ಜಿಲ್ಲೆಯಲ್ಲಿ ಸಂಭ್ರಮದ ಭೂಮಿ ಹುಣ್ಣಿಮೆ ಹಬ್ಬ

| Published : Oct 18 2024, 12:11 AM IST / Updated: Oct 18 2024, 12:12 AM IST

ಜಿಲ್ಲೆಯಲ್ಲಿ ಸಂಭ್ರಮದ ಭೂಮಿ ಹುಣ್ಣಿಮೆ ಹಬ್ಬ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ರೈತಾಪಿ ವರ್ಗ ಭೂಮಿ ಹುಣ್ಣಿಮೆ ಹಬ್ಬವನ್ನು ಗುರುವಾರ ಸಡಗರ ಸಂಭ್ರಮದಿಂದ ಆಚರಿಸಿದರು.

ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ರೈತಾಪಿ ವರ್ಗ ಭೂಮಿ ಹುಣ್ಣಿಮೆ ಹಬ್ಬವನ್ನು ಗುರುವಾರ ಸಡಗರ ಸಂಭ್ರಮದಿಂದ ಆಚರಿಸಿದರು.

ಜಿಲ್ಲಾದಾದ್ಯಂತ ಗುರುವಾರ ಹೊಲ-ಗದ್ದೆಗಳು ಮತ್ತು ತೋಟಗಳಲ್ಲಿ ಭೂಮಿ ಹುಣ್ಣಿಮೆ ಸಡಗರ. ಭೂ ತಾಯಿಗೆ ಪೂಜೆ ಮಾಡಿ ಚರಗ ಚೆಲ್ಲುವ ಭೂಮಿ ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ವರ್ಷ ವಿಡೀ ಕಷ್ಟ ಪಟ್ಟು ಬೆಳೆದ ಫಲಸನ್ನು ಪೂಜೆ ಮಾಡಿ, ಹಸಿರು ಸೀರೆಯುಟ್ಟ ಭೂ ತಾಯಿಯನ್ನು ಆರಾಧಿಸುವ ಶುಭ ಘಳಿಗೆ. ಮುಂಗಾರು ಬೆಳೆಗಳಿಂದ ಮಡಿಲು ತುಂಬಿಕೊಂಡು ಎಲ್ಲಿ ನೋಡಿದರಲ್ಲಿ ಹಚ್ಚ ಹಸಿರಾಗಿ ಕಾಣುವಂಥ ಹೊಲಗಳಲ್ಲಿ ಫಸಲುಗಳೆಲ್ಲ ಕೊಯ್ದಿಗೆ ಬಂದಿರುವ ಈ ಹೊತ್ತಿನಲ್ಲಿ ಭೂಮಿತಾಯಿಗೆ ಬಾಗಿನ ಅರ್ಪಣೆ, ಉಡಿ ತುಂಬುವುದು, ಚರಗ ಚೆಲ್ಲಿ ಭಕ್ತಿ ಸಮರ್ಪಿಸುವುದು ಮಲೆನಾಡಿನಲ್ಲಿ ನಡೆಯುವ ವಿಶಿಷ್ಟ ಸಂಪ್ರದಾಯ.

ಭೂ ತಾಯಿ ಈ ಸಮಯದಲ್ಲಿ ಗರ್ಭಿಣಿಯಂತೆ ಬೆಳೆಗಳಿಂದ ಮೈ ತುಂಬಿಕೊಂಡಿರುತ್ತಾಳೆ. ಹೀಗಾಗಿ ರೈತರು ಭೂ ತಾಯಿಗೆ ಗರ್ಭಿಣಿಯ ಸ್ಥಾನದಲ್ಲಿಟ್ಟು, ಆಕೆಗೆ ಸೀಮಂತದ ಸಂಭ್ರಮದಂತೆ ಪೂಜೆ ಸಲ್ಲಿಸುತ್ತಾರೆ.

ಭೂಮಿಯಲ್ಲಿ ಉತ್ತಿ ಬಿತ್ತಿದ ಬೆಳೆಗಳು ಕಾಳು ಕಟ್ಟುವ ಸಮಯ ಇದಾಗಿದ್ದು, ಭೂ ತಾಯಿ ಗರ್ಭಿಣಿಯೆಂಬ ನಂಬಿಕೆಯಿಂದ ಅವಳ ಬಯಕೆಗೆ ಅನುಗುಣವಾಗಿ ಉಡಿ ತುಂಬುತ್ತಾರೆ.

ಭೂಮಿ ಹುಣ್ಣಿಮೆ ಮಲೆನಾಡಿನ ರೈತರ ಪಾಲಿಗೆ ಸಂಭ್ರಮದ ಹಬ್ಬ. ಶಿವಮೊಗ್ಗ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ಭೂಮಿ ಹುಣ್ಣಿಮೆ ಹಬ್ಬ ಹೆಚ್ಚು ಪ್ರಚಲಿತದಲ್ಲಿದೆ. ಅದರಲ್ಲೂ ಶಿವಮೊಗ್ಗ ಜಿಲ್ಲೆಯಲ್ಲಿ ಈಡಿಗ (ದೀವರು) ಸಮುದಾಯದಲ್ಲಿ ಈ ಸಂಪ್ರದಾಯ ವಿಶಿಷ್ಟವಾಗಿದೆ. ಈ ಸಂದರ್ಭದಲ್ಲಿ ಭೂ ತಾಯಿ ಗರ್ಭಿಣಿ ಎಂಬ ನಂಬಿಕೆಯಲ್ಲಿ ರೈತಾಪಿ ವರ್ಗ ಪುರಾತನ ಕಾಲದಿಂದಲೂ ಭೂಮಿ ಹುಣ್ಣಿಮೆ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಭೂಮಿ ತಾಯಿಗೆ ಅಂತಲೇ ಬಗೆ ಬಗೆಯ ಅಡುಗೆಗಳನ್ನು ಮಾಡುತ್ತಾರೆ. ಅವುಗಳನ್ನು ಚಿತ್ತಾರದಿಂದ ಕೂಡಿದ ಬೆತ್ತ ಅಥವಾ ಬಿದಿರಿನ ಬುಟ್ಟಿಯಲ್ಲಿ ಮನೆಯಿಂದ ತುಂಬಿಕೊಂಡು ಪೂಜೆ ಮಾಡುವ ಸ್ಥಳಕ್ಕೆ ಮನೆಯ ಯಜಮಾನ ತಲೆಯ ಮೇಲೆ ಹೊತ್ತು ಕೊಂಡೊಯ್ಯುವುದು ಸಂಪ್ರದಾಯ.ಕೆಲವರು ಭತ್ತದ ಗದ್ದೆಯಲ್ಲಿ ಭತ್ತದ ಗಿಡಗಳಿಗೆ ಪೂಜೆ ಮಾಡಿದರೆ, ಅಡಿಕೆ ತೋಟ ಇರುವವರು ಅಡಿಕೆ ಮರಕ್ಕೆ ಸೀರೆಯನ್ನು ಉಡಿಸಿ, ಆಭರಣಗಳನ್ನು ಧರಿಸಿ ಶೃಂಗಾರ ಮಾಡಿದರು. ಕುಟುಂಬಸ್ಥರೆಲ್ಲ ಸೇರಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಬಳಿಕ ದೇವರುಗಳಿಗೆ ಹಾಗೂ ಭೂಮಿ ತಾಯಿಗೆ ಬಗೆ ಬಗೆಯ ಅಡುಗೆಗಳನ್ನು ನೈವೇದ್ಯ ಮಾಡಿ ಒಂದು ಎಡೆಯನ್ನು ಗದ್ದೆಯಲ್ಲಿ ಇಟ್ಟು, ಭೂಮಿ ತಾಯಿಯ ಬಳಿ ಉತ್ತಮ ಫಸಲನ್ನು ನೀಡಿ ನಮ್ಮ ಕುಟುಂಬಕ್ಕೆ ಒಳ್ಳೆಯದನ್ನು ಮಾಡಲಿ ಎಂದು ಬೇಡಿಕೊಳ್ಳುತ್ತಾರೆ.ಭೂಮಣ್ಣಿ ಬುಟ್ಟಿ ತಯಾರಿ ವಿಧಾನ: ಬುಟ್ಟಿಗೆ ಸಗಣಿ, ಕೆಮ್ಮಣ್ಣು ಹಚ್ಚಿ ನಂತರ ಅದರ ಮೇಲೆ ಅಕ್ಕಿ ಹಿಟ್ಟಿನಲ್ಲಿ ಹಸೆ ಚಿತ್ತಾರವನ್ನು ಬಿಡಿಸಲಾಗುತ್ತದೆ. ಗೊಣಬೆ, ಭತ್ತದ ಸಸಿ ಮಡಿ, ಬುಟ್ಟಿಯನ್ನು ಹೊತ್ತೊಯ್ಯುತ್ತಿರುವ ಚಿತ್ರ ಸೇರಿದಂತೆ ಹಲವು ಚಿತ್ರಗಳು ಚಿತ್ತಾರಗಳಾಗಿ ಮೂಡಿಬರುತ್ತವೆ.

ಹಬ್ಬದ ಹಿಂದಿನ ದಿನ ರಾತ್ರಿ ತಮ್ಮ ಹಿತ್ತಲಲ್ಲಿ ಬೆಳೆದ ಹಿರೇಕಾಯಿ, ಕುಂಬಳಕಾಯಿ, ಬದನೆಕಾಯಿ ಸೇರಿದಂತೆ ಮೊದಲಾದ ತರಕಾರಿಗಳನ್ನು ಹೆಚ್ಚಿ ಚರಗ ತಯಾರಿಸಲಾಗುತ್ತದೆ. ಹೀಗೆ ತಯಾರಿಸಲಾದ ಚರಗವನ್ನು ಮುಂಜಾನೆಯ ನಸುಕಿನಲ್ಲೆ ಸಣ್ಣ ಬುಟ್ಟಿಯಲ್ಲಿ ಹೊತ್ತು ತೆಗೆದುಕೊಂಡು ಹೋಗಿ ಕೃಷಿ ಭೂಮಿಗೆ ಬೀರಲಾಗುತ್ತದೆ.

ಭತ್ತದ ಪೈರಿಗೆ ಹೆಣ್ಣುಮಕ್ಕಳು ತಮ್ಮ ತಾಳಿ ಸರವನ್ನೇ ಬಿಚ್ಚಿ ತೋರಣವಾಗಿ ಕಟ್ಟಿ ಪೂಜೆ ಸಲ್ಲಿಸುವ ಅಪರೂಪದ ಸಂಪ್ರದಾಯ ಈ ಸಂದರ್ಭದಲ್ಲಿ ನಡೆಯುತ್ತದೆ. ನಂತರ ಭತ್ತದ ಪೈರಿಗೆ ಪೂಜೆ ಸಲ್ಲಿಸಿದ ತರುವಾಯ ಆಹಾರದ ಎಡೆಯನ್ನು ಮಾಡಿ ಕಾಗೆಗೆ ನೀಡುತ್ತಾರೆ.

ಈ ಸಂಪ್ರದಾಯಕ್ಕೆ ಕಾರಣವೆಂದರೆ, ನಿಧನರಾದ ಕುಟುಂಬದ ಹಿರಿಯರು ಬಂದು ಈ ಆಹಾರ ಸ್ವೀಕರಿಸುತ್ತಾರೆ ಎಂಬ ನಂಬಿಕೆ ಬೇರೂರಿರುವುದು. ಇಂತಹ ಪದ್ಧತಿಯನ್ನು ಕಾಗೆಗೆ ಕರೆಯುವುದು, ಗೂಳಿ ಕರೆಯುವುದು ಎನ್ನಲಾಗುತ್ತದೆ. ಸಾಮಾನ್ಯವಾಗಿ ರೈತರು ಬೆಳೆದ ಬೆಳೆಯನ್ನು ಇಲಿಗಳು ನಾಶ ಮಾಡುವುದರಿಂದ ಅದನ್ನು ರೈತರ ಶತ್ರು ಎಂದೇ ಪರಿಗಣಿಸಲಾಗುತ್ತದೆ.