ಸಾರಾಂಶ
ಬೆಳ್ತಂಗಡಿ : ಕಾವೇರಿ ತಂತ್ರಾಂಶದಲ್ಲಿ ಪದೇಪದೆ ಸರ್ವರ್ ಡೌನ್ ಪರಿಣಾಮ ಆಸ್ತಿ ನೋಂದಣಿ ಪ್ರಕ್ರಿಯೆ ಅನಗತ್ಯವಾಗಿ ವಿಳಂಬವಾಗಿ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಬುಧವಾರ ಸದನಲ್ಲಿ ಸಚಿವರ ಗಮನ ಸೆಳೆದರು.
ಕಳೆದ ಜ.6ರಿಂದ ಫೆ.4ರ ವರೆಗೆ ದಸ್ತಾವೇಜುಗಳ ನೋಂದಣಿಯಲ್ಲಿ ವ್ಯತ್ಯಯವಾಗಿದೆ. ಬಳಿಕ ತಂತ್ರಾಂಶದಲ್ಲಿ ಎದುರಾಗಿದ್ದ ಸಮಸ್ಯೆಯನ್ನು ಪರಿಹರಿಸಲಾಗಿದ್ದು, ತಂತ್ರಾಂಶವನ್ನು ಉನ್ನತೀಕರಿಸಲಾಗಿದೆ. ಇನ್ನೂ ಸಮಸ್ಯೆಗಳು ಕಂಡು ಬಂದಿದ್ದು, ಅವುಗಳನ್ನು ಕಾಲಕ್ರಮೇಣ ಪರಿಸಹರಿಸಲಾಗಿದೆ. ಮುಂದೆ ಸಮಸ್ಯೆ ಹಾಗೂ ಗೊಂದಲಗಳಿಗೆ ತಕ್ಷಣ ಪರಿಹಾರ ಒದಗಿಸಲು ಕಂದಾಯ ಇಲಾಖೆಯು ಸಹಾಯವಾಣಿ, ಟಿಕೇಟಿಂಗ್ ಟೂಲ್, ಸರ್ವೀಸ್ ಡೆಸ್ಕ್, ಅಪ್ಲಿಕೇಷನ್ ಸಪೋರ್ಟ್ ಎಂಜಿನಿಯರ್ ಹಾಗೂ ಸಿಸ್ಟಂ ಅಡ್ಮಿನ್, ಕಾವೇರಿ ಯೋಜನಾ ಉಸ್ತುವಾರಿ ಘಟಕ, ಸಿಎಸ್‌ಜಿಯಲ್ಲಿನ 1.2 ಸಪೋರ್ಟ್ ವ್ಯವಸ್ಥೆ, ಯೂಟ್ಯೂಬ್ ಚಾನಲ್, ಪೋಸ್ಟರ್, ತರಬೇತಿ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇ ಗೌಡ ಉತ್ತರಿಸಿದರು.
ತಂತ್ರಾಂಶದಲ್ಲಿನ ಲೋಪದೋಷಗಳನ್ನು ಸಂಪೂರ್ಣವಾಗಿ ಪರಿಹರಿಸಿ ಸಾರ್ವಜನಿಕರು ತಮ್ಮ ಸ್ಥಿರಾಸ್ತಿ ದಸ್ತಾವೇಜುಗಳ ನೋಂದಣಿ ವ್ಯವಹಾರಗಳನ್ನು ಯಾವದೇ ಸಮಸ್ಯೆ ಮತ್ತು ಅನಗತ್ಯ ವಿಳಂಬವಿಲ್ಲದೆ ಮಾಡುವಂತಾಗಲು ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಪ್ರಶ್ನೆಗೆ ಸಚಿವ ಕೃಷ್ಣಬೈರೇ ಗೌಡರು, ಫೆಬ್ರುವರಿಯಲ್ಲಿ ತಂತ್ರಾಂಶದ ಮೇಲೆ ಆದ ದಾಳಿಯಿಂದಾಗಿ ಸಮಸ್ಯೆಯನ್ನು ಎದುರಿಸಬೇಕಾಯಿತು. ಮುಂದೆ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ತಂತ್ರಾಂಶದಲ್ಲಿ ಅಗತ್ಯ ಬದಲಾವಣೆಯನ್ನು ಮಾಡಲಾಗಿದೆ. ಅಲ್ಲದೆ ಸದರಿ ಪ್ರಕರಣದ ಬಗ್ಗೆ ಸೈಬರ್ ಕ್ರೈಂ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದರು.
ಗ್ರಾಮ ಆಡಳಿತ ಅಧಿಕಾರಿಗಳ ವಿವಿಧ ಬೇಡಿಕೆಗಳ ಹಾಗೂ ಸಮಸ್ಯೆಗಳ ಕುರಿತು ಪರಿಶೀಲಿಸಿ ಸರ್ಕಾರಕ್ಕೆ ಸೂಕ್ತ ಸಲಹೆ ಹಾಗೂ ಶಿಫಾರಸುಗಳನ್ನು ನೀಡುವಂತೆ ಪ್ರಾದೇಶಿಕ ಆಯುಕ್ತ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಲಹಾ ಸಮಿತಿಯನ್ನು ರಚಿಸಲಾಗುತ್ತದೆ ಎಂದು ಕಂದಾಯ ಸಚಿವರು ತಿಳಿಸಿದ್ದಾರೆ.
ಮುಷ್ಕರ ಸಂದರ್ಭ ಸಾರ್ವಜನಿಕರಿಗೆ, ರೈತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಗ್ರಾಮ ಆಡಳಿತ ಅಧಿಕಾರಿಗಳು ನಿರ್ವಹಿಸುತ್ತಿದ್ದ ಕೆಲಸಗಳನ್ನು ರಾಜಸ್ವ ನಿರೀಕ್ಷಕರು ನಿರ್ವಹಿಸಿದ್ದಾರೆ ಎಂದು ಸದಸ್ಯರ ಪ್ರಶ್ನೆಗೆ ಉತ್ತರಿಸಿದರು.