ಅಂಗವಿಕಲ ಮತದಾರರಿಗೆ ಉಚಿತ ವಾಹನ ವ್ಯವಸ್ಥೆ: ಜಿಲ್ಲಾಧಿಕಾರಿ ಗಂಗೂಬಾಯಿ

| Published : Apr 23 2024, 12:46 AM IST

ಅಂಗವಿಕಲ ಮತದಾರರಿಗೆ ಉಚಿತ ವಾಹನ ವ್ಯವಸ್ಥೆ: ಜಿಲ್ಲಾಧಿಕಾರಿ ಗಂಗೂಬಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಮತಗಟ್ಟೆಗೆ ಬಂದು ಮತದಾನ ಮಾಡುವ ಅಂಗವಿಕಲರು ಮತಗಟ್ಟೆಗೆ ಬರಲು ಮತ್ತು ಮತ ಚಲಾವಣೆ ನಂತರ ಪುನಃ ಮನೆಗೆ ತೆರಳಲು ವಾಹನದ ವ್ಯವಸ್ಥೆಯನ್ನು ಮಾಡಲಾಗುತ್ತದೆ.

ಕಾರವಾರ: ಲೋಕಸಭಾ ಚುನಾವಣೆ ಪ್ರಯುಕ್ತ ಜಿಲ್ಲೆಯಲ್ಲಿ ಮೇ 7ರಂದು ನಡೆಯುವ ಮತದಾನದ ದಿನದಂದು ಜಿಲ್ಲೆಯ ಅರ್ಹ ಅಂಗವಿಕಲರಿಗೆ ಮತಗಟ್ಟೆಗೆ ಆಗಮಿಸಲು ಮತ್ತು ಮತಗಟ್ಟೆಯಿಂದ ಮನೆಗೆ ತೆರಳಲು ಜಿಲ್ಲಾಡಳಿದ ಮೂಲಕ ಉಚಿತ ವಾಹನ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಆಯೋಜಿಸಿದ್ದ ಅಂಗವಿಕಲರ ಮತದಾನ ಬೈಕ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಮತಗಟ್ಟೆಗೆ ಬಂದು ಮತದಾನ ಮಾಡುವ ಅಂಗವಿಕಲರು ಮತಗಟ್ಟೆಗೆ ಬರಲು ಮತ್ತು ಮತ ಚಲಾವಣೆ ನಂತರ ಪುನಃ ಮನೆಗೆ ತೆರಳಲು ವಾಹನದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಸ್ವಂತ ವಾಹನವಿದ್ದು ಅದರಲ್ಲಿ ಬಂದು ಮತ ಚಲಾಯಿಸುವ ಅಂಗವಿಕಲರಿಗೆ ಅವಶ್ಯವಿದ್ದಲ್ಲಿ ಅವರ ವಾಹನಕ್ಕೆ ಇಂಧನ ನೀಡುವ ವ್ಯವಸ್ಥೆ ಕೂಡಾ ಮಾಡಲಾಗುವುದು. ಹೆಚ್ಚಿನ ವಯೋವೃದ್ಧತೆ ಅಥವಾ ಅಂಗವಿಕಲತೆಯಿಂದ ಯಾವುದೇ ಮತದಾರರು ಮತದಾನದಿಂದ ಹೊರಗುಳಿಯದಂತೆ ಜಿಲ್ಲಾಡಳಿತದ ಮೂಲಕ ಎಲ್ಲ ಸೌಲಭಗಳನ್ನು ಒದಗಿಸಲಾಗುತ್ತಿದೆ ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂ ಮಾತನಾಡಿ, ಗ್ರಾಮ ಮಟ್ಟದಲ್ಲಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸ್ವೀಪ್ ಸಮಿತಿ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.ಜಿಲ್ಲಾಧಿಕಾರಿ ಕಚೇರಿಯಿಂದ ಪ್ರರಂಭವಾದ ಅಂಗವಿಕಲರ ಬೈಕ್ ಜಾಥಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಅರ್ಜುನ ಚಿತ್ರಮಂದಿರ, ಕಾಳಿ ನದಿ ಉದ್ಯಾನವನ, ನಂದನಗದ್ದ ಟೋಲ್ ನಾಕಾ, ಶಿವಾಜಿ ಶಾಲೆ ರಸ್ತೆ, ಕಾಜುಭಾಗ- ಕಾರವಾರ ರಸ್ತೆ, ಡಾ. ಪಿಕಳೆ ರಸ್ತೆ ಮಾರ್ಗವಾಗಿ ಸಾಗಿ ಜಿಪಂ ಆವರಣದಲ್ಲಿ ಮುಕ್ತಾಯವಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲೆಯ 100ಕ್ಕೂ ಅಂಗವಿಕಲರು ತಮ್ಮ ತ್ರಿಚಕ್ರ ವಾಹನಗಳೊಂದಿಗೆ ಭಾಗವಹಿಸಿದ್ದು, ಎಲ್ಲರಿಗೂ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಉಪವಿಭಾಗಾಧಿಕಾರಿ ಕನಿಷ್ಕ, ಜಿಪಂ ಆಡಳಿತ ಶಾಖೆಯ ಉಪ ಕಾರ್ಯದರ್ಶಿ ಎಂ.ಸಿ. ಚಂದ್ರಶೇಖರ, ಅಭಿವೃದ್ಧಿ ಶಾಖೆಯ ಉಪ ಕಾರ್ಯದರ್ಶಿ ಪ್ರಕಾಶ ಹಾಲಮ್ಮನವರ, ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬೀಬ್, ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ್, ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಉಪನಿರ್ದೇಶಕಿ ಎಚ್.ಎಚ್. ಕುಕನೂರ ಮೊದಲಾದವರು ಇದ್ದರು.