಶಿ ಗಿರೀಶ್ ಮಾತನಾಡಿ, ‘ಈ ಸಮಾಜದಲ್ಲಿ ಬೆನ್ನುಹುರಿ ಆಘಾತಕ್ಕೊಳಗಾದವರು ಮಾನಸಿಕ ಖಿನ್ನತೆಗೆ ಹಾಗೂ ಹಲವಾರು ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಅಗತ್ಯ ಚಿಂತನೆ ನಡೆಸಬೇಕಿದೆ. ನಮಗೆ ನೀಡುತ್ತಿರುವ ೧೪೦೦ ರು. ಸಹಾಯ ಧನ ೫,೦೦೦ರು.ಗೆ ಹೆಚ್ಚಿಸಬೇಕು ಹಾಗೂ ನಮ್ಮನ್ನು ನೋಡಿಕೊಳ್ಳುವವರಿಗೆ ೨೦೦೦ ರು. ಸಹಾಯಧನ ನೀಡಬೇಕು, ವ್ಹೀಲ್ ಚೇರ್, ನೀರಿನ ಹಾಸಿಗೆ, ಮೆಡಿಕಲ್ ಕಿಟ್ ನೀಡಬೇಕು. ಪ್ರತಿ ತಾಲೂಕಿನಲ್ಲಿಯೂ ಪುನಃಶ್ಚೇತನ ಕೇಂದ್ರಗಳನ್ನು ತೆರೆಯಬೇಕು ಎಂದು ಹೇಳಿದರು.ಮಂಜುನಾಥ್, ನಾಗಾರ್ಜುನ್ ಇತರರು ಇದ್ದರು.