ಕಾಂಗ್ರೆಸ್‌ ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯತ್ತ: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ

| Published : Apr 16 2024, 01:08 AM IST / Updated: Apr 16 2024, 11:22 AM IST

ಕಾಂಗ್ರೆಸ್‌ ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯತ್ತ: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಗ್ಯಾರಂಟಿ ಯೋಜನೆಗಳ ಫಲವಾಗಿ ರಾಜ್ಯ ಇಂದು ದಿವಾಳಿಯತ್ತ ಸಾಗುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಸಕಲೇಶಪುರದಲ್ಲಿ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಪ್ರಚಾರ ನಡೆಸಿ ಮಾತನಾಡಿದರು.

 ಸಕಲೇಶಪುರ :  ಗ್ಯಾರಂಟಿ ಯೋಜನೆಗಳ ಫಲವಾಗಿ ರಾಜ್ಯ ಇಂದು ದಿವಾಳಿಯತ್ತ ಸಾಗುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಸೊಮವಾರ ಪಟ್ಟಣದಲ್ಲಿ ರೋಡ್ ಶೋ ಮೂಲಕ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಪ್ರಚಾರ ನಡೆಸಿ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿ, ‘ಬೇಕಾಬಿಟ್ಟಿ ಗ್ಯಾರಂಟಿ ಘೋಷಿಸಿರುವ ರಾಜ್ಯ ಸರ್ಕಾರ ಕಳೆದ 11 ತಿಂಗಳಿನಿಂದ ಈ ಯೋಜನೆಗಳ ಹಣ ಹೊಂದಿಸಲು ಎಲ್ಲ ವಸ್ತುಗಳ ಬೆಲೆಯನ್ನು ನಾಲ್ಕು ಪಟ್ಟು ಹೆಚ್ಚಳ ಮಾಡಿದೆ. ರಾಜ್ಯ ಬಿಜೆಪಿ ಸರ್ಕಾರ ಇದ್ದಾಗ ಪರಿಶಿಷ್ಟಜಾತಿ ವರ್ಗಗಳ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ 15  ಸಾವಿರ ಕೋಟಿ ರು. ಅನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಳ್ಳುವ ಮೂಲಕ ಪರಿಶಿಷ್ಟ ಜಾತಿಗೂ ಅನ್ಯಾಯ ಎಸಗಲಾಗಿದೆ’ ಎಂದು ದೂರಿದರು.

‘ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದು ಅಸಾದ್ಯ ಎಂಬ ವರದಿ ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ತಲುಪಿಸಿರುವುದರಿಂದ ಲೋಕಸಭಾ ಚುನಾವಣೆಯ ನಂತರ ಈ ಎಲ್ಲ ಗ್ಯಾರಂಟಿಗಳು ಸ್ಥಗಿತಗೊಳ್ಳುವುದು ನಿಶ್ಚಿತವಾಗಿದೆ. ರಾಜ್ಯದಲ್ಲಿ ಭೀಕರ ಬರಗಾಲಕ್ಕೆ ಸಿಲುಕಿ ೮೪೦ ರೈತರು ಮೃತಪಟ್ಟರೂ ಪರಿಹಾರ ನೀಡಲು ಸರ್ಕಾರದ ಬಳಿ ಹಣವಿಲ್ಲದಾಗಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ಬಂದ ನಂತರ ಹಿಂದೂಗಳ ಮಾರಣಹೋಮಕ್ಕೆ ಕಾರಣವಾಗಿದ್ದ 370 ನೇ ವಿಧಿ ತೆಗೆದು ಹಾಕುವ ಮೂಲಕ ಶಾಂತಿ ನೆಲಸುವಂತೆ ಮಾಡಲಾಗಿದೆ’ ಎಂದು ಹೇಳಿದರು.

‘೩೭೦ನೇ ವಿಧಿ ಕಾಂಗ್ರೆಸ್ ಪಕ್ಷದ ಪಾಪದ ಕೂಸಾಗಿದೆ. ದೇಶದ ೮೦ ಕೋಟಿ ಬಡವರಿಗೆ ಕೇಂದ್ರ ಸರ್ಕಾರ ಐದು ಕೆಜಿ ಅಕ್ಕಿ ನೀಡುವ ಮೂಲಕ ಬಡವರ ಪರವಾಗಿ ಕೆಲಸ ಮಾಡುತ್ತಿದೆ. ದೇಶದ ಸುರಕ್ಷತೆಯ ದೃಷ್ಟಿಯಿಂದ ದೇವೇಗೌಡರು ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ. ಕಳೆದ ೧೦ ವರ್ಷಗಳಲ್ಲಿ ಒಂದು ರಜೆ ತೆಗೆದುಕೊಳ್ಳದೆ ಕೆಲಸ ಮಾಡುತ್ತಿರುವ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡಲು ಪಕ್ಷದ ಕಾರ್ಯಕರ್ತರು ಕನಿಷ್ಠ ತಮ್ಮ ಬೂತ್‌ಗಳಲ್ಲಿ ಎರಡು ಗಂಟೆ ಸಮಯ ಕಳೆಯುವ ಮೂಲಕ ಕೇಂದ್ರ ಸರ್ಕಾರದ ಯೋಜನೆಗಳನ್ನು ಮತದಾರರಿಗೆ ವಿವರಿಸುವ ಮೂಲಕ ಮೋದಿಯವರ ಕೈ ಬಲಪಡಿಸಬೇಕು’ ಎಂದರು.

ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾತನಾಢಿ, ‘ಹಾಸನ ಲೋಕಸಬಾ ಕ್ಷೇತ್ರದಿಂದ ನನ್ನ ಸ್ಪರ್ಧೆ ನೆಪಮಾತ್ರ. ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ನನಗೆ ಆಶೀರ್ವಾದ ಮಾಡಬೇಕು. ರಾಜ್ಯ ಸರ್ಕಾರ ಗ್ಯಾರಂಟಿಗಳ ಮೇಲೆ ನಂಬಿಕೆ ಇಟ್ಟು ಹೋರಾಟ ಮಾಡುತ್ತಿದೆ. ಆದರೆ ಗ್ಯಾರಂಟಿಗಳು ಕೈಹಿಡಿಯುವುದಿಲ್ಲ ಎಂಬುದು ಸದ್ಯ ಸಿದ್ದರಾಮಯ್ಯನವರಿಗೆ ಮನವರಿಕೆಯಾಗಿದೆ. ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಕಳೆದ ೫ ವರ್ಷಗಳ ಅವಧಿಯಲ್ಲಿ 15 ಸಾವಿರ ಕೋಟಿ ಅನುದಾನ ನೀಡಿದೆ’ ಎಂದು ತಿಳಿಸಿದರು.

ರೋಡ್ ಶೋ: ಪಟ್ಟಣಕ್ಕೆ ಆಗಮಿಸಿದ ವಿಜಯೇಂದ್ರ ಸಕಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ದೇವಸ್ಥಾನ ಪ್ರದಕ್ಷಿಣೆ ಹಾಕಿದ ನಂತರ ದೇವಸ್ಥಾನದಿಂದ ಹಳೆಬಸ್ ನಿಲ್ದಾನದವರಗೆ ರೋಡ್‌ ಶೋ ನೆಡೆಸಿದರು. ಹಳೆಬಸ್ ನಿಲ್ದಾಣದಲ್ಲಿ ಸಮಾಜ ಸೇವಕ ಬನ್ನಹಳ್ಳಿಪುನೀತ್ ನಾಲ್ಕು ನೂರು ಕೆ.ಜಿ. ತೂಕದ ಸೇಬಿನ ಹಾರ ಹಾಕುವ ಮೂಲಕ ಗಮನಸೆಳೆದರು.

ಶಾಸಕ ಸಿಮೆಂಟ್ ಮಂಜು, ಮಾಜಿ ಶಾಶಕ ಎಚ್.ಕೆ.ಕುಮಾರಸ್ವಾಮಿ, ಮಾಜಿ ಶಾಸಕರಾದ ಗುರುದೇವ್, ಎಚ್.ಎಂ.ವಿಶ್ವನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ತಾಲೂಕು ಬಿಜೆಪಿ ಅಧ್ಯಕ್ಷ ಅಶ್ವಥ್, ಕೆ.ಎಲ್.ಸೋಮಶೇಖರ್ ಇದ್ದರು.

ಸಕಲೇಶಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸಮಾಜ ಸೇವಕ ಬನ್ನಹಳ್ಳಿ ಪುನೀತ್ ನಾಲ್ಕು ನೂರು ಕೆಜಿ ಸೇಬಿನ ಹಾರ ಹಾಕಿದರು. ಬಳಿಕ ಸಾರ್ವಜನಿಕ ಸಭೆಯಲ್ಲಿ ವಿಜಯೇಂದ್ರ ಮಾತನಾಡಿದರು.