ಸಾರಾಂಶ
ಸಿಎಂ ಸಿದ್ದರಾಮಯ್ಯ ‘ಪ್ರಜಾ ಸೌಧ’ ಲೋಕಾರ್ಪಣೆ, ರಾಜ್ಯದಲ್ಲೇ ಅತೀ ದೊಡ್ಡ ವಿಸ್ತೀರ್ಣದ ಡಿಸಿ ಸಂಕೀರ್ಣ
ಕನ್ನಡಪ್ರಭ ವಾರ್ತೆ ಮಂಗಳೂರುಕಳೆದ ಆರು ವರ್ಷಗಳ ಹಿಂದೆ ಶಿಲಾನ್ಯಾಸ ನಡೆದು ಸಮಾರು 75 ಕೋಟಿ ರು. ವೆಚ್ಚದಲ್ಲಿ ನಗರದ ಹೊರವಲಯದ ಪಡೀಲ್‌ನಲ್ಲಿ ತಲೆಎತ್ತಿದ ಜಿಲ್ಲಾಡಳಿತದ ನೂತನ ಸಂಕೀರ್ಣ ಕಟ್ಟಡ ‘ಪ್ರಜಾ ಸೌಧ’ ಮೇ 16 ರಂದು ಲೋಕಾರ್ಪಣೆಗೊಳ್ಳುತ್ತಿದೆ. ರಾಜ್ಯದಲ್ಲೇ ಅತೀ ದೊಡ್ಡ ವಿಸ್ತೀರ್ಣದ ಜಿಲ್ಲಾ ಸಂಕೀರ್ಣ ಎಂಬ ಹೆಗ್ಗಳಿಕೆಯನ್ನು ಇದು ಹೊಂದಿದೆ.
ಸಂಜೆ 3.30 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಜಾ ಸೌಧ ಲೋಕಾರ್ಪಣೆಗೊಳಿಸುವರು. ಈ ಸಂದರ್ಭ ನನ್ನ ಭೂಮಿ ಪಹಣಿ ಪತ್ರ ವಿತರಿಸುವ ಕಾರ್ಯವೂ ನಡೆಯಲಿದೆ. ಸಮಾರಂಭದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಸ್ಪೀಕರ್ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕಂದಾಯ ಸಚಿವ ಕೃಷ್ಣ ಬೈರೇ ಗೌಡ, ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್, ನಗರಾಭಿವೃದ್ಧಿ ಸಚಿವ ಸುರೇಶ್, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಶಿವಲಿಂಗೇ ಗೌಡ, ಜಿಲ್ಲೆಯ ಸಂಸದರು, ಶಾಸಕರು, ನಿಗಮಗಳ ಅಧ್ಯಕ್ಷರುಗಳು, ಅಧಿಕಾರಿಗಳು ಭಾಗವಹಿಸುವರು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅಧ್ಯಕ್ಷತೆ ವಹಿಸುವರು. ಪಡೀಲ್‌ನಲ್ಲಿ ಸುಮಾರು ೫.೮೯ ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ನೂತನ ಜಿಲ್ಲಾಧಿಕಾರಿ ಸಂಕೀರ್ಣ ಸುಸಜ್ಜಿತವಾಗಿ ರೂಪುಗೊಂಡಿದ್ದು, ಗಮನ ಸೆಳೆಯುತ್ತಿದೆ. ಇಲ್ಲಿ ಜಿಲ್ಲಾಧಿಕಾರಿ ಕಚೇರಿ ಆರಂಭವಾದ ಬಳಿಕ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಕಡಬ, ಉಪ್ಪಿನಂಗಡಿ ಮುಂತಾದ ಪ್ರದೇಶದ ಮಂದಿಗೆ ಹೆಚ್ಚು ಅನುಕೂಲವಾಗಲಿದೆ. ಅವರು ಮಂಗಳೂರು ನಗರಕ್ಕೆ ಬರುವುದು ತಪ್ಪಲಿದೆ. ಆದರೆ ಸುರತ್ಕಲ್, ಮೂಡುಬಿದಿರೆ ಭಾಗದಿಂದ ಬರುವವರು ಮಾತ್ರ ಮಂಗಳೂರು ನಗರಕ್ಕೆ ಬಂದು ಅಥವಾ ನಂತೂರು ಮೂಲಕ ಪ್ರಜಾಸೌಧ ತಲುಪಬೇಕಿದೆ.ಪಡೀಲ್‌ನಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣಕ್ಕೆ ೨೦೧೫ರ ಏಪ್ರಿಲ್ ೨೮ ರಂದು ರಾಜ್ಯ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಸಿಕ್ಕಿತ್ತು. ಬಳಿಕ ೨೦೧೭-೧೮ರಲ್ಲಿ ಕಾಮಗಾರಿ ಆದೇಶವಾಗಿ ೨೦೧೮ರ ಮಾರ್ಚ್ ೧೭ರಿಂದ ಒಟ್ಟು ೨,೨೬,೫೫೦.೫೧ ಚದರ ಅಡಿ ವಿಸ್ತೀರ್ಣದ ಸಂಕೀರ್ಣದ ಕಾಮಗಾರಿ ಆರಂಭಗೊಂಡಿತ್ತು. ಯೋಜನೆಗಾಗಿ ಆರಂಭದಲ್ಲಿ ೪೫ ಕೋಟಿ ರು.ಗಳ ಪ್ರಸ್ತಾವನೆ ಸಿದ್ಧವಾಗಿತ್ತು. ಆದರೆ ಪ್ರಸ್ತುತ ಒಟ್ಟು ೭೫ ಕೋ. ರು. ವೆಚ್ಚದಲ್ಲಿ ಕಟ್ಟಡ ನಿರ್ಮಾಣಗೊಂಡಿದೆ.
-------------------ಒಂದೇ ಸೂರಿನಡಿ ಎಲ್ಲ ಕಚೇರಿಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ವಿವಿಧ ಇಲಾಖೆಗಳ ಕಚೇರಿಗಳು ಒಂದೇ ಸೂರಿನಡಿ ಈ ಪ್ರಜಾ ಸೌಧದಲ್ಲಿ ಇರಲಿದೆ. ಒಟ್ಟು 42 ಕಚೇರಿಗಳು ನೂತನ ಸಂಕೀರ್ಣದಲ್ಲಿರಲಿದೆ. ಈ ಹೊಸ ಕಟ್ಟಡದ ಒಳಗೆ ಬೃಹತ್ ಇಂಡೋರ್ ಆಡಿಟೋರಿಯಂ ನಿರ್ಮಿಸಲಾಗಿದೆ. ಕೆಡಿಪಿ ಸಭೆ ಸೇರಿದಂತೆ ಇಲಾಖೆಗಳ ಸಭೆಗಳನ್ನು ಕೂಡ ಇಲ್ಲಿ ನಡೆಸಲು ಅನುಕೂಲತೆ ಒದಗಿಸಲಾಗಿದೆ.ನೆಲ ಅಂತಸ್ತು:
ಮಾಹಿತಿ ಕೇಂದ್ರ, ಸಾರ್ವಜನಿಕ ಸಂಪರ್ಕ ಕೇಂದ್ರ, ಸಹಾಯವಾಣಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ವಿಐಪಿ ನಿರೀಕ್ಷಣಾ ಕೊಠಡಿ, ಮಂಗಳೂರು ಶಾಸಕರು, ಸಂಸದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ, ಸಭಾಂಗಣ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಜಿಲ್ಲಾ ನೋಂದಣಾಧಿಕಾರಿಗಳು ಹಾಗೂ ಮುದ್ರಾಂಕಗಳ ಉಪ ಆಯುಕ್ತರ ಕಚೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ-ಚೈಲ್ಡ್ ಹೆಲ್ಪ್ ಲೈನ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ಇರಲಿದೆ.ಪ್ರಥಮ ಮಹಡಿಯಲ್ಲಿ ಡಿಸಿ ಕಚೇರಿ:
ಪ್ರಥಮ ಮಹಡಿಯಲ್ಲಿ ಡಿಸಿ ಹಾಗೂ ಎಡಿಸಿ ಕಚೇರಿ, ಕೋರ್ಟ್ ಹಾಲ್, ಸಭಾಂಗಣ ಇರಲಿದೆ. ಕಂದಾಯ ಶಾಖೆಯೂ ಇಲ್ಲೇ ಇರುತ್ತದೆ. ದಾಸ್ತಾನು ಕೊಠಡಿ, ಭೂಮಿ ಶಾಖೆ, ಕೆಎಸ್‌ಡಬ್ಲ್ಯೂಎಎನ್(ವಿಡಿಯೋ ಕಾನ್ಫರೆನ್ಸ್), ರಾಷ್ಟ್ರೀಯ ಮಾಹಿತಿ ಕೇಂದ್ರ, ಆಡಳಿತ ಶಾಖೆ ಭೂದಾಖಲೆಗಳ ಉಪ ನಿರ್ದೇಶಕರ ಕಚೇರಿ, ಧಾರ್ಮಿಕ ದತ್ತಿ ಇಲಾಖೆ ಕಚೇರಿ, ದಂಡನಾ ಶಾಖೆ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಮುಜರಾಯಿ ತಹಶೀಲ್ದಾರ್, ಮುಜರಾಯಿ ಶಾಖೆ, ಚುಕ್ತಾ ಶಾಖೆ, ಜಿಲ್ಲಾ ನಗರಾಭಿವೃದ್ಧಿ ಕೋಶ, ಚುನಾವಣಾ ಶಾಖೆ, ಕಾನೂನು ಶಾಖೆ, ಶಿಷ್ಟಾಚಾರ ಶಾಖೆ ಇರುತ್ತದೆ.ಎರಡನೇ ಮಹಡಿ:
ಕರ್ನಾಟಕ ಸರ್ಕಾರಿ ವಿಮಾ ಇಲಾಖೆ, ದೇವರಾಜು ಅರಸು ಹಿಂದುಳಿದ ವರ್ಗಳ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಅಭಿಲೇಖಾಲಯ, ಒಳಮುಖ ಹೊರಮುಖ ವಿಭಾಗ, ಅಭಿಲೇಖಾಲಯ, ಪ್ರವಾಸೋದ್ಯಮ ಇಲಾಖೆ, ಸರ್ಕಾರಿ ವಿಮಾ ಇಲಾಖೆ ಅಭಿಲೇಖಾಲಯ, ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ ಋಣ ನಿರ್ವಹಣೆ ಇಲಾಖೆ, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ, ಅರಣ್ಯ, ಜೀವಿ ಪರಿಸರ ಇಲಾಖೆ, ಹಿಂದೂ ಧಾರ್ಮಿಕ ದತ್ತಿ ಅಭಿಲೇಖಾಲಯ, ನಿರ್ಮಿತಿ ಕೇಂದ್ರ, ಅರಣ್ಯ ವ್ಯವಸ್ಥಾಪನಾಧಿಕಾರಿಗಳ ಕಚೇರಿ, ಸಭಾಂಗಣ, ದಾಸ್ತಾನು ಕೊಠಡಿಯನ್ನು ಹೊಂದಿದೆ. ನಗರದ ಟ್ರಾಫಿಕ್ ಸಮಸ್ಯೆಗೆ ಮುಕ್ತಿ?ನಗರವನ್ನು ವಿಸ್ತರಿಸುವ ಉದ್ದೇಶ, ನಗರದ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಕಾಣಿಸುವ ದೃಷ್ಟಿಯಿಂದ ಹೊಸ ಜಿಲ್ಲಾಧಿಕಾರಿ ಕಚೇರಿಯ ನಿರ್ಮಾಣಕ್ಕೆ ಮುಂದಡಿ ಇಡಲಾಗಿತ್ತು. ಜಿಲ್ಲಾಧಿಕಾರಿ ಕಚೇರಿ ಸ್ಥಳಾಂತರಗೊಂಡರೂ ಅದೇ ಕಟ್ಟಡಕ್ಕೆ ಬೇರೆ ಇಲಾಖಾ ಕಚೇರಿಗಳು ಆಗಮಿಸುವುದರಿಂದ ದೊಡ್ಡ ವ್ಯತ್ಯಾಸವೇನೂ ಆಗದು ಎಂದು ಹೇಳಲಾಗುತ್ತಿದೆ.ಮಂಗಳೂರೇ ಅನುಕೂಲಕರ!ಈಗಿರುವ ಸ್ಟೇಟ್‌ಬ್ಯಾಂಕ್ ಬಳಿಯ ಜಿಲ್ಲಾಧಿಕಾರಿ ಕಚೇರಿ ಜಿಲ್ಲೆಯ ಜನತೆಗೆ ಎಲ್ಲ ರೀತಿಯಲ್ಲೂ ಅನುಕೂಲಕರವಾಗಿತ್ತು ಎನ್ನುವುದು ಬಹುತೇಕ ನಾಗರಿಕರು ಹಾಗೂ ಅಧಿಕಾರಿಗಳ ಅಭಿಪ್ರಾಯ. ಸಾರ್ವಜನಿಕರು. ಬಸ್ ನಿಲ್ದಾಣ, ರೈಲು ನಿಲ್ದಾಣ, ಸುಂದರ ಆಟದ ಮೈದಾನ, ರಾಷ್ಟ್ರೀಯ ಹೆದ್ದಾರಿ ಹೀಗೆ ಯಾವುದೇ ವಿಷಯವನ್ನು ತೆಗೆದುಕೊಂಡರೂ ಈಗಿನ ಕಚೇರಿಯೇ ಸುಲಭ ಆಗಿತ್ತು. ಜಿಲ್ಲೆಯ ಎಲ್ಲ ಕಡೆಗಳಿಂದ ಬರುವ ಬಸ್‌ಗಳು ಕೂಡ ಕೊನೆಗೆ ಬಂದು ನಿಲ್ಲುವುದು ಈಗಿನ ಜಿಲ್ಲಾಧಿಕಾರಿ ಕಚೇರಿ ಬಳಿಯೇ. ಜನತೆಗೆ ಎಲ್ಲಾ ರೀತಿಯಲ್ಲೂ ಪ್ರಯೋಜನಕಾರಿಯಾಗಿತ್ತು. ಹಾಲಿ ಡಿಸಿ ಕಚೇರಿಗೆ ಬೇರೆ ಇಲಾಖೆ, ಹಳೆ ಕಚೇರಿ ಮ್ಯೂಸಿಯಂ
ಸ್ಟೇಟ್‌ಬ್ಯಾಂಕ್ ಬಳಿ ಇಲ್ಲಿವರೆಗೆ ಕಾರ್ಯನಿರ್ವಹಿಸುತ್ತಿದ್ದ ಡಿಸಿ ಕಚೇರಿಗೆ ಬೇರೆ ಬೇರೆ ಇಲಾಖೆಗಳು ಆಗಮಿಸಲಿದೆ. ಇನ್ನು ಮುಂದೆ ಸಮುದ್ರ ಕಿನಾರೆಯ ಡಿಸಿ ಕಚೇರಿ ಮಂಗಳೂರಲ್ಲಿ ನೆನಪು ಮಾತ್ರ.
ಇದರ ಪಕ್ಕದಲ್ಲೇ ಇರುವ ಹಳೆ ಡಿಸಿ ಕಚೇರಿಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಲು ಜಿಲ್ಲಾಡಳಿತ ಪ್ರಸ್ತಾವನೆ ಸಿದ್ಧಪಡಿಸಿದೆ. ಸುಮಾರು 35 ಕೋಟಿ ರು.ಗಳಲ್ಲಿ ಪ್ರಾಚೀನ ಕಟ್ಟಡವಾಗಿ ಅಭಿವೃದ್ಧಿಪಡಿಸಿ ಉಳಿಸಿಕೊಳ್ಳಲು ಸಿದ್ಧತೆ ನಡೆಸಲಾಗಿದೆ. 1979ರಲ್ಲಿ ಮೇಜರ್ ಮುನ್ರೋ ಮೊದಲ ಕಲೆಕ್ಟರ್ ಆಗಿದ್ದರು. 1994ರಲ್ಲಿ ಹಳೆ ಕಚೇರಿಯಿಂದ ಅಲ್ಲೇ ಹೊಸ ಕಟ್ಟಡಕ್ಕೆ ಡಿಸಿ ಕಚೇರಿ ಸ್ಥಳಾಂತರಗೊಂಡಿತ್ತು. ಈಗ ನಗರದಿಂದಲೇ ದೂರದ ಪಡೀಲಿಗೆ ಡಿಸಿ ಕಚೇರಿ ಸ್ಥಳಾಂತರಗೊಂಡಿದೆ. ಇನ್ನಷ್ಟು ನಗರ ಸಾರಿಗೆ ಸಂಚಾರಪಡೀಲಿಗೆ ಹೊಸ ಡಿಸಿ ಕಚೇರಿ ಕಾರ್ಯಾರಂಭಗೊಂಡ ಬಳಿಕ ಸಮರ್ಪಕ ಸಾರಿಗೆ ಸಂಚಾರವೂ ಏರ್ಪಡಲಿದೆ. ಈಗಾಗಲೇ ಸ್ಟೇಟ್‌ಬ್ಯಾಂಕ್ ಹಾಗೂ ಬಿಜೈನಿಂದ ಕೆಎಸ್ಸಾರ್ಟಿಸಿ, ಖಾಸಗಿ ಬಸ್‌ಗಳು ಪಡೀಲು ಮೂಲಕ ಸಂಚರಿಸುತ್ತಿವೆ. ಕೆಎಸ್ಸಾರ್ಟಿಸಿಯು ಸ್ಟೇಟ್‌ಬ್ಯಾಂಕ್ ಹಾಗೂ ಬಿಜೈನಿಂದ ವಿಶೇಷವಾಗಿ ಪಡೀಲು ವರೆಗೆ ನಿರಂತರವಾಗಿ ನಗರ ಸಾರಿಗೆ ಸಂಚಾರ ಏರ್ಪಡಿಸಲು ಚಿಂತನೆ ನಡೆಸುತ್ತಿದೆ.