ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಕೆರಗೋಡು ಆರ್.ಯೋಗಾನಂದ ಅವರ ಅಭಿಮಾನಿ ಬಳಗದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ನಗರದ ಬಂದೀಗೌಡ ಬಡಾವಣೆಯಲ್ಲಿರುವ ಶ್ರೀಕಾಲಭೈರವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದೇವರಿಗೆ ಅಭಿಷೇಕ ಮತ್ತು ವಿಶೇಷ ಪೂಜೆ ನೆರವೇರಿಸಿದರು. ಆದಿ ಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀಪುರುಷೋತ್ತಮಾನಂದನಾಥ ಸ್ವಾಮೀಜಿ ಸಮ್ಮುಖದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು. ಭಕ್ತರಿಗೆ ಪ್ರಸಾದ ಮತ್ತು ಉಪಾಹಾರ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು. ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬರಿಗೆ ಲ್ಯಾಪ್‌ಟಾಪ್‌ನ್ನು ಉಚಿತವಾಗಿ ವಿತರಿಸಿದರು.
ನಂತರ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಮಮತೆಯ ಮಡಿಲು ಆಶ್ರಯದಲ್ಲಿ ರೋಗಿಗಳು ಮತ್ತು ಅವರ ಸಂಬಂಧಿಕರಿಗೆ ಒಂದು ದಿನದ ಊಟದ ವ್ಯವಸ್ಥೆ ಮಾಡಿದ್ದರು. ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿದರು. ರಕ್ತನಿಧಿ ಕೇಂದ್ರದ ಆವರಣದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಹಲವು ಯುವಕರು ರಕ್ತದಾನ ಮಾಡಿದರು.ಮಂಡ್ಯದ ಎಲ್ಲಾ ವೃದ್ಧಾಶ್ರಮ ಮತ್ತು ಅನಾಥಾಶ್ರಮಗಳಲ್ಲಿ ಊಟದ ವ್ಯವಸ್ಥೆ, ಆರ್‌ಟಿಒ ಕಚೇರಿ ಎದುರಿರುವ ಕಾಳಪ್ಪ ಬಡಾವಣೆಯ ನಿವಾಸಿಗಳಿಗೆ ಫುಡ್‌ಕಿಟ್ ವಿತರಣೆ ವಿತರಣೆ ಮಾಡಿ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಲಾಯಿತು.
ಜೆಡಿಎಸ್ ಮುಖಂಡ ಪ್ರಶಾಂತ್ ಅವರು ಮಾತನಾಡಿ, ಹೋರಾಟದ ಮೂಲಕ ಬೆಳೆದುಬಂದವರು ಹೆಚ್.ಡಿ.ದೇವೇಗೌಡರು. ಮುಖ್ಯಮಂತ್ರಿ, ಪ್ರಧಾನಿಯಾಗಿ ಹಲವು ಮಹತ್ವದ ಯೋಜನೆಗಳು, ರೈತಪರ, ಮಹಿಳೆಯರ ಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು. ಇಳಿ ವಯಸ್ಸಿನಲ್ಲಿ ರಾಜಕೀಯ ಹೋರಾಟವನ್ನು ಮುಂದುವರೆಸಿದ್ದಾರೆ. ಅವರು ಶತಾಯುಷಿಗಳಾಗಿ ರಾಜ್ಯ ಮತ್ತು ದೇಶದ ಪ್ರಗತಿಗೆ ಮಾರ್ಗದರ್ಶಕರಾಗಿರಬೇಕೆಂದು ಕೆರಗೋಡು ಯೋಗಾನಂದ ಅಭಿಮಾನಿ ಬಳಗ ದೇವರಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು.
ಎಚ್.ಡಿ.ದೇವೇಗೌಡರು ಹಿರಿಯರು ಹಾಗೂ ಅನುಭವಿ ರಾಜಕಾರಣಿಯಾಗಿದ್ದಾರೆ. ನೀರಾವರಿ ಸೇರಿದಂತೆ ಹಲವಾರು ವಿಚಾರಗಳಲ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರನ್ನು ಮತ್ತೊಮ್ಮೆ ರಾಜ್ಯಸಭೆಗೆ ಕಳುಹಿಸುವ ಮೂಲಕ ಅವರಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.
ಆರ್.ಯೋಗಾನಂದ ಅವರು ಯುವಕರಾಗಿದ್ದು, ಭರವಸೆಯ ರಾಜಕೀಯ ನಾಯಕರಾಗಿ ಬೆಳವಣಿಗೆ ಸಾಧಿಸುವ ಹಂಬಲ ಹೊಂದಿದ್ದಾರೆ. ಅವರಿಗೆ ರಾಜಕೀಯ ಶಕ್ತಿ ಬರಲಿ. ಇನ್ನಷ್ಟು ಹೆಚ್ಚು ಸೇವೆ ಮಾಡಲು ಜನರು ಅವರಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ, ಬಿಳಿದೇಗಲು ವಿವೇಕ್, ಪಿ.ಲಂಕೇಶ್ ಮಂಗಲ, ರಕ್ಷಿತ್ ರಾಜ್, ಕಲ್ಲಳ್ಳಿ ಶಿವರಾಮ್, ಧರ್ಮೇಂದ್ರ ಮತ್ತಿತರರು ಹಾಜರಿದ್ದರು.