ಸಾರಾಂಶ
ಹುಣಸಗಿ ಪಟ್ಟಣದ ಹಾಲು ಶೀತಲೀಕರಣ ಘಟಕ (ತಹಸೀಲ್ ಆವರಣ) ಸಭಾಂಗಣದಲ್ಲಿ ವಿಶೇಷ ತರಬೇತಿ ಸಮಾರಂಭವನ್ನು ಶಾಸಕ ರಾಜಾ ವೇಣುಗೋಪಾಲ ನಾಯಕ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಹುಣಸಗಿ
ಹಾಲು ಉತ್ಪಾದಕರಿಗೆ ಹಾಗೂ ಸಹಕಾರ ಸಂಘಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ನೂತನ ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.ಪಟ್ಟಣದ ಹಾಲು ಶೀಥಲೀಕರಣ ಘಟಕ(ತಹಸೀಲ್ ಆವರಣ) ಸಭಾಂಗಣದಲ್ಲಿ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಜಿಲ್ಲಾ ಸಹಕಾರ ಒಕ್ಕೂಟ (ಯೂನಿಯನ್), ಸಹಕಾರ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ಸುರಪುರ ಮತ್ತು ಹುಣಸಗಿ ಹಾಲು ಉತ್ಪಾದಕರ ಮತ್ತು ನೀರು ಬಳಕೆದಾರರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಣೆ ಅಧಿಕಾರಿಗಳಿಗೆ ಜಿಲ್ಲಾ ಮಟ್ಟದ ವಿಶೇಷ ತರಬೇತಿ ಕಾರ್ಯಗಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ರೈತ, ಹೈನುಗಾರರ ಉತ್ತೇಜನಕ್ಕೆ ಹಾಗೂ ಕೆಎಂಎಫ್ ಮತ್ತು ಸಹಕಾರಿ ಸಂಘಗಳ ಶ್ರೇಯೋಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಹೀಗಾಗಿ ಸಂಘಗಳಿಗೆ ಸಿಗಬೇಕಾದ ಸೌಲಭ್ಯಗಳನ್ನು ದೊರಕಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ನಾಫೆಡ್ ಉಪಾಧ್ಯಕ್ಷ ಸಿದ್ದಪ್ಪ ಹೊಟ್ಟಿ ಮಾತನಾಡಿ, ಹೈನುಗಾರಿಕೆಯಲ್ಲಿ ಅಭ್ಯುದಯ ಸಾಧಿಸಲು ಕೃಷಿ ವ್ಯವಸಾಯ ರೈತರಿಗೆ ಅಗತ್ಯವಾಗಿದೆ. ಸ್ವಾವಲಂಬಿ ಜೀವನಕ್ಕೆ ಹೈನುಗಾರಿಕೆ ಅತ್ಯುತ್ತಮ ವ್ಯವಸಾಯ ಎಂದು ತಿಳಿಸಿದರು.ಜಿಲ್ಲಾ ಸಹಕಾರಿ ಒಕ್ಕೂಟ (ಯೂನಿಯನ್) ಅಧ್ಯಕ್ಷ ನಾರಾಯಣರಾವ ಅಧ್ಯಕ್ಷತೆ ವಹಿಸಿದ್ದರು. ರಾಜಶೇಖರಗೌಡ ವಜ್ಜಲ್, ಕೆಪಿಸಿಸಿ ಸದಸ್ಯ ಸಿದ್ದಣ್ಣ ಸಾಹುಕಾರ ಮಲಗಲದಿನ್ನಿ, ಮಲ್ಲಣ್ಣ ಸಾಹು ಮಧೋಳ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಪಾಟೀಲ್, ಚನ್ನಯ್ಯಸ್ವಾಮಿ, ಆರ್.ಎಂ. ರೇವಡಿ, ಪ್ರಕಾಶ ಅಂಗಡಿ ಕನ್ನಳ್ಳಿ, ನಿಂಗರಾಜ ಬಾಚಿಮಟ್ಟಿ, ರವಿಚಂದ್ರ ಸಾಹುಕಾರ ಆಲ್ದಾಳ, ಬಸವರಾಜ ಸಜ್ಜನ್ ಸೇರಿದಂತೆ ಇತರರಿದ್ದರು.