ವಿದ್ಯಾರ್ಥಿಗಳಿಗೆ ಖಗೋಳ ವಿಜ್ಞಾನ ಹಾಗೂ ಅಂತರಿಕ್ಷದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಹುಬ್ಬಳ್ಳಿಯಲ್ಲಿ ಪೂರ್ಣ ಪ್ರಮಾಣದ ತಾರಾಲಯ ಅವಶ್ಯವಿದ್ದು, ಒಂದು ವರ್ಷದೊಳಗೆ ಆ ಕನಸು ನನಸಾಗಲಿದೆ.

ಹುಬ್ಬಳ್ಳಿ:

ವಿದ್ಯಾರ್ಥಿಗಳಿಗೆ ಖಗೋಳ ವಿಜ್ಞಾನ ಹಾಗೂ ಅಂತರಿಕ್ಷದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಹುಬ್ಬಳ್ಳಿಯಲ್ಲಿ ಪೂರ್ಣ ಪ್ರಮಾಣದ ತಾರಾಲಯ ಅವಶ್ಯವಿದ್ದು, ಒಂದು ವರ್ಷದೊಳಗೆ ಆ ಕನಸು ನನಸಾಗಲಿದೆ. ಈಗಾಗಲೇ ಈ ಕುರಿತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಜತೆ ಸಹ ಚರ್ಚಿಸಿರುವುದಾಗಿ ಸ್ವರ್ಣಾ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಹೇಳಿದರು.

ನಗರದ ಹಿಮಾಲಯನ್ ಸ್ಪೇಸ್ ಸೆಂಟರ್‌ನಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ವಿಸ್ತೃತ ಸ್ಪೇಸ್ ಲ್ಯಾಬ್ ಉದ್ಘಾಟಿಸಿ ಮತ್ತು ಪೋರ್ಟಬಲ್ ಪ್ಲಾನೆಟೇರಿಯಂ ಡೋಮ್ ಅನಾವರಣಗೊಳಿಸಿ ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಮತ್ತು ಆಂತರಿಕ್ಷ ಶಿಕ್ಷಣದ ಹೆಚ್ಚಿನ ಆಸಕ್ತಿ ಮೂಡಿಸುತ್ತಿರುವ ಹಿಮಾಲಯನ್ ಸ್ಪೇಸ್ ಸೆಂಟರ್ ಕಾರ್ಯ ಶ್ಲಾಘನೀಯ. ಮುಂಬರುವ ದಿನಗಳಲ್ಲಿ ಜಾಗತಿಕ ತಾಪಮಾನ ಇನ್ನಷ್ಟು ಹೆಚ್ಚಲಿದ್ದು, ಎಲ್ಲ ವಿದ್ಯಾರ್ಥಿಗಳು ಪರಿಸರ ಉಳಿಸುವ ಯತ್ನ ಮಾಡುವಂತೆ ಸಲಹೆ ನೀಡಿದರು.

ಪೋರ್ಟಬಲ್ ಪ್ಲಾನೆಟೇರಿಯಂ ಮೂಲಕ ಖಗೋಳ ವಿಜ್ಞಾನ ಪ್ರದರ್ಶನ ಹಾಗೂ ಅಂತರೀಕ್ಷ ಅನ್ವೇಷಣೆಯ ಅನುಭವಗಳನ್ನು ತಲುಪಿಸುವ ಉದ್ದೇಶ ಹೊಂದಿದ್ದು, ಇದು ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.

ಇದೇ ಸಂದರ್ಭದಲ್ಲಿ ವಿಜ್ಞಾನ ಶಿಕ್ಷಣ ಪ್ರೇರೇಪಿಸುತ್ತಿರುವ ವಿವಿಧ ಶಾಲೆಗಳ ವಿಜ್ಞಾನ ಶಿಕ್ಷಕರಾದ ಮಮತಾ ಗೋಂಡ್ಕರ್, ವಾಣಿ ಡಿ, ರಾಜೇಶ್ವರಿ ಶೀಗಿಹಳ್ಳಿಮಠ, ಗೀತಾಂಜಲಿ ಲೋಖಂಡೆ ಹಾಗೂ ಲಿಂಗರಾಜ ರಾಮಾಪುರ ಅವರಿಗೆ “ಸ್ಟೆಲ್ಲರ್ ಮೆಂಟರ್ ಪ್ರಶಸ್ತಿ” ಪ್ರದಾನ ಮಾಡಲಾಯಿತು.

ಅತಿಥಿಗಳಾಗಿ ಮುಖಂಡ ಎಚ್.ಎಸ್. ರೂಗಿ, ಸಂಸ್ಥೆಯ ಗ್ಲೋಬಲ್ ಡೈರೆಕ್ಟರ್ ಶ್ರಿದೇವಿ ರೂಗಿ, ಸಂಸ್ಥೆಯ ಸಹ ಸ್ಥಾಪಕ ವೀರೇಶ ಪಾಟೀಲ್ ಸೇರಿದಂತೆ ಹಲವರಿದ್ದರು.