ಸಾರಾಂಶ
ಬುಡ್ಗಜಂಗಮ ಕಾಲನಿಗೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಭೇಟಿ
ಕನ್ನಡಪ್ರಭ ವಾರ್ತೆ ಸಿರುಗುಪ್ಪಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಅಲೆಮಾರಿ ಮಕ್ಕಳು ಶಿಕ್ಷಣದಿಂದ ವಂಚಿತವಾಗದಂತೆ ಸಂಬಂಧಿಸಿದ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಸೂಚಿಸಿದರು.
ತಾಲೂಕಿನ ತೆಕ್ಕಲಕೋಟೆ ಸಿಂಧೋಳ ಕಾಲನಿ ಮತ್ತು 64 ಹಳೆಕೋಟೆ ಗ್ರಾಪಂ ವ್ಯಾಪ್ತಿಯಲ್ಲಿನ ಸಿದ್ದಪ್ಪ ನಗರದ ಬುಡ್ಗಜಂಗಮ ಅಲೆಮಾರಿ ಸಮುದಾಯದ ವಾಸಸ್ಥಳಕ್ಕೆ ಸೋಮವಾರ ರಾತ್ರಿ ಭೇಟಿ ನೀಡಿ ಅಲ್ಲಿನ ಕುಂದು ಕೊರತೆಗಳ ಬಗ್ಗೆ ಪರಿಶೀಲನೆ ನಡೆಸಿ ಮಾತನಾಡಿದರು.ಅಲೆಮಾರಿ ಸಮುದಾಯಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ಸ್ವಂತ ಸೂರಿಲ್ಲದೆ ಜೋಪುಡಿಯಲ್ಲಿ ವಾಸ ಮಾಡುತ್ತಿದ್ದಾರೆ. ಅಗತ್ಯ ಸೌಲಭ್ಯಗಳನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗ್ಯೂ ಇಂದಿಗೂ ಸಾಧ್ಯವಾಗಿಲ್ಲ. ಹೀಗಾಗಬಾರದು, ಕೂಡಲೇ ಅಲೆಮಾರಿ ಸಮುದಾಯಗಳ ಕಲ್ಯಾಣಕ್ಕೆ ಬೇಕಾದ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರಲ್ಲದೆ, ಡಾ. ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆಯ ₹112 ಕೋಟಿ ಅನುದಾನದಲ್ಲಿ ವಸತಿಗಳ ನಿರ್ಮಾಣಕ್ಕೆ ಅರ್ಜಿ ಕರೆದು ವಸತಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬುಡ್ಗಜಂಗಮ ಸಮಾಜದ ತಾಲೂಕು ಅಧ್ಯಕ್ಷ ಬಿ.ಜಂಬಣ್ಣ ಮಾತನಾಡಿ, ಅಲೆಮಾರಿ ಸಮುದಾಯಗಳು ಸೇರಿಕೊಂಡು ಸಿದ್ದಪ್ಪ ನಗರದಲ್ಲಿ ಸುಮಾರು ಎರಡು ಎಕರೆ ಜಮೀನು ಖರೀದಿಸಿ ಹಂಚಿಕೆ ಮಾಡಿಕೊಂಡು ವಾಸ ಮಾಡುತ್ತಿದ್ದೇವೆ. ಆದರೆ, ಇಲ್ಲಿ ಕುಡಿವ ನೀರು, ರಸ್ತೆ, ವಿದ್ಯುತ್ ಸೇರಿದಂತೆ ಯಾವುದೇ ಮೂಲ ಸೌಕರ್ಯಗಳಿಲ್ಲ ಎಂದು ಅಳಲು ತೋಡಿಕೊಂಡರು.ಬುಡ್ಗಜಂಗಮ ಕಾಲನಿಗೆ ಭೇಟಿ ನೀಡುವುದಾಗಿ ವಾರ ಮುಂಚೆ ತಿಳಿಸಿದ್ದಾಗ್ಯೂ ತಾಪಂ ಇಒ ಹಾಗೂ ಗ್ರಾಪಂ ಪಿಡಿಒ ಸ್ಥಳಕ್ಕೆ ಆಗಮಿಸಿಲ್ಲ ಎಂದು ಇಬ್ಬರಿಗೆ ಕರೆ ಮಾಡಿದ ನಿಗಮದ ಅಧ್ಯಕ್ಷೆ ತರಾಟೆಗೆ ತೆಗೆದುಕೊಂಡರು.
ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಬಿ. ಮಲ್ಲಿಕಾರ್ಜುನ, ಸಹಾಯಕ ನಿರ್ದೇಶಕ ಎಂ.ಸಿದ್ದಯ್ಯ, ಗ್ರೇಡ್-2 ತಹಶೀಲ್ದಾರ್ ಸತ್ಯಮ್ಮ, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಬಸವರಾಜ, ಸಿಪಿಐ ಚಂದನ ಗೋಪಾಲ, ಪಿ.ಎಸ್.ಐ ತಾರಬಾಯಿ ಹಾಗೂ ನಗರಸಭೆ ಅಧಿಕಾರಿಗಳು ಇದ್ದರು.