ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೇಂದ್ರ ಬಿಜೆಪಿ ಸರ್ಕಾರವು ಈ ಸಾಲಿನ ಬಜೆಟ್‌ನಲ್ಲೂ ಕರ್ನಾಟಕಕ್ಕೆ ಖಾಲಿ ಚೊಂಬು ಹಾಗೂ ತೆಂಗಿನಕಾಯಿ ಚಿಪ್ಪು ಕೊಟ್ಟಿದೆ. ಯಾವುದೇ ಹೊಸ ಯೋಜನೆ ನೀಡದೆ ರಾಜ್ಯಕ್ಕೆ ಅನ್ಯಾಯ ಮಾಡುವುದನ್ನು ಮುಂದುವರಿಸಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಲೇವಡಿ ಮಾಡಿದ್ದಾರೆ.ಖಾಲಿ ಚೊಂಬು ಹಾಗೂ ಮೂರುನಾಮ ಬಳಿದ ತೆಂಗಿನಕಾಯಿ ಚಿಪ್ಪುಗಳನ್ನು ಮುಂದಿಟ್ಟುಕೊಂಡು ಮಡಿಕೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ಬಾಣ ಪ್ರಯೋಗಿಸಿದರು.
ಗೋವಿಂದ.. ಗೋವಿಂದ.. ಎಂದು ಕೂಗುತ್ತಲೇ ಖಾಲಿ ಚೊಂಬು, ತೆಂಗಿನಕಾಯಿ ಚಿಪ್ಪು ಪ್ರದರ್ಶಿಸಿದರು.ಕೇಂದ್ರದಲ್ಲಿ ಸಚಿವರಾಗಿರುವ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ, ಎಚ್.ಡಿ. ಕುಮಾರಸ್ವಾಮಿ ಅವರು ಕರ್ನಾಟಕಕ್ಕೆ ಒಂದೇ ಒಂದು ಯೋಜನೆಯನ್ನೂ ತರಲು ಸಾಧ್ಯವಾಗಿಲ್ಲ. ಇವರು ದಿನ ಬೆಳಗಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಿಂದಿಸುತ್ತಾ ಕಾಲಹರಣ ಮಾಡುತ್ತಿದ್ದಾರೆ ಹೊರತು ರಾಜ್ಯದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿಲ್ಲ ಎಂದು ಟೀಕಿಸಿದರು.ಕೇಂದ್ರ ಸರ್ಕಾರವು ರೈತರು, ಯುವಕರು, ಪರಿಶಿಷ್ಟರು ಹಾಗೂ ಅಲ್ಪಸಂಖ್ಯಾತರ ವಿರೋಧಿಯಾಗಿದೆ. ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳನ್ನು ಸಂಪೂರ್ಣ ಕಡೆಗಣಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಬೇಡಿಕೆಗಳನ್ನು ಮಂಡಿಸಿದ್ದರು. ಆದರೆ ಅದಕ್ಕೆ ಸ್ಪಂದನೆ ದೊರೆತಿಲ್ಲ. ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಇದ್ದಾಗ ಬಜೆಟ್ ಗಾತ್ರ 14 ಲಕ್ಷ ಕೋಟಿ ಇತ್ತು. ಈ ಬಾರಿಯ ಬಜೆಟ್ ಗಾತ್ರ 50 ಲಕ್ಷ ಕೋಟಿ ದಾಟಿದೆ. 16 ಲಕ್ಷ ಕೋಟಿ ಸಾಲ ತೆಗೆದುಕೊಂಡಿದ್ದಾರೆ. 1947ರಿಂದ 2014ರ ವರೆಗೆ ನಮ್ಮ ದೇಶ ಮಾಡಿದ್ದ ಸಾಲ 53 ಲಕ್ಷ ಕೋಟಿ ಇತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 10 ವರ್ಷಗಳಲ್ಲಿ ಸಾಲದ ಪ್ರಮಾಣ 205 ಲಕ್ಷ ಕೋಟಿಯಾಗಿದೆ ಎಂದು ದೂರಿದರು.
ದೇಶವನ್ನು ಅಭಿವೃದ್ಧಿ ಪಥದತ್ತ ನಡೆಸುವ ಬದಲಿಗೆ ಸಾಲದ ಕೂಪಕ್ಕೆ ತಳ್ಳಿರುವಂತಹ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ನರೇಗಾ ಅನುದಾನವನ್ನೂ ಕಡಿಮೆ ಮಾಡಿದ್ದಾರೆ. ಕೃಷಿ ಕ್ಷೇತ್ರಕ್ಕೆ ಅನುದಾನ ಹಂಚಿಕೆಯಲ್ಲೂ ದೊಡ್ಡ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇಡೀ ದೇಶದಲ್ಲಿ ಟ್ಯಾಕ್ಸ್ ಕಟ್ಟುವುದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿ ಇದೆ. ಆದರೆ ನಮ್ಮ ಹಣವನ್ನು ನಮಗೆ ಕೊಡದೇ ನಮ್ಮಿಂದ ಸಂಗ್ರಹ ಮಾಡಿರುವ ಹಣವನ್ನು ಬೇರೆ ಬೇರೆ ರಾಜ್ಯಗಳಿಗೆ ಕೊಡುವ ಕೆಲಸ ಕೇಂದ್ರ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.ಕೊಡಗಿಗೆ ರೈಲ್ವೆ ಸಂಪರ್ಕಕ್ಕೆ 1854 ಕೋಟಿ ಎಂದು ಹಿಂದೆ ಘೋಷಿಸಲಾಗಿದ್ದರೂ, ಒಂದು ಪೈಸೆಯನ್ನು ಕೇಂದ್ರ ಒದಗಿಸಿಲ್ಲ. ರೈಲ್ವೆಗೆ ಸಂಬಂಧಿಸಿದ ಸರ್ವೇ ನಡೆದಿದೆ ಎನ್ನಲಾಗುತ್ತದೆಯಾದರು, ಅದಕ್ಕೂ ಪುರಾವೆಗಳಿಲ್ಲ. ಮಡಿಕೇರಿಯಲ್ಲಿ ಏರ್ ಸ್ಟ್ರಿಪ್ ಮಾಡುತ್ತೇವೆ ಎನ್ನುವ ವಿಚಾರಗಳಿಗೂ ಇಂದು ಬೆಲೆ ಇಲ್ಲದಾಗಿದೆ. ಈ ಕ್ಷೇತ್ರದ ಸಂಸದರು ಸ್ಥಳೀಯ ಮುಖಂಡರನ್ನು ಕಾಫಿ ಸಮಸ್ಯೆ ಬಗೆಹರಿಕೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವರನ್ನು ಭೇಟಿ ಮಾಡಿಸಿದ್ದಾರಾದರೂ, ಸಮಸ್ಯೆಗೆ ಪರಿಹಾರ ಬಜೆಟ್‌ನಲ್ಲಿ ಬಂದಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಮಾಜಿ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ವಕ್ತಾರ ತೆನ್ನಿರ ಮೈನಾ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎ.ಹಂಸ ಹಾಗೂ ಕಕ್ಕಬ್ಬೆ ಗ್ರಾ.ಪಂ. ಮಾಜಿ ಅಧ್ಯಕ್ಷ ಕಲಿಯಂಡ ಸಂಪನ್ ಸುದ್ದಿಗೋಷ್ಠಿಯಲ್ಲಿದ್ದರು.--------------------------
ಸುಳ್ಳು ಹೇಳುವುದರಲ್ಲಿ ಬಿಜೆಪಿಯನ್ನೇ ಹಿಂದಿಕ್ಕಿದ್ದಾರೆ ಕುಮಾರಸ್ವಾಮಿ: ಲಕ್ಷ್ಮಣ್ಸುಳ್ಳು ಹೇಳುವ ಪ್ರವೃತ್ತಿಯನ್ನು ಬೆಳೆಸಿಕೊಂಡಿರುವ ಕುಮಾರಸ್ವಾಮಿ, ಬಿಜೆಪಿಯನ್ನೇ ಓವರ್ ಟೇಕ್ ಮಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಟೀಕಿಸಿದ್ದಾರೆ.ಕುದುರೆಮುಖ ಕಬ್ಬಿಣ ಮತ್ತು ಅದಿರು ಮಂಗಳೂರು ಕಾರ್ಖಾನೆ ಮುಚ್ಚಿಸಲು ರಾಜ್ಯ ಸರ್ಕಾರದಿಂದ ಷಡ್ಯಂತ್ರ ನಡೆಯುತ್ತಿದೆ ಎಂಬ ಎಚ್‌ಡಿಕೆ ಹೇಳಿಕೆ ವಿಚಾರ ಕುರಿತು ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕಲ್ಲು ಹಾಕುತ್ತಿದ್ದೇವೆ ಎನ್ನುವುದಕ್ಕೆ ಏನಾದರೂ ಸಾಕ್ಷ್ಯಗಳಿದ್ದರೆ ಹೇಳಿ ಸ್ವಾಮಿ ಎಂದರು.ನೀವು ಎರಡು ಬಾರಿ ಸಿಎಂ ಆಗಿದ್ರಿ, ನಿಮ್ಮ ತಂದೆ ಪ್ರಧಾನ ಮಂತ್ರಿಗಳಾಗಿದ್ದರು, ಇದೀಗ ನೀವು ಭಾರಿ ಕೈಗಾರಿಕೆ ಸಚಿವರಾಗಿದ್ದೀರ, ರಾಜ್ಯಕ್ಕೆ ಕೈಗಾರಿಕೆಗಳನ್ನು ತರುತ್ತೀರಾ, ಉದ್ಯೋಗ ಕೊಡ್ತೀರ ಅಂದರೆ ಯಾರಾದ್ರೂ ಕಲ್ಲು ಹಾಕುತ್ತಾರಾ ಎಂದು ಪ್ರಶ್ನಿಸಿದ ಅವರು, ನೀವು ಬಿಜೆಪಿಯವರಗಿಂತ ಹೆಚ್ಚು ಸುಳ್ಳು ಹೇಳುತ್ತಿದ್ದೀರಾ, ಸುಳ್ಳು ಹೇಳುವುದರಲ್ಲಿ ಬಿಜೆಪಿಯವರನ್ನು ಓವರ್ ಟೇಕ್ ಮಾಡುತ್ತಿದ್ದೀರಾ, ಈ ರೀತಿ ಸುಳ್ಳು ಹೇಳುವ ಪ್ರವೃತ್ತಿಯನ್ನು ಬೆಳೆಸಿಕೊಂಡಿರುವ ನೀವು ಹೇಳುತ್ತಿರುವುದು ಕುಣಿಯಲಾರದವಳು ನೆಲ ಡೊಂಕು ಎಂದರಂತೆ ಆಗಿದೆ ಎಂದು ವ್ಯಂಗ್ಯವಾಡಿದರು.
ಜನರು ಉಗಿಯುವುದರಿಂದ ತಪ್ಪಿಸಿಕೊಳ್ಳಲು ನೀವು ಹೀಗೆ ಸುಳ್ಳು ಹೇಳುತಿದ್ದೀರಾ. ಬಿಜೆಪಿ, ಜೆಡಿಎಸ್‌ನವರ ಯೋಗ್ಯತೆಗೆ ರಾಜ್ಯಕ್ಕೆ ಒಂದು ಬಿಡಿಗಾಸು ತರಲು ಆಗಲಿಲ್ಲ. ಸಿದ್ದರಾಮಯ್ಯ, ಕಾಂಗ್ರೆಸ್ ವಿರುದ್ಧ ಸೇಡು ತೀರಿಸಿಕೊಳ್ಳಲು ರಾಜ್ಯದ ಜನರ ಮೇಲೆ ಸೇಡು ತೀರಿಸುತಿದ್ದೀರಾ ಎಂದು ವಾಗ್ಧಾಳಿ ನಡೆಸಿದ ಎಂ.ಲಕ್ಷ್ಮಣ್, ನೀವು ರಾಜ್ಯಕ್ಕೆ ಯಾವ ಕಾರ್ಯಕ್ರಮ ತಂದರು ನಮ್ಮ ಸಂಪೂರ್ಣ ಸಹಕಾರವಿರುತ್ತದೆ ಎಂದರು.