ಸಾರಾಂಶ
ಕನ್ನಡಪ್ರಭ ವಾರ್ತೆ ಹಿರಿಯೂರು
ಐಮಂಗಲ ಹೋಬಳಿಯ ಸುಕ್ಷೇತ್ರ ವದ್ಧಿಕೆರೆಯ ಶ್ರೀ ಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಏ.11ರಿಂದ ಆರಂಭಗೊಂಡು ಏ.16 ರವರೆಗೆ ನಡೆಯಲಿದ್ದು ಏ.14 ರಂದು ನಡೆಯುವ ರಥೋತ್ಸವದ ಹಿನ್ನೆಲೆಯಲ್ಲಿ ಜಿಲ್ಲಾ ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನ್ ರವರ ಅಧ್ಯಕ್ಷತೆಯಲ್ಲಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ದೇವಸ್ಥಾನದ ಆವರಣದಲ್ಲಿ ನಡೆಯಿತು.ಜಾತ್ರಾ ಮಹೋತ್ಸವಕ್ಕೆ ಜಿಲ್ಲೆ ಮಾತ್ರವಲ್ಲದೇ ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ಸಾಧ್ಯತೆ ಇರುವ ಕಾರಣ ಬರುವ ಜನರಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ, ಮೂಲ ಭೂತ ಸೌಕರ್ಯಗಳನ್ನು ಒದಗಿಸಬೇಕಾಗುತ್ತದೆ.
ಈ ಬಾರಿ ಎಂದಿಗಿಂತಲೂ ಬಿಸಿಲಿನ ಬೇಗೆ ಹೆಚ್ಚಾಗಿದ್ದು, ಬಂದ ಭಕ್ತರಿಗೆ ತೊಂದರೆಯಾಗದಂತೆ ಗ್ರಾಪಂ ಮತ್ತು ಹಿರಿಯೂರು ನಗರಸಭೆಯ ವತಿಯಿಂದ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆಯನ್ನು ಒದಗಿಸಬೇಕಾಗುತ್ತದೆ. ನೀರಿನ ವ್ಯವಸ್ಥೆಗೆ ಧಾನಿಗಳು ಮತ್ತು ವಿವಿಧ ಇಲಾಖೆಗಳಿಂದ ಟ್ಯಾಂಕರ್‌ಗಳನ್ನು ಸಂಗ್ರಹಿಸಿಕೊಳ್ಳುವಂತೆ ಮತ್ತು ಜಾತ್ರೆಯಲ್ಲಿ ಯಾವುದೇ ರೀತಿಯ ಕೊರತೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕೆಂದು ಎಂಡಿ.ಕೋಟೆ ಗ್ರಾಪಂ ಪಿಡಿಒಗೆ ಉಪ ವಿಭಾಗಾಧಿಕಾರಿಗಳು ಸೂಚಿಸಿದರು.ಆರೋಗ್ಯ ಇಲಾಖೆ ತಮ್ಮ ಸಿಬ್ಬಂದಿಗಳೊಂದಿಗೆ ಸ್ಥಳದಲ್ಲಿ ಎರಡು ತುರ್ತು ಚಿಕಿತ್ಸಾ ವಾಹನದೊಂದಿಗೆ ಉಪಸ್ಥಿತರಿದ್ದು, ಸಾಂಕ್ರಾಮಿಕ ರೋಗ ಮತ್ತು ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಬೇಕು. ಪೊಲೀಸ್ ಸಿಬ್ಬಂದಿ ಸೂಕ್ತ ಬಿಗಿ ಬಂದೋಬಸ್ತ್‌ನ ಕ್ರಮ ಕೈಗೊಂಡು ಜಾತ್ರಾ ಸ್ಥಳದಿಂದ 1 ಕಿಮೀ ದೂರದಲ್ಲಿಯೇ ವಾಹನಗಳಿಗೆ ನಿಲುಗಡೆ ವ್ಯವಸ್ಥೆ ಮಾಡಬೇಕು. ಕಳ್ಳತನ ಹೆಚ್ಚಾಗುತ್ತಿದ್ದು ಅದರ ಬಗ್ಗೆ ಜಾಗೃತಿ ಮೂಡಿಸಿ ಕಾಣೆಯಾದವರ ಬಗ್ಗೆ ಮಾಹಿತಿ ನೀಡಲು ಚೆಕ್‌ಪೋಸ್ಟ್‌ಗಳನ್ನು ತೆರೆಯಬೇಕು. ಪೊಲೀಸ್ ಸಿಬ್ಬಂದಿಗಳೊಂದಿಗೆ ಗೃಹರಕ್ಷಕ ದಳದ ಸಿಬ್ಬಂದಿಗಳ ಸೇವೆಯನ್ನು ಬಳಸಿಕೊಳ್ಳಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯದ ರೀತಿ ನೋಡಿಕೊಳ್ಳಬೇಕು. ರಥೋತ್ಸವ ಸಾಗುವ ದಾರಿಯನ್ನು ಗ್ರಾಪಂ ವತಿಯಿಂದ ಸ್ವಚ್ಛಗೊಳಿಸಬೇಕು. ರಥೋತ್ಸವಕ್ಕೆ ತೊಂದರೆಯಾಗದಂತೆ ಅಂಗಡಿಗಳನ್ನು ಹಾಕಿಕೊಳ್ಳುವಂತೆ ವರ್ತಕರಿಗೆ ಮಾರ್ಗದರ್ಶನ ನೀಡಿ ಎಂದು ಸೂಚಿಸಿದರು.ಕುಡಿಯುವ ನೀರಿಗೆ ವಿದ್ಯುತ್ ಸಮಸ್ಯೆ ಉಂಟಾಗದ ರೀತಿ ಬೆಸ್ಕಾಂ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಮುಂಜಾಗೃತ ಕ್ರಮವಾಗಿ ಹೆಚ್ಚುವರಿಯಾಗಿ ವಿದ್ಯುತ್ ಪರಿವರ್ತಕವನ್ನು ಸಿದ್ಧವಾಗಿಟ್ಟುಕೊಳ್ಳಬೇಕು.
ಜಾತ್ರೆಗೆ ಮೊದಲು ಹಾಗೂ ಜಾತ್ರೆಯ ನಂತರ ಸ್ವಚ್ಛತೆಗೆ ಆದ್ಯತೆ ನೀಡಬೇಕು. ನೀರಿನ ಟ್ಯಾಂಕರ್‌ಗಳನ್ನು ಸ್ವಚ್ಛಗೊಳಿಸುವ ಮೂಲಕ ಶುದ್ಧ ನೀರನ್ನು ಜನರಿಗೆ ನೀಡಬೇಕು. ಪ್ರಾಣಿಬಲಿ ನಿಷೇಧ ಕಾನೂನು ಇರುವುದರಿಂದ ಯಾವುದೇ ಪ್ರಾಣಿ ಹಿಂಸೆ ಮಾಡದಂತೆ ಬ್ಯಾನರ್ ಹಾಕುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು.ಲೋಕೋಪಯೋಗಿ ಇಲಾಖೆಯು ವದ್ಧಿಕೆರೆ ಗ್ರಾಮಕ್ಕೆ ದಾರಿ ಕಲಿಸುವ ನಾಲ್ಕು ದಾರಿಗಳಾದ ಸಲಬೊಮ್ಮನಹಳ್ಳಿ, ಐಮಂಗಲ, ಯರಬಳ್ಳಿ, ಹಾಗೂ ಎಂಡಿ ಕೋಟೆ ರಸ್ತೆಗಳನ್ನು ದುರಸ್ಥಿಗೊಳಿಸಿ ಅಕ್ಕಪಕ್ಕ ಬೆಳೆದಿರುವ ಜಾಲಿ ಗಿಡಗಳನ್ನು ತೆಗೆಸಿ ರಸ್ತೆಯಲ್ಲಿ ಆಗಿರುವ ಗುಂಡಿಗಳನ್ನು ಮುಚ್ಚಿ ರಿಪೇರಿ ಮಾಡಿಸುವ ಮೂಲಕ ಜಾತ್ರೆಗೆ ಸುಗಮ ಸಂಚಾರದ ವ್ಯವಸ್ಥೆ ಮಾಡಬೇಕು ಎಂದರು.
ಈ ವೇಳೆ ತಹಸೀಲ್ದಾರ್ ರಾಜೇಶ್‌ಕುಮಾರ್, ಎಂಡಿ.ಕೋಟೆ ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ ನಾಗರಾಜ್, ಅರಣ್ಯ ಇಲಾಖೆಯ ಶಶಿಧರ್, ಬಿಇಒ ಸಿ.ಎಂ.ತಿಪ್ಪೇಸ್ವಾಮಿ, ಬೆಸ್ಕಾಂ ಎಇಇ ಪೀರ್‌ಸಾಬ್, ಡಾ.ಸಿ.ವಿಜಯ್, ಪಿಎಸ್‌ಐ ಎಂಟಿ.ದೀಪು, ಉಪ ತಹಸೀಲ್ದಾರ್ ಆರ್.ಮಂಜಪ್ಪ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಮೇಶ್, ಗ್ರಾಮಸ್ಥರಾದ ಡಿ.ಚಂದ್ರಣ್ಣ, ಕೆ.ಮಹೇಶ್, ಎನ್.ಮಹೇಶ್, ಶಿವಣ್ಣ, ಕರಿಯಣ್ಣ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು,ಸಿಬ್ಬಂದಿಗಳು ಮತ್ತು ದೇವಸ್ಥಾನ ಸಮಿತಿಯ ಸದಸ್ಯರು ಹಾಜರಿದ್ದರು.