ಸಾರಾಂಶ
ರಸ್ತೆಯಲ್ಲಿ ಖಾಸಗಿ ಆಸ್ಪತ್ರೆಯೊಂದರ ಆಂಬ್ಯುಲೆನ್ಸ್ ಅಡ್ಡಾದಿಡ್ಡಿಯಾಗಿ ಚಲಾಯಿಸಿ ಸರಣಿ ಅಪಘಾತ
ಬೆಂಗಳೂರು : ರಸ್ತೆಯಲ್ಲಿ ಖಾಸಗಿ ಆಸ್ಪತ್ರೆಯೊಂದರ ಆಂಬ್ಯುಲೆನ್ಸ್ ಅಡ್ಡಾದಿಡ್ಡಿಯಾಗಿ ಚಲಾಯಿಸಿ ಸರಣಿ ಅಪಘಾತಕ್ಕೀಡಾದ ಪರಿಣಾಮ ತಳ್ಳುವ ಗಾಡಿ ಹಣ್ಣಿನ ವ್ಯಾಪಾರಿ ಮೃತಪಟ್ಟು, ಆರು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಿದ್ದಾಪುರದ ರಾಘವೇಂದ್ರ ಕಾಲೋನಿಯ ಸಿ.ರಮೇಶ್ (48) ಮೃತ ದುರ್ದೈವಿ. ಈ ಘಟನೆಯಲ್ಲಿ ರಾಘವೇಂದ್ರ ಕಾಲೋನಿಯ ನಾಗರಾಜು, ವಿನಾಯಕ ನಗರದ ಸೋಮಸುಂದರಂ, ಕೆ.ಎಸ್.ಗಾರ್ಡನ್‌ನ ಪ್ರವೀಣ್ ಕುಮಾರ್, ಬ್ರಹ್ಮಾನಂದ ಕುಮಾರ್, ಹಾಗೂ ಹೊಸಕೆರೆಹಳ್ಳಿಯ ಪವನ್ ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಆಂಬ್ಯುಲೆನ್ಸ್, ಆಟೋ, ಸ್ಕೂಟರ್ ಹಾಗೂ ಎರಡು ತಳ್ಳುವ ಗಾಡಿಗಳು ಜಖಂಗೊಂಡಿವೆ.
ಶಾಂತಿನಗರದ ಸಮೀಪ ಆಸ್ಪತ್ರೆಗೆ ರೋಗಿ ಕರೆ ತರಲು ಅವಸರದಲ್ಲಿ ಅತಿವೇಗವಾಗಿ ಬಿಟಿಎಸ್ ರಸ್ತೆಯಲ್ಲಿ ಆಂಬ್ಯುಲೆನ್ಸ್ ತೆರಳುವಾಗ ಗುರುವಾರ ರಾತ್ರಿ ಈ ಸರಣಿ ಅಪಘಾತ ನಡೆದಿದೆ. ಆರೋಪಿ ಆಂಬ್ಯುಲೆನ್ಸ್ ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತ ನಡೆದದ್ದು ಹೇಗೆ?
ಹಲವು ವರ್ಷಗಳಿಂದ ವಿಲ್ಸನ್ ಗಾರ್ಡನ್‌ನ ಬಿಟಿಎಸ್ ರಸ್ತೆಯಲ್ಲಿ ಆರೆ.ಕೆ.ದೋಸೆ ಕ್ಯಾಂಪ್ ಎದುರು ತಳ್ಳುವ ಗಾಡಿಯಲ್ಲಿ ರಮೇಶ್ ಹಣ್ಣು ವ್ಯಾಪಾರ ಮಾಡುತ್ತಿದ್ದರು. ಅಂತೆಯೇ ಗುರುವಾರ ಸಹ ಅವರು ಕಲ್ಲಂಗಡಿ ಮಾರಾಟದಲ್ಲಿ ನಿರತರಾಗಿದ್ದರು. ಅದೇ ವೇಳೆ ವಿಲ್ಸನ್ ಗಾರ್ಡನ್ ಸಮೀಪ ರೋಗಿ ಕರೆತರಲು ಖಾಸಗಿ ಆಸ್ಪತ್ರೆಗೆ ಆಂಬ್ಯುಲೆನ್ಸ್ ತೆರಳುತ್ತಿತ್ತು.
ಶಾಂತಿನಗರದ ಬಸ್ ನಿಲ್ದಾಣ ಕಡೆಯಿಂದ ಬಿಟಿಎಸ್ ರಸ್ತೆಗೆ ಚಾಲಕನ ನಿಯಂತ್ರಣ ತಪ್ಪಿದ ಆಂಬ್ಯುಲೆನ್ಸ್ ಅಡ್ಡಾದಿಡ್ಡಿಯಾಗಿ ಚಲಾಯಿಸಿದೆ. ಆಗ ರಸ್ತೆ ಬದಿಯ ತಳ್ಳುವ ಗಾಡಿಗಳು, ಕಾರು ಹಾಗೂ ಸ್ಕೂಟರ್ ಮಾತ್ರವಲ್ಲದೆ ಪಾದಚಾರಿಗಳಿಗೆ ಸಹ ಗುದ್ದಿಸಿದ್ದಾನೆ. ಮೊದಲು ರಮೇಶ್ ಅವರ ತಳ್ಳುವ ಗಾಡಿಗೆ ಗುದ್ದಿದ್ದಾನೆ. ನಂತರ ಅಲ್ಲೇ ಮಾತನಾಡುತ್ತ ನಿಂತಿದ್ದ ಅವರ ಸ್ನೇಹಿತ ಶಿವರಾಂ ಅವರಿಗೆ ಗುದ್ದಿದ ಆಂಬ್ಯುಲೆನ್ಸ್, ನಂತರ ಆಟೋ ಹಾಗೂ ಆಕ್ಟಿವಾಗೆ ಡಿಕ್ಕಿ ಹೊಡೆದು ಪಾದಚಾರಿ ಸೋಮಸುಂದರಂ ಅವರಿಗೆ ಅಪ್ಪಳಿಸಿ ನಿಂತಿದೆ. ಕೂಡಲೇ ಗಾಯಾಳುಗಳನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ಸಾರ್ವಜನಿಕರು ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ತಳ್ಳುವ ಗಾಡಿ ಹಣ್ಣಿನ ವ್ಯಾಪಾರಿ ರಮೇಶ್ ಕೊನೆಯುಸಿರೆಳೆದಿದ್ದು, ಇನ್ನುಳಿದವರು ಪ್ರಾಣಪಾಯದಿಂದ ಪರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಟೋ ಚಾಲಕ ಪವನ್ ರವರಿಗೆ ಬಲಗೈಗೆ, ಪಾದಾಚಾರಿ ಸೋಮಸುಂದರಂ ರವರಿಗೆ ಎಡಗಾಲಿಗೆ, ಸ್ಕೂಟರ್ ಸವಾರ ಪ್ರವೀಣ್ ಅವರ ಬಲಗಾಲಿಗೆ, ಬ್ರಹ್ಮಾನಂದ ಕುಮಾರ್ ರವರ ಬಲಗಾಲಿನ ಪಾದ ಮತ್ತು ಬೆರಳಿಗೆ ಗಾಯಗಳಾಗಿರುತ್ತವೆ. ಹಾಗೆ ಮೃತನ ಸ್ನೇಹಿತ ಶಿವರಾಮ್ ರವರಿಗೆ ಕೈಗಳಿಗೆ ಮತ್ತು ತಲೆಗೆ ಪೆಟ್ಟಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಚಾಲಕನಿಗೆ ಥಳಿಸಿದ ಸಾರ್ವಜನಿಕರು ಈ ಸರಣಿ ಅಪಘಾತದಿಂದ ಕೆರಳಿದ ಸ್ಥಳೀಯರು, ಘಟನೆ ಬಳಿಕ ವಾಹನ ಬಿಟ್ಟು ಪರಾರಿಯಾಗಲು ಯತ್ನಿಸಿದ್ದ ಆಂಬ್ಯುಲೆನ್ಸ್ ಚಾಲಕನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಷ್ಟರಲ್ಲಿ ಮಾಹಿತಿ ಪಡೆದು ಘಟನಾ ಸ್ಥಳಕ್ಕೆ ತೆರಳಿದ ವಿಲ್ಸನ್ ಗಾರ್ಡನ್ ಸಂಚಾರ ಠಾಣೆ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.
ಆಂಬ್ಯುಲೆನ್ಸ್ ಬ್ರೇಕ್ ಫೇಲ್ ಹಾಕಿದ್ದರಿಂದ ನಿಯಂತ್ರಣ ತಪ್ಪಿ ಈ ಅಪಘಾತವಾಗಿದೆ ಎಂದು ಚಾಲಕ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ. ಆದರೆ ವಾಹನದ ತಾಂತ್ರಿಕ ದೋಷದ ಬಗ್ಗೆ ಸಾರಿಗೆ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ವರದಿ ನೀಡಲಿದ್ದಾರೆ. ಆನಂತರವೇ ಘಟನೆಗೆ ನಿಖರ ಕಾರಣ ಗೊತ್ತಾಗಲಿದೆ.
-ಶಿವಪ್ರಕಾಶ್ ದೇವರಾಜ್, ಡಿಸಿಪಿ, ದಕ್ಷಿಣ ವಿಭಾಗ (ಸಂಚಾರ)