ಗದಗ: ಜಿಲ್ಲೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಕೊರತೆ ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಜಿಲ್ಲೆಯ ವಿವಿಧ ಭಾಗಗಳ ಪೆಟ್ರೋಲ್ ಬಂಕ್‌ಗಳ ಮುಂದೆ ಬೆಳ್ಳಂಬೆಳಗ್ಗೆಯೇ ವಾಹನಗಳು, ಡೀಸೆಲ್ ಕ್ಯಾನ್‌ಗಳ ಸರದಿ ಸಾಲುಗಳು ಕಾಣಿಸಿಕೊಂಡಿದ್ದು, ಇಂಧನಕ್ಕಾಗಿ ಜನರು ಮುಗಿಬಿದ್ದು ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿವೆ.

ಗಜೇಂದ್ರಗಡ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅಭಾವ ಗಂಭೀರ ಮಟ್ಟ ತಲುಪಿದ್ದು, ಹಲವು ಬಂಕ್‌ಗಳಲ್ಲಿ ಇಂಧನ ಸಂಪೂರ್ಣ ಖಾಲಿಯಾಗಿರುವ ಮಾಹಿತಿ ಲಭ್ಯವಾಗಿದೆ. ಕುಷ್ಟಗಿ ರಸ್ತೆಯಲ್ಲಿರುವ ರಾಯಬಾಗಿ ಪೆಟ್ರೋಲ್ ಬಂಕ್‌ನಲ್ಲಿ ಡೀಸೆಲ್ ಪಡೆಯಲು ಗ್ರಾಹಕರು ಗಂಟೆಗಟ್ಟಲೆ ಸಾಲಿನಲ್ಲಿ ನಿಂತಿರುವುದು ಕಂಡುಬಂದಿದೆ. ವಾಹನ ಸವಾರರು ಮಾತ್ರವಲ್ಲದೆ, ರೈತರು ಕೈಯಲ್ಲಿ ಕ್ಯಾನ್ ಹಿಡಿದುಕೊಂಡು ಡೀಸೆಲ್ ಹುಡುಕುತ್ತ ಅಲೆದಾಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಗದಗ ತಾಲೂಕಿನ ಮುಳಗುಂದ ಭಾಗದಲ್ಲಿಯೂ ಡೀಸೆಲ್ ಕೊರತೆಯ ಬಿಸಿ ತಟ್ಟಿದ್ದು, ಕೃಷಿ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಉಂಟಾಗಿದೆ. ಈಗಾಗಲೇ ಮಳೆಗಾಲ ಆರಂಭದ ಹಂತದಲ್ಲಿರುವುದರಿಂದ ರೈತರು ಜಮೀನು ಉಳುಮೆ, ಬಿತ್ತನೆಗೆ ಸಿದ್ಧತೆ, ನೀರಾವರಿ ಪಂಪ್‌ಸೆಟ್‌ಗಳ ಕಾರ್ಯಾಚರಣೆ ಸೇರಿದಂತೆ ಅನೇಕ ಕೃಷಿ ಕಾರ್ಯಗಳಿಗೆ ಡೀಸೆಲ್ ಅವಲಂಬಿಸಿದ್ದಾರೆ. ಆದರೆ ಸಮಯಕ್ಕೆ ಸರಿಯಾಗಿ ಡೀಸೆಲ್ ಸಿಗದೆ ಟ್ರ್ಯಾಕ್ಟರ್, ಟಿಲ್ಲರ್, ಜನರೇಟರ್ ಹಾಗೂ ಪಂಪ್‌ಸೆಟ್‌ಗಳು ಸ್ಥಗಿತಗೊಳ್ಳುವ ಪರಿಸ್ಥಿತಿ ಎದುರಾಗಿದೆ.

ಇಂಧನ ಕೊರತೆಯ ಪರಿಣಾಮ ಸಾರಿಗೆ ವ್ಯವಸ್ಥೆಯ ಮೇಲೂ ಬೀಳತೊಡಗಿದ್ದು, ಸರಕು ಸಾಗಣೆ ವಾಹನಗಳು, ಖಾಸಗಿ ಬಸ್‌ಗಳು ಹಾಗೂ ವಾಣಿಜ್ಯ ವಾಹನಗಳ ಸಂಚಾರಕ್ಕೂ ತೊಂದರೆ ಉಂಟಾಗಿದೆ. ಕೆಲ ಬಂಕ್‌ಗಳಲ್ಲಿ ಸೀಮಿತ ಪ್ರಮಾಣದಲ್ಲಿ ಮಾತ್ರ ಇಂಧನ ವಿತರಣೆ ಮಾಡಲಾಗುತ್ತಿದ್ದು, ಇದರಿಂದ ಜನರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ.


ಕ್ಯಾನ್‌ ಹಿಡಿದು ಸರದಿಯಲ್ಲಿ ನಿಂತ ಗ್ರಾಹಕರು

ಗಜೇಂದ್ರಗಡ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯ ಬಿಸಿ ನಡುವೆಯೇ ಪಟ್ಟಣದಲ್ಲಿ ಡೀಸೆಲ್ ಅಭಾವ ತಲೆದೋರಿದ್ದು, ಕೃಷಿ ಚಟುವಟಿಕೆಗಳಿಗೆ ಮುಂದಾಗಿರುವ ರೈತ ಸಮೂಹ ಸೇರಿ ವಾಹನ ಚಾಲಕರಿಗೆ ಸೋಮವಾರ ಬೆಳಗ್ಗೆಯೇ ಪೆಟ್ರೋಲ್ ಬಂಕ್ ಎದುರು ಡೀಸೆಲ್‌ಗಾಗಿ ಕ್ಯಾನ್‌ಗಳನ್ನು ಹಿಡಿದು ನಿಂತಿರುವ ದೃಶ್ಯ ಕಂಡುಬಂದಿತು.ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಪೆಟ್ರೋಲ್, ಡೀಸೆಲ್ ಹಾಗೂ ಎಲ್‌ಪಿಜಿ ಬೆಲೆ ಏರಿಕೆಯ ಬಿಸಿಯಿಂದಾಗಿ ಕಂಗೆಟ್ಟಿದ್ದ ತಾಲೂಕಿನ ಜನೆತೆಗೆ ಪಟ್ಟಣದ ೭ಕ್ಕೂ ಅಧಿಕ ಪೆಟ್ರೋಲ್ ಬಂಕ್‌ಗಳಲ್ಲಿ ಡೀಸೆಲ್ ಅಭಾವವಿದೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆ ರೈತರು ಹಾಗೂ ವಾಹನ ಸವಾರರು ಕ್ಯಾನ್‌ಗಳನ್ನು ಹಿಡಿದು ಪೆಟ್ರೋಲ್ ಬಂಕ್‌ಗಳಲ್ಲಿ ಸರದಿಗೆ ನಿಲ್ಲುವಂತಾಗಿತ್ತು.ಪಟ್ಟಣದ ಕುಷ್ಟಗಿ ರಸ್ತೆಯ ಈದ್ಗಾ ಮೈದಾನದ ಬಳಿಯ ಪೆಟ್ರೋಲ್ ಬಂಕ್, ಬಿಎಸ್‌ಎಸ್ ಕಾಲೇಜಿನ ಎದುರಿನ ಪೆಟ್ರೋಲ್ ಬಂಕ್‌ಗಳಲ್ಲಿ ಮಧ್ಯಾಹ್ನದ ವೇಳೆಗೆ ಡೀಸೆಲ್ ಖಾಯಿಯಾಗಿತ್ತು. ಇತ್ತ ಕುಷ್ಟಗಿ ರಸ್ತೆಯ ಸಾಯಿಬಾಬಾ ಗುಡಿಯ ಹತ್ತಿರದ ಮತ್ತು ಎಪಿಎಂಸಿ, ರೋಣ ರಸ್ತೆಯ ಪುರ್ತಗೇರಿ ಕ್ರಾಸ್ ಬಳಿಯ ಪೆಟ್ರೋಲ್ ಬಂಕ್‌ಗಳಲ್ಲಿ ಡಿಸೇಲ್ ಅಭಾವದ ಸಮಸ್ಯೆ ಎದುರಾಗಿದ್ದು, ಸಂಜೆ ವೇಳೆಗೆ ಖಾಲಿಯಾಗಲಿದೆ. ಲೋಡ್ ಬಂದರೆ ಮಾತ್ರ ಡೀಸೆಲ್ ತರಲು, ಇಲ್ಲದಿದ್ದರೆ ಇಲ್ಲ ಎಂದು ಪೆಟ್ರೋಲ್ ಬಂಕ್ ಸಿಬ್ಬಂದಿ ಹೇಳುತ್ತಿದ್ದಾರೆ.