ಮಾ. 3ರಂದು ಕೆ.ಎಚ್. ಪಾಟೀಲ ಅಭಿಮಾನಿ ಬಳಗದಿಂದ ಉಚಿತ ಸಾಮೂಹಿಕ ವಿವಾಹ

| Published : Jan 21 2024, 01:35 AM IST

ಸಾರಾಂಶ

ಮಾ. 3ರಂದು ನಡೆದಾಡುವ ದೇವರೆಂದು ಖ್ಯಾತಿ ಗಳಿಸಿರುವ ಲಿಂ. ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ 110ನೇ ಜಯಂತಿ ಅಂಗವಾಗಿ ಕೆ.ಎಚ್. ಪಾಟೀಲ್ ಅಭಿಮಾನಿ ಬಳಗದ ವತಿಯಿಂದ 5ನೇ ವರ್ಷದ ಸರ್ವ ಧರ್ಮಗಳ ಉಚಿತ ಸಾಮೂಹಿಕ ವಿವಾಹ ಸಂಘಟಿಸಲಾಗಿದೆ ಎಂದು ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಹೇಳಿದರು.

ಗದಗ: ಮಾ. 3ರಂದು ನಡೆದಾಡುವ ದೇವರೆಂದು ಖ್ಯಾತಿ ಗಳಿಸಿರುವ ಲಿಂ. ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ 110ನೇ ಜಯಂತಿ ಅಂಗವಾಗಿ ಕೆ.ಎಚ್. ಪಾಟೀಲ್ ಅಭಿಮಾನಿ ಬಳಗದ ವತಿಯಿಂದ 5ನೇ ವರ್ಷದ ಸರ್ವ ಧರ್ಮಗಳ ಉಚಿತ ಸಾಮೂಹಿಕ ವಿವಾಹ ಸಂಘಟಿಸಲಾಗಿದೆ ಎಂದು ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಹೇಳಿದರು. ಅವರು ಶನಿವಾರ ವೀರೇಶ್ವರ ಪುಣ್ಯಾಶ್ರಮದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಗರಸಭೆಯ ಮಾಜಿ ಅಧ್ಯಕ್ಷರು ಹಾಗೂ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಪರಮ ಶಿಷ್ಯ ಪೀರಸಾಬ ಕೌತಾಳ ಅವರು ಕಳೆದ 10 ವರ್ಷದಿಂದ ಗುರುವರ್ಯರಾದ ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಜಯಂತಿ ಅದ್ಧೂರಿ ಮತ್ತು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಗುರುವರ್ಯರ ಜಯಂತಿ ಅಂಗವಾಗಿ ರಚನಾತ್ಮಕ ಕಾರ್ಯ ಮಾಡುವ ಉದ್ದೇಶದಿಂದಾಗಿಯೇ ಪೀರಸಾಬ ಅವರು ಕಳೆದ 5 ವರ್ಷಗಳಿಂದ ಸರ್ವ ಧರ್ಮಗಳ ಉಚಿತ ಸಾಮೂಹಿಕ ವಿವಾಹ ಮತ್ತು ಸಾಂಸ್ಕೃತಿಕ ರಸ ಮಂಜರಿ ಕಾರ್ಯಕ್ರಮ ಸಂಘಟಿಸುತ್ತಾ ಬಂದಿದ್ದಾರೆ. 110 ಕೆಜಿ ತೂಕದ ಕೇಕ್ ಕತ್ತರಿಸುವದು, 1010 ಕುಂಭ ಹೊತ್ತ ಸುಮಂಗಲಿಯರಿಂದ ಶ್ರೀ ವೀರೇಶ್ವರ ಪುಣ್ಯಾಶ್ರಮದಿಂದ ನಗರಾದ್ಯಂತ ಮೆರವಣಿಗೆ ನಡೆಯಲಿದೆ, ಮಾ. 2 ರಂದು ಕೆ.ಎಚ್.ಪಾಟೀಲ್ ಸಭಾಂಗಣದ ಮುಂದಿರುವ ಆವರಣದಲ್ಲಿ ವರ್ಣರಂಜಿತ ವೇದಿಕೆಯಲ್ಲಿ ಬೃಹತ ಮಟ್ಟದ ರಸಮಂಜರಿ ಸಾಂಸ್ಕೃತಿಕ ಸಮಾರಂಭ ನಡೆಯಲಿದೆ ಎಂದರು.

ಗದಗ ಬೆಟಗೇರಿ ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಕೆ.ಎಚ್. ಪಾಟೀಲ ಅಭಿಮಾನಿ ಬಳಗ ಹಾಗೂ ಈದಗಾ ಕಮಿಟಿಯ ಅಧ್ಯಕ್ಷ ಪೀರಸಾಬ ಕೌತಾಳ ಮಾತನಾಡಿ, ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಆಶೀರ್ವಾದದಿಂದಾಗಿ ಸಾರ್ವಜನಿಕ ಬದುಕಿನಲ್ಲಿ ಉನ್ನತ ಹುದ್ದೆಯೊಂದಿಗೆ ಸೇವೆ ಮಾಡುವ ಅವಕಾಶ ದೊರೆತಿರುವುದು ಜೀವನದ ಕೊನೆಯ ಉಸಿರಿರುವರೆಗೂ ಮರೆಯಲು ಸಾಧ್ಯವಿಲ್ಲ, ಶ್ರೀಗಳ ಸೇವೆ ಮಾಡುವ ಉದ್ದೇಶದಿಂದಾಗಿ ಬದುಕಿನಲ್ಲಿ ಸಾರ್ಥಕತೆ ಪಡೆದುಕೊಳ್ಳುವ ಪ್ರಮುಖ ಉದ್ದೇಶದಿಂದಾಗಿಯೇ ಪೂಜ್ಯರ ಜನ್ಮ ದಿನಾಚರಣೆ ಅಂಗವಾಗಿ ಸರ್ವ ಧರ್ಮಗಳ ಉಚಿತ ಸಾಮೂಹಿಕ ವಿವಾಹ ಸಂಘಟಿಸುತ್ತಿದ್ದೇನೆ, ಈ ಬಾರಿಯ 5ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದ್ದು, ಸಪ್ತಪದಿ ತುಳಿಯುವ ಜೋಡಿಗಳು ತಮ್ಮ ಅಗತ್ಯ ದಾಖಲೆಗಳೊಂದಿಗೆ ಫೆ. 20ರೊಳಗಾಗಿ ವೀರೇಶ್ವರ ಪುಣ್ಯಾಶ್ರಮದ ಮ್ಯಾನೇಜರ ಹೇಮರಾಜ ಶಾಸ್ತ್ರೀಜಿ ( 9902402517, 9945255858) ಅವರನ್ನು ಸಂಪರ್ಕಿಸಬಹುದು, ವಿವಾಹ ಬಯಸುವವರು ನೀಡಿರುವ ದಾಖಲೆಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಅಧಿಕಾರಿಗಳ ಜೊತೆಗೆ ಪರಿಶೀಲಿಸಿ ದೃಢಪಡಿಸಿಕೊಂಡು ಅರ್ಹತೆ ಗಿಟ್ಟಸಿಕೊಂಡವರ ಸಾಮೂಹಿಕ ವಿವಾಹ ನೋಂದಣಿ ಮಾಡಿಕೊಳ್ಳಲಾಗುವುದು ಎಂದು ಕೌತಾಳ ಹೇಳಿದರು. ಬಳಗದ ಸದಸ್ಯರಾದ ವಿನೋದ ಶಿದ್ಲಿಂಗ್, ಶರೀಫ, ಬಾಬಾಜಾನ ಸುದ್ದಿಗೋಷ್ಠಿಯಲ್ಲಿದ್ದರು.