ಜಿಲ್ಲಾದ್ಯಂತ ಎಳನೀರು ಕೊರತೆ: ಬಿಸಿಲಿನಿಂದ ಎಲ್ಲಿಲ್ಲದ ಬೇಡಿಕೆ

| Published : Apr 29 2024, 01:38 AM IST / Updated: Apr 29 2024, 01:17 PM IST

ಜಿಲ್ಲಾದ್ಯಂತ ಎಳನೀರು ಕೊರತೆ: ಬಿಸಿಲಿನಿಂದ ಎಲ್ಲಿಲ್ಲದ ಬೇಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

 ಮಂಡ್ಯದಲ್ಲಿ ದೇಹವನ್ನು ತಂಪಾಗಿಸುವುದಕ್ಕೆ   ಎಳನೀರಿಗೆ ಮುಗಿಬೀಳುತ್ತಿರುವುದರಿಂದ ಬೇಡಿಕೆಯಷ್ಟು ಎಳನೀರನ್ನು ಒದಗಿಸಲಾಗದೆ ಮಾರಾಟಗಾರರೇ ಪರದಾಡುತ್ತಿದ್ದಾರೆ.

 ಮಂಡ್ಯ :  ರಣ ಬಿಸಿಲಿನ ತಾಪಕ್ಕೆ ಕಂಗೆಟ್ಟುಹೋಗಿರುವ ಜನರು ದೇಹವನ್ನು ತಂಪಾಗಿಸಿಕೊಳ್ಳುವುದಕ್ಕೆ ಎಳನೀರಿಗೆ ಮೊರೆ ಹೋಗಿದ್ದಾರೆ. ಹಿಂದೆಂದಿಗಿಂತಲೂ ಈ ವರ್ಷ ಎಳನೀರಿಗೆ ಜನರಿಂದ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಆದರೆ, ಬಿಸಿಲ ತಾಪಕ್ಕೆ ತೆಂಗಿನ ಬುಂಡೆಗಳು ಉದುರುತ್ತಿರುವುದರಿಂದ ಎಳನೀರೇ ಸಿಗದಂತಹ ಪರಿಸ್ಥಿತಿ ಸೃಷ್ಟಿಯಾಗಿದೆ.

ಕೆಂಡದಂಥ ಬಿಸಿಲಿನ ಝಳದಿಂದ ದೇಹದಲ್ಲಿರುವ ನೀರಿನಂಶವೆಲ್ಲವೂ ಇಂಗಿಹೋಗುತ್ತಿದೆ. ಅದರಿಂದ ಪಾರಾಗುವುದಕ್ಕೆ ಹೆಚ್ಚಿನ ಸಂಖ್ಯೆಯ ಜನರು ಎಳನೀರನ್ನು ಆಶ್ರಯಿಸಿದ್ದಾರೆ. ದಿನಕ್ಕೆ ೨೦೦ ರಿಂದ ೩೦೦ ಮಾರಾಟವಾಗುತ್ತಿದ್ದ ಎಳನೀರು ಪ್ರಸ್ತುತ ೧೦೦೦ಕ್ಕೂ ಹೆಚ್ಚು ಮಾರಾಟವಾಗುತ್ತಿದೆ. ಜನರ ಬೇಡಿಕೆಯನ್ನು ಪೂರೈಸುವುದಕ್ಕೂ ಮಾರಾಟಗಾರರಿಂದ ಸಾಧ್ಯವಾಗುತ್ತಿಲ್ಲ.

ಕಾಯಿಗಟ್ಟುತ್ತಿರುವ ಎಳನೀರು:

ಇಬ್ಬರು ಮಾರಾಟಗಾರರು 200 ರಿಂದ 300 ಎಳನೀರನ್ನು ಕೊಚ್ಚಿ ಜನರಿಗೆ ನೀಡಬಹುದು. ಬೇಡಿಕೆ ಹೆಚ್ಚಾದಂತೆ ಕೂಲಿಯಾಳುಗಳನ್ನು ಬೇಡುತ್ತದೆ. ಕೂಲಿಯಾಳುಗಳನ್ನು ನೇಮಿಸಿಕೊಂಡರೂ ವಾಸ್ತವದಲ್ಲಿ ಎಳನೀರೇ ಸಿಗದಂತಾಗಿದೆ. ಒಂದು ಎಳನೀರು ೪೦ ರಿಂದ ೫೦ ರು.ವರೆಗೆ ಮಾರಾಟವಾಗುತ್ತಿದೆ. ಬಿಸಿಲ ತಾಪಕ್ಕೆ ಗಂಜಿ ರೂಪದಲ್ಲಿರಬೇಕಾದ ಎಳನೀರು ಕಾಯಿಗಟ್ಟಿದಂತಿದೆ. ಕಾಯೊಳಗಿರುವ ಎಳನೀರಿನ ಪ್ರಮಾಣವೂ ಕುಸಿದಿದೆ. ಪುಟ್ಟ ಗಾತ್ರದಲ್ಲಿ ಎಳನೀರುಗಳಿದ್ದರೂ ಅವುಗಳನ್ನೂ ಬಿಡದಂತೆ ಜನರು ಕೊಂಡು ಸೇವಿಸುತ್ತಿರುವುದನ್ನು ನೋಡಿದರೆ ಬೇಸಿಗೆಯ ಕರಾಳ ಪರಿಸ್ಥಿತಿಯ ದರ್ಶನವಾಗುತ್ತದೆ.

ತಾಪಕ್ಕೆ ಉದುರುತ್ತಿರುವ ತೆಂಗಿನ ಬುಂಡೆಗಳು:

ತೆಂಗಿನ ಮರಗಳ ಬೇರಿಗೆ ನೀರುಣಿಸಿದರಷ್ಟೇ ಸಾಲದು. ನೆತ್ತಿಯೂ ತಂಪಾಗಿರಬೇಕು. ನೆತ್ತಿಯ ಮೇಲೆ ತಾಪಮಾನ ಹೆಚ್ಚಿದಂತೆ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ತೆಂಗಿನ ಬುಂಡೆಗಳು ಬಿಸಿಲ ತಾಪಕ್ಕೆ ಕಳಚಿ ಬೀಳುತ್ತವೆ. ಹೀಗಾಗಿ ನೀರಾವರಿ ಆಶ್ರಿತ ಪ್ರದೇಶದಲ್ಲೂ ಎಳನೀರು ದೊರಕದಂತಾಗಿದೆ. ಬೇಸಿಗೆಯಲ್ಲಿ ಜನರಿಗೆ ಬೇಡಿಕೆ ಇರುವಷ್ಟು ಎಳನೀರು ಸಿಗದಿರುವುದು ಹಲವರನ್ನು ಕಂಗೆಡಿಸುವಂತೆ ಮಾಡಿದೆ.

ನಿರೀಕ್ಷಿತ ಬೆಳವಣಿಗೆ ಇಲ್ಲ:

ಮುಂಗಾರುಪೂರ್ವ ಮಳೆ ಸುರಿಯದೆ ತೆಂಗಿನಮರಗಳು ಕೃಷವಾಗುತ್ತಿವೆ. ಸುಳಿಯೇ ಒಣಗುವ ಆತಂಕ ಎದುರಾಗಿದೆ. ಬೇರುಮಟ್ಟವನ್ನು ಎಷ್ಟೇ ತಂಪಾಗಿರಿಸಿದರೂ ಸುಳಿಯ ಮಟ್ಟ ತಂಪಾಗಬೇಕಾದರೆ ಮಳೆ ಬೀಳಲೇಬೇಕು. ಮಳೆಯಾಗದಿರುವುದರಿಂದ ಸಕಾಲದಲ್ಲಿ ಹೊಂಬಾಳೆ ಒಡೆಯುತ್ತಿಲ್ಲ. ನಿರೀಕ್ಷಿತ ರೀತಿಯಲ್ಲಿ ತೆಂಗಿನ ಬುಂಡೆಗಳು ಬೆಳವಣಿಗೆ ಕಾಣುತ್ತಿಲ್ಲ. ಎಳನೀರಿನ ಗಾತ್ರವೂ ಕಡಿಮೆಯಾಗಿದೆಯಲ್ಲದೆ, ಎಳನೀರು ಹಂತದಲ್ಲೇ ಕಾಯಿಕಟ್ಟುತ್ತಿರುವುದರಿಂದ ನೀರಿನ ಪ್ರಮಾಣವೂ ಕುಸಿದಿದೆ. ಹೀಗಾಗಿ ಎಳನೀರಿಗೆ ತೀವ್ರ ಕೊರತೆ ಎದುರಿಸುವಂತಾಗಿದೆ.

ಹೆಚ್ಚಿರುವ ಜನರ ದಾಹದ ತೀವ್ರತೆ:

ಎಳನೀರು ಮಾರಾಟಗಾರರು ಬೆಳಿಗ್ಗೆ ೪ ಗಂಟೆಗೆ ಎದ್ದು ಎಳನೀರನ್ನು ವಾಹನದಲ್ಲಿ ಹುಡುಕಿಕೊಂಡು ಹೋಗುತ್ತಿದ್ದಾರೆ. ೨೮ ರಿಂದ ೩೦ ರು. ಕೊಟ್ಟು ಖರೀದಿಸಿಕೊಂಡು ಬರುತ್ತಿದ್ದಾರೆ. ಒಂದು ಸಾವಿರದಷ್ಟು ಎಳನೀರು ತರುತ್ತಿದ್ದವರು ಈಗ ಕೇವಲ ೧೦೦ ರಿಂದ ೨೦೦ ಎಳನೀರನ್ನು ತರುತ್ತಿದ್ದಾರೆ. ಒಮ್ಮೊಮ್ಮೆ ಅದೂ ಕೂಡ ಸಿಗುವುದಿಲ್ಲ ಎನ್ನುತ್ತಿದ್ದಾರೆ. ಪುಟ್ಟಗಾತ್ರದ ಎಳನೀರನ್ನು ಹಿಂದೆಲ್ಲಾ ಮಾರಾಟವನ್ನೇ ಮಾಡುತ್ತಿರಲಿಲ್ಲ. ಈಗ ವಿಧಿಯಿಲ್ಲದೇ ಅವುಗಳನ್ನು ಕೊಂಡು ತಂದು ಮಾರಾಟ ಮಾಡುವಂತಾಗಿದೆ. ಜನರೂ ಕೂಡ ಎಳನೀರಿನ ಗಾತ್ರವನ್ನೂ ನೋಡದೇ ಕೊಂಡು ಕುಡಿಯುತ್ತಿರುವುದು ಅವರಲ್ಲಿರುವ ದಾಹದ ತೀವ್ರತೆಗೆ ಸಾಕ್ಷಿಯಾಗಿದೆ.

ಕಲ್ಲಂಗಡಿ, ಹಣ್ಣಿನ ಜ್ಯೂಸ್‌ಗಿಂತ ಎಳನೀರಿಗೇ ಹೆಚ್ಚು ಬೇಡಿಕೆ

ದೇಹವನ್ನು ತಂಪಾಗಿಸುವುದಕ್ಕೆ ಹಣ್ಣಿನ ಜ್ಯೂಸ್, ಕಲ್ಲಂಗಡಿ ಇದ್ದರೂ ಎಳನೀರಿಗೆ ಇರುವಷ್ಟು ಬೇಡಿಕೆ ಇವುಗಳಿಗೆ ಇಲ್ಲ. ಕಲ್ಲಂಗಡಿ ರಾಶಿ ರಾಶಿ ಬಿದ್ದಿದ್ದರೂ ಜನರು ಎಳನೀರನ್ನೇ ಹುಡುಕಿಕೊಂಡು ಹೋಗುತ್ತಿದ್ದಾರೆ. ಕಲ್ಲಂಗಡಿ ಒಂದು ಹಣ್ಣನ್ನು ತಿಂದರೂ, ಜ್ಯೂಸ್ ಎಷ್ಟೇ ಕುಡಿದರೂ ಒಂದು ಎಳನೀರು ಕುಡಿದಷ್ಟು ಸಮಾಧಾನ ಜನರಿಗೆ ಹಣ್ಣಿನ ಜ್ಯೂಸ್ ಮತ್ತು ಕಲ್ಲಂಗಡಿ ಹಣ್ಣಿನಿಂದ ಸಿಗದಂತಾಗಿದೆ. ಪ್ರತಿಯೊಬ್ಬರೂ ಎಳನೀರಿಗೆ ಮುಗಿಬೀಳುತ್ತಿರುವುದರಿಂದ ಬೇಡಿಕೆಯಷ್ಟು ಎಳನೀರನ್ನು ಒದಗಿಸಲಾಗದೆ ಮಾರಾಟಗಾರರೇ ಪರದಾಡುತ್ತಿದ್ದಾರೆ.

ಬೆಳಿಗ್ಗೆಯಿಂದ ಮಧ್ಯಾಹ್ನದ ವೇಳೆಗೆ ೩೦೦ ರಿಂದ ೫೦೦ ಎಳನೀರು ಖಾಲಿಯಾಗುತ್ತವೆ. ಒಂದು ಸಾವಿರವಿದ್ದರೂ ಸಂಜೆಯ ವೇಳೆಗೆ ಖಾಲಿಯಾಗುತ್ತವೆ. ಕೆಲವರು ಎಳನೀರಿಗೆ ಮೊದಲೇ ಬುಕ್ಕಿಂಗ್ ಮಾಡಿರುತ್ತಾರೆ. ನಿತ್ಯ ನಮಗೂ ಎಳನೀರು ಒಡೆದು ಒಡೆದು ಸಾಕಾಗುತ್ತದೆ. ಬೆಳಿಗ್ಗೆ ೪ ಗಂಟೆಗೆ ಎಳನೀರು ಹುಡುಕಿಕೊಂಡು ಹೊರಟರೆ ೮ ಗಂಟೆ ವೇಳೆಗೆ ವಾಪಸಾಗುತ್ತೇವೆ. ಸದ್ಯದ ಸ್ಥಿತಿಯಲ್ಲಿ ಎಳನೀರು ಮೊದಲಿನಂತೆ ಸಿಗುತ್ತಿಲ್ಲ. ಸಿಗುವ ೨೦೦-೩೦೦ ಎಳನೀರನ್ನು ತಂದು ಬೆಳಿಗ್ಗೆ ೮ ರಿಂದ ಮಧ್ಯಾಹ್ನ ೧ ಗಂಟೆಯ ವೇಳೆಗೆ ಮಾರಾಟ ಮಾಡಿ ಮನೆಗೆ ತೆರಳುತ್ತೇವೆ ಎಂದು ಎಳನೀರು ಮಾರಾಟಗಾರರು ಕನ್ನಡಪ್ರಭಕ್ಕೆ ತಿಳಿಸಿದರು.

‘ನನ್ನ ಜೀವಮಾನದಲ್ಲೇ ಇಷ್ಟೊಂದು ಬಿಸಿಲನ್ನು ಕಂಡಿಲ್ಲ. ಜನರೇನೋ ಎಳನೀರು ಕುಡಿಯುವುದಕ್ಕೆ ದುಂಬಾಲು ಬೀಳುತ್ತಿದ್ದಾರೆ. ಅವರಿಗೆ ಅಗತ್ಯವಿರುವಷ್ಟು ಎಳನೀರನ್ನು ಪೂರೈಸಲಾಗುತ್ತಿಲ್ಲ. ತೆಂಗಿನ ಮರಗಳಲ್ಲಿ ಎಳನೀರೇ ಇಲ್ಲವಾಗಿವೆ. ಬಿಸಿಲ ತಾಪಕ್ಕೆ ಬುಂಡೆಗಳು ಕಳಚಿ ಬೀಳುತ್ತಿರುವುದರಿಂದ ಎಳನೀರಿಗೆ ತೀವ್ರ ಕೊರತೆ ಇದೆ.’

- ಶ್ರೀನಿವಾಸ್, ಹನಿಯಂಬಾಡಿ, ಎಳನೀರು ಮಾರಾಟಗಾರ