ಸಾರಾಂಶ
ಯಶಸ್ವಿ ಕಲಾವೃಂದ ಸಂಸ್ಥೆಯ ಬೆಳ್ಳಿಹಬ್ಬ । ವಿಶ್ರಾಂತ ಕಲಾವಿದರಿಂದ ಗಾನ ವೈಭವ
ಕನ್ನಡಪ್ರಭ ವಾರ್ತೆ ಕುಂದಾಪುರಯಕ್ಷಗಾನದ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ಸಂಸ್ಥೆಗಳಿಗೆ ಯಕ್ಷಗಾನ ಅಕಾಡೆಮಿ ಸಂಪೂರ್ಣ ಸಹಕಾರ ನೀಡಲಿದೆ ಎಂದು ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.ಅವರು ಭಾನುವಾರ ಇಲ್ಲಿನ ತೆಕ್ಕಟ್ಟೆಯ ಹಯಗ್ರೀವ ಸಭಾಂಗಣದಲ್ಲಿ ಯಶಸ್ವಿ ಕಲಾವೃಂದ ಸಂಸ್ಥೆಯ ಬೆಳ್ಳಿಹಬ್ಬದ ಸಂಭ್ರಮಾಚರಣೆ ಪ್ರಯುಕ್ತ ೧೦೦ನೇ ಕಾರ್ಯಕ್ರಮವಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಕಾರದಲ್ಲಿ ಹಮ್ಮಿಕೊಂಡ ವಿಶ್ರಾಂತ ಕಲಾವಿದರಿಂದ ಗಾನ ವೈಭವ, ದೊಂದಿ ಹಾಗೂ ಮಂದ ಬೆಳಕಿನ ಯಕ್ಷಗಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಯಶಸ್ವಿ ಕಲಾವೃಂದ ಬೆಳ್ಳಿ ಹಬ್ಬದ ಪ್ರಯುಕ್ತ ಇದೀಗ ೧೦೦ನೇ ಕಾರ್ಯಕ್ರಮವನ್ನು ಸಂಘಟಿಸಿರುವುದು ದೊಡ್ಡ ಸಾಧನೆಯಾಗಿದೆ. ಅಕಾಡೆಮಿಯಿಂದ ಈ ಸಂಸ್ಥೆಗೆ ಸಿಗುವ ಎಲ್ಲ ಸಹಕಾರವನ್ನು ನೀಡಲಾಗುವುದು. ಯಕ್ಷಗಾನದ ಉಳಿವು, ಬೆಳವಣಿಗೆಗೆ ಶ್ರಮಿಸುತ್ತಿರುವ ಸಂಸ್ಥೆಗಳು, ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸುವ ಕಾರ್ಯಕ್ಕೆ ಅಕಾಡೆಮಿ ಮುಂದಾಗಿದೆ ಎಂದು ತಿಳಿಸಿದರು.ಇದೇ ರೀತಿ ಉಡುಪಿಯ ಯಕ್ಷಗಾನ ಕಲಾರಂಗವು ಪ್ರೌಢಶಾಲೆಗಳಲ್ಲಿ ಯಕ್ಷ ಶಿಕ್ಷಣವನ್ನು ಕಳೆದ ೧೭ ವರ್ಷಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಇಂದು ೯೦ಕ್ಕೂ ಅಧಿಕ ಶಾಲೆಗಳಲ್ಲಿ ೩,೦೦೦ಕ್ಕೂ ಅಧಿಕ ಮಕ್ಕಳು ಯಕ್ಷ ಶಿಕ್ಷಣವನ್ನು ಪಡೆಯುತ್ತಿದ್ದಾರೆ ಎಂದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ಗುತ್ತಿಗೆದಾರ ದಿನೇಶ್ ಹೆಗ್ಡೆ ಮೊಳಹಳ್ಳಿ ಮಾತನಾಡಿ, ಕಳೆದ ೨೫ ವರ್ಷಗಳಿಂದ ಯಕ್ಷಗಾನ, ನಾಟಕ, ನೃತ್ಯ ಮೊದಲಾದ ಹಲವಾರು ಕಾರ್ಯಕ್ರಮಗಳನ್ನು ನಡೆಸಿ, ಕಲಾವಿದರನ್ನು ಹುಟ್ಟು ಹಾಕುವ ಮೂಲಕ ಯಶಸ್ವಿ ಕಲಾವೃಂದವಾಗಿ ಮೂಡಿಬಂದಿರುವುದು ಶ್ಲಾಘನೀಯ ಎಂದರು.ಕಾರ್ಯಕ್ರಮದಲ್ಲಿ ಇತಿಹಾಸ ತಜ್ಞ ಡಾ.ಬಿ.ಜಗದೀಶ್ ಶೆಟ್ಟಿ, ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್, ಯಶಸ್ವಿ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ, ಕೇಂದ್ರದ ಯಕ್ಷಗಾನ ಗುರು ಲಂಬೋದರ ಹೆಗಡೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿಶ್ರಾಂತ ಕಲಾವಿದರಿಂದ ನಡೆದ ಗಾನ ವೈಭವ ಕಾರ್ಯಕ್ರಮದಲ್ಲಿ ಹಿರಿಯ ಭಾಗವತರಾದ ಪ್ರಭಾಕರ ಆಚಾರ್ಯ ಹೆಮ್ಮಾಡಿ, ಕೃಷ್ಣಯ್ಯ ಆಚಾರ್ಯ ಬಿದ್ಕಲ್‌ಕಟ್ಟೆ ಹಾಗೂ ಬಸ್ರೂರು ವಿಠಲ ಆಚಾರ್ಯ ಗಾನಸುಧೆಯನ್ನು ಹರಿಸಿದರು. ಮದ್ದಳೆಯಲ್ಲಿ ಕೇಂದ್ರದ ಪ್ರಾಚಾರ್ಯ ದೇವದಾಸ ರಾವ್ ಸಹಕರಿಸಿದರು. ನಂತರ ವಾಲಿವಧೆ ಯಕ್ಷಗಾನ ಪ್ರಸ್ತುತಿಗೊಂಡಿತು.